ಬಿ. ಶೇಖರ್ ಗೋಪಿನಾಥಂಕನ್ನಡಪ್ರಭ ವಾರ್ತೆ ಮೈಸೂರುನಾಡಹಬ್ಬ ಮೈಸೂರು ದಸರಾ ಗಜಪಡೆಯ ಗಜರಾಜ ಪ್ರಶಾಂತ ಆನೆಯು 2026ನೇ ಜಂಬೂಸವಾರಿಯಲ್ಲಿ 750 ಕೆ.ಜಿ. ಚಿನ್ನದ ಅಂಬಾರಿಯನ್ನು ಇದೇ ಮೊದಲ ಬಾರಿಗೆ ಹೊರುವ ಮೂಲಕ ಯಶಸ್ವಿಯಾಯಿತು.ದಸರಾ ಮಹೋತ್ಸವದ ವಿಜಯದಶಮಿ ಮೆರವಣಿಗೆಯಲ್ಲಿ 54 ವರ್ಷದ ಪ್ರಶಾಂತ ಆನೆಯು ಮೊದಲ ಬಾರಿ ಚಿನ್ನದ ಅಂಬಾರಿ ಹೊತ್ತು ರಾಜಮಾರ್ಗದಲ್ಲಿ ಲಕ್ಷಾಂತರ ಜನರ ನಡುವೆ ಶಾಂತವಾಗಿ ಗಜ ಗಾಂಭೀರ್ಯದ ಹೆಜ್ಜೆ ಹಾಕುವ ಮೂಲಕ ಸೈ ಎನಿಸಿಕೊಂಡಿತು.ಮೈಸೂರು ಅರಮನೆಯಿಂದ ಬನ್ನಿಮಂಟಪದವರೆಗೆ 5 ಕಿ.ಮೀ. ದೂರವನ್ನು 750 ಕೆ.ಜಿ. ಚಿನ್ನದ ಅಂಬಾರಿಯನ್ನು 2 ಗಂಟೆ ಅವಧಿಯಲ್ಲಿ ನಿರಾಸದಾಯಕವಾಗಿ ಹೊತ್ತು ಸಾಗುವ ಮೂಲಕ ತನ್ನ ಭುಜಬಲದ ಪರಾಕ್ರಮವನ್ನು ಪ್ರಶಾಂತ ಸಾಬೀತುಪಡಿಸಿದೆ. ಆ ಮೂಲಕ ಅಂಬಾರಿ ಆನೆಯಾಗಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿತು.ವಿಜಯದಶಮಿ ಮೆರವಣಿಗೆಯಲ್ಲಿ ನಾಡದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿ ಇರುವ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ತಂದ ಪ್ರಶಾಂತ ಆನೆಯು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಪುಷ್ಪಾರ್ಚನೆ ಮಾಡಿಸಿಕೊಂಡಿತು. ನಂತರ ಕುಮ್ಕಿ ಆನೆಗಳಾದ ಕಾವೇರಿ ಮತ್ತು ರೂಪಾ ಜೊತೆಗೆ ರಾಜಮಾರ್ಗದಲ್ಲಿ ಲಕ್ಷಾಂತರ ಜನರ ನಡುವೆ ರಾಜಗಾಂಭೀರ್ಯದ ಹೆಜ್ಜೆ ಹಾಕುವ ಮೂಲಕ ಜಂಬೂಸವಾರಿಯನ್ನು ವಿಜೃಂಭಣೆಗೊಳಿಸಿತು.ಚಿನ್ನದ ಅಂಬಾರಿ ಹೊತ್ತು ಪ್ರಶಾಂತ ಆನೆಯು ಗಂಭೀರವಾಗಿ ಸಾಗುತ್ತಿದ್ದರು, ಅದರ ಮೇಲೆ ಸಾರಥಿ ಸ್ಥಾನದಲ್ಲಿದ್ದ ಮಾವುತ ಚಿನ್ನಪ್ಪ ಅವರು, ತಮ್ಮ ಅನುಭವದ ಮೇರೆ ಅಂಬಾರಿಯನ್ನು ಮುನ್ನೆಡುಸುವ ಮೂಲಕ ಯಶಸ್ವಿಯಾದರು.----ಬಾಕ್ಸ್... ಅಂಬಾರಿ ಹೊತ್ತ 13ನೇ ಆನೆ ಪ್ರಶಾಂತಮೈಸೂರು ದಸರಾ ವಿಜಯದಶಮಿ ಮೆರವಣಿಗೆಯಲ್ಲಿ 12 ಆನೆಗಳು ಅಂಬಾರಿ ಹೊತ್ತಿದ್ದವು. ಈ ಬಾರಿ 13ನೇ ಆನೆಯಾಗಿ ಪ್ರಶಾಂತ ಅಂಬಾರಿ ಹೊತ್ತಿದೆ.ಚಿನ್ನದ ಅಂಬಾರಿ ಹೊತ್ತ ಮೊದಲ ಆನೆ ಜಯಮಾರ್ತಾಂಡ, ಇದು 45 ವರ್ಷಗಳ ಅಂಬಾರಿ ಹೊತ್ತಿರುವುದು ಇತಿಹಾಸ. ನಂತರ ವಿಜಯ ಬಹದ್ದೂರ್, ನಂಜುಂಡ, ರಾಮಪ್ರಸಾದ್, ಮೋತಿಲಾಲ್ ರಾಜ್, ಐರಾವತ, ಬಿಳಿಗಿರಿ ಆನೆಗಳು ಚಿನ್ನದ ಅಂಬಾರಿಯಲ್ಲಿ ಮಹಾರಾಜರನ್ನು ಹೊತ್ತಿ ಸಾಗಿದ್ದವು.1977 ರಿಂದ ಚಿನ್ನದ ಅಂಬಾರಿಯಲ್ಲಿ ಚಾಮುಂಡಿ ವಿಗ್ರಹವನ್ನು ಇರಿಸಿ ಮೆರವಣಿಗೆ ಮಾಡಲಾಯಿತು. ರಾಜೇಂದ್ರ ಆನೆಯು ಚಾಮುಂಡೇಶ್ವರಿ ಉತ್ಸವಮೂರ್ತಿ ಹೊತ್ತ ಮೊದಲ ಆನೆ. ಬಳಿಕ ದ್ರೋಣ ಆನೆಯು 18 ಬಾರಿ ಅಂಬಾರಿ ಹೊತ್ತಿತ್ತು. ದ್ರೋಣನ ನಂತರ ಬಲರಾಮ ಆನೆಯು ಸತತ 14 ವರ್ಷ ಅಂಬಾರಿ ಹೊತ್ತು ಸಾಧನೆ ಮಾಡಿತ್ತು. 2012ರಲ್ಲಿ ಬಲರಾಮ ಆನೆಗೆ ನಿಶ್ಯಕ್ತಿ ಕಾಡಿದ್ದರಿಂದ ಅರ್ಜುನ ಆನೆಯು 2012 ರಿಂದ 2019 ರವರೆಗೆ ಸತತವಾಗಿ 8 ಬಾರಿ ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸಿ ಯಶಸ್ವಿಯಾಗಿತ್ತು.ಅರ್ಜುನ ಆನೆಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ 2020 ರಿಂದ 2025 ರವರೆಗೆ ಕ್ಯಾಪ್ಟನ್ ಅಭಿಮನ್ಯು ಆನೆಯು 6 ಬಾರಿ ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸಿ ಜನ ಮನ್ನಣೆ ಪಡೆಯಿತು. ಅಭಿಮನ್ಯು ಆನೆಗೆ 60 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಈ ಸಾಲಿನಲ್ಲಿ ಅಂಬಾರಿ ಹೊರುವ ಜವಾಬ್ದಾರಿ ಪ್ರಶಾಂತ ಆನೆಗೆ ಲಭಿಸಿತು.----ಬಾಕ್ಸ್... ಮೊದಲ ಬಾರಿ ದುಬಾರೆ ಆನೆ ಮೇಲೆ ಅಂಬಾರಿ!ಮೈಸೂರು ದಸರಾ ಮಹೋತ್ಸವದ ಇತಿಹಾಸದಲ್ಲೇ ಮೊದಲ ಬಾರಿಗೆ ದುಬಾರೆ ಆನೆ ಶಿಬಿರದ ಪ್ರಶಾಂತ ಆನೆಯು ಅಂಬಾರಿ ಹೊತ್ತಿದೆ. ಇತ್ತೀಚಿನ ಮೂರು ದಶಕಗಳಲ್ಲಿ ತಿತಿಮತಿ ಆನೆ ಶಿಬಿರದ ಬಲರಾಮ ಆನೆಯು 14 ಬಾರಿ, ಬಳ್ಳೆ ಆನೆ ಶಿಬಿರದ ಅರ್ಜುನ ಆನೆಯು 8 ಬಾರಿ ಮತ್ತು ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು 6 ಬಾರಿ ಅಂಬಾರಿ ಹೊರುವ ಮೂಲಕ ತಮ್ಮ ಪಾರುಪತ್ಯೆ ಮೆರೆದಿದ್ದವು. ಆದರೆ, ಅತೀ ಹೆಚ್ಚು ಆನೆಗಳು ದಸರಾಗೆ ಬರುತ್ತಿದ್ದ ದುಬಾರೆ ಆನೆ ಶಿಬಿರದ ಆನೆಗಳಿಗೆ ಮಾತ್ರ ಅಂಬಾರಿ ಹೊರುವ ಅವಕಾಶ ಸಿಕ್ಕಿರಲಿಲ್ಲ. ಇದೇ ಮೊದಲ ಬಾರಿಗೆ ದುಬಾರೆ ಶಿಬಿರದ ಪ್ರಶಾಂತ ಆನೆಗೆ ಅಂಬಾರಿ ಹೊರುವ ಜವಾಬ್ದಾರಿ ಸಿಕ್ಕಿತು.