ವ್ಯವಹಾರದಲ್ಲಿ ಓದಿಗಿಂತ ಅನುಭವದ ಜ್ಞಾನ ಮುಖ್ಯ

KannadaprabhaNewsNetwork |  
Published : Oct 21, 2024, 12:37 AM IST
ವಿ.ನಾ.ಕೃಷ್ಣಮೂರ್ತಿ ಉದ್ಘಾಟಿಸಿದರು | Kannada Prabha

ಸಾರಾಂಶ

ಸ್ವಯಂ ವಾಣಿಜ್ಯೋತ್ಸವ ಕಾರ್ಯಕ್ರಮವನ್ನು ಹಿರಿಯ ಉದ್ಯಮಿ ವಿ.ನಾ.ಕೃಷ್ಣಮೂರ್ತಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಸಾಗರ

ಉದ್ಯಮದಲ್ಲಿ ಓದಿನ ಜ್ಞಾನಕ್ಕಿಂತ ವ್ಯವಹಾರ ಜ್ಞಾನ, ಅನುಭವ ನಮ್ಮನ್ನು ಬೆಳೆಸುತ್ತದೆ ಎಂದು ಹಿರಿಯ ಉದ್ಯಮಿ ವಿ.ನಾ.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ಪಟ್ಟಣದ ಬ್ರಾಸಂ ಸಭಾಂಗಣದಲ್ಲಿ ಅಖಿತ ಹವ್ಯಕ ಮಹಾಸಭಾ ವತಿಯಿಂದ ಆಯೋಜಿಸಲಾಗಿದ್ದ ಸ್ವಯಂ ವಾಣಿಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೆ ಉದ್ಯಮ ಆರಂಭಿಸುವ ಮೊದಲು ಅದರ ಒಳಹೊರಗನ್ನು ಅರಿತು ಹೆಜ್ಜೆ ಇಡಬೇಕು ಎಂದು ಕಿವಿಮಾತು ಹೇಳಿದರು.

ಸುಮಾರು 40-50 ವರ್ಷಗಳ ಹಿಂದೆ ಬ್ರಾಹ್ಮಣ ಸಮುದಾಯ ವಕೀಲ ವೃತ್ತಿಯನ್ನೇ ನಂಬಿಕೊಂಡಿದ್ದರು. ಅಂಥ ಕಾಲದಲ್ಲಿ ಸಾಗರದಲ್ಲಿ ಹೊಸದಾಗಿ ಸಿಮೆಂಟ್ ಉತ್ಪನ್ನದ ಉದ್ಯಮ ಸ್ಥಾಪಿಸಿದ್ದೇ ದೊಡ್ಡ ಸುದ್ದಿಯಾಗಿತ್ತು ಎಂದು ತಾವು ಉದ್ಯಮ ಆರಂಭಿಸಿದ್ದನ್ನು ನೆನಪಿಸಿಕೊಂಡ ಅವರು, ಈಗ ಹವ್ಯಕ ಸಮಾಜದವರು ಹತ್ತಾರು ರೀತಿಯ ಉದ್ದಿಮೆಯಲ್ಲಿ ತೊಡಗಿಕೊಂಡಿದ್ದಾರೆ ಎಂದರು.

ಪ್ರಸ್ತುತ ಮಾರುಕಟ್ಟೆಯ ಅಗತ್ಯತೆ ಅರಿತು, ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಗ್ರಾಹಕರ ಅಗತ್ಯತೆ ಪೂರೈಸುವ ಮಟ್ಟದಲ್ಲಿ ಸಮಾಜದ ಉದ್ದಿಮೆದಾರರು ಬೆಳೆದಿರುವುದು ಖುಷಿಯ ಸಂಗತಿ. ಯುವಕರು ಇಂತಹ ಸಮಾವೇಶದಲ್ಲಿ ಪಾಲ್ಗೊಂಡು ಹಿರಿಯ ಮಾರ್ಗದರ್ಶನ ಪಡೆದುಕೊಳ್ಳಬೇಕು ಎಂದು ಹೇಳಿದರು.

ಹವ್ಯಕ ಮಹಾಸಭೆ ಕಾರ್ಯದರ್ಶಿ ಆದಿತ್ಯ ಹೆಗಡೆ ಮಾತನಾಡಿ, ಹವ್ಯಕರ ಸಂಘಟನೆಯ ಹಿತದೃಷ್ಟಿಯಿಂದ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮಹಾಸಭೆ ವತಿಯಿಂದ ಸಂಘಟನಾತ್ಮಕವಾಗಿ 21 ವಿವಿಧ ವೇದಿಕೆ ಪ್ರಾರಂಭಿಸಲಾಗಿದ್ದು, ಇದರಲ್ಲಿ ಹವ್ಯಕ ಉದ್ದಿಮೆದಾರರ ವೇದಿಕೆಯು ಒಂದು. ಹವ್ಯಕರು ಉದ್ದಿಮೆ ಪ್ರಾರಂಭಿಸಿ, ಇತರರಿಗೆ ಉದ್ಯೋಗದಾತರಾಗಬೇಕು ಎನ್ನುವ ಉದ್ದೇಶ ಹೊಂದಿದೆ. ನಾವು ಬೇರೆಯವರ ಕೈ ಕೆಳಗೆ ಕೆಲಸ ಮಾಡುವುದಕ್ಕಿಂತ ಒಂದಷ್ಟು ಜನರಿಗೆ ಕೆಲಸ ಕೊಡುವ ರೀತಿ ಬೆಳೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಹಾಸಭಾದ ನಿರ್ದೇಶಕ ಕೆ.ಎನ್.ಶ್ರೀಧರ್ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ವೇಣುವಿಘ್ನೇಶ, ಶಿವಮೊಗ್ಗ ಹವ್ಯಕ ಸಂಘದ ಅಧ್ಯಕ್ಷ ವಿ.ಪಿ.ಪೂರ್ಣನಂದ, ಸುರೇಶ್ ಸಾಗರ, ಸಮಾವೇಶದ ಸಂಚಾಲಕ ಎಚ್.ಎನ್.ಉಮೇಶ್, ಶ್ರೀಧರ್, ಗುರುಪಾದ್ ಮೊದಲಾದವರು ಉಪಸ್ಥಿತರಿದ್ದರು. ಸಮಾವೇಶದಲ್ಲಿ ಸಾಗರ, ಹೊಸನಗರ, ಸೊರಬ ತಾಲೂಕಿನ ನೂರಾರು ಉದ್ಯಮಿಗಳು ಭಾಗವಹಿಸಲಿದ್ದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ