ಕುಲಾಂತರಿ ಬೆಳೆಗಳ ಪ್ರಯೋಗ ಅಪಾಯಕಾರಿ: ರಮೇಶ್‌ರಾಜು

KannadaprabhaNewsNetwork |  
Published : Nov 19, 2024, 12:45 AM IST
೧೮ಕೆಎಎಂಎನ್‌ಡಿ-೪ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಅಧ್ಯಕ್ಷ ಹಾಡ್ಯ ರಮೇಶ್‌ರಾಜು ಮಾತನಾಡಿದರು. | Kannada Prabha

ಸಾರಾಂಶ

ರೈತರು ಮತ್ತು ಫಲಾನುಭವಿಗಳ ಜೊತೆ ಸಮಾಲೋಚನೆಯನ್ನೇ ನಡೆಸದೆ ೨೦೦೨ರಲ್ಲಿ ಜೈವಿಕ ತಂತ್ರಜ್ಞಾನದ ಹತ್ತಿ ಬೀಜಗಳನ್ನು ಉಪಯೋಗಿಸಲಾಯಿತು. ಗುಲಾಬಿ ಬೋಲವರ್ಮ ಕೀಟ ನಿವಾರಣೆ ಮಾಡಲು ಬೆಸಿಲಸ್ ತುರಿನ್ ಜೆನಿಸ್ಸಿಸ್ ಎಂಬ ಬ್ಯಾಕ್ಟೀರಿಯಾವನ್ನು ಬಿ.ಟಿ.ಹತ್ತಿ ಬೀಜಗಳಿಗೆ ಸೇರಿಸಿ ನಂತರ ಹಲವು ವಂಶ ವಾಹಿನಿಗಳನ್ನು ಹೆಚ್ಚು ವಿಷಕಾರಿಯಾಗಿ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ಜೈವಿಕ ತಂತ್ರಜ್ಞಾನದಿಂದ ಕಂಡುಹಿಡಿಯಲಾದ ಕುಲಾಂತರಿ ಬೆಳೆಗಳನ್ನು ರೈತರ ಮೇಲೆ ಪ್ರಯೋಗ ಮಾಡಲು ಬಹುರಾಷ್ಟ್ರೀಯ ಕಂಪನಿಗಳು ಹುನ್ನಾರ ನಡೆಸುತ್ತಿವೆ ಎಂದು ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಅಧ್ಯಕ್ಷ ಹಾಡ್ಯ ರಮೇಶರಾಜು ಆರೋಪಿಸಿದರು.

ರೈತರು ಮತ್ತು ಫಲಾನುಭವಿಗಳ ಜೊತೆ ಸಮಾಲೋಚನೆಯನ್ನೇ ನಡೆಸದೆ ೨೦೦೨ರಲ್ಲಿ ಜೈವಿಕ ತಂತ್ರಜ್ಞಾನದ ಹತ್ತಿ ಬೀಜಗಳನ್ನು ಉಪಯೋಗಿಸಲಾಯಿತು. ಗುಲಾಬಿ ಬೋಲವರ್ಮ ಕೀಟ ನಿವಾರಣೆ ಮಾಡಲು ಬೆಸಿಲಸ್ ತುರಿನ್ ಜೆನಿಸ್ಸಿಸ್ ಎಂಬ ಬ್ಯಾಕ್ಟೀರಿಯಾವನ್ನು ಬಿ.ಟಿ.ಹತ್ತಿ ಬೀಜಗಳಿಗೆ ಸೇರಿಸಿ ನಂತರ ಹಲವು ವಂಶ ವಾಹಿನಿಗಳನ್ನು ಹೆಚ್ಚು ವಿಷಕಾರಿಯಾಗಿ ಮಾಡಲಾಯಿತು. ೨೦೦೫ರಲ್ಲಿ ಬಿಜಿಐ ಮತ್ತು ೨೦೦೯ರಲ್ಲಿ ಬಿಜಿ-೨ ಎಂಬ ವಿಫಲವಾದ ಹತ್ತಿ ಬೀಜಗಳನ್ನು ರೈತರಿಗೆ ಮಾರಾಟ ಮಾಡಿ ಶೋಷಿಸಲಾಯಿತು. ಇದು ರೈತರನ್ನು ಆತ್ಮಹತ್ಯೆಯ ಪ್ರೇರಣೆಗೆ ತಳ್ಳಿತು ಎಂದು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.ಪ್ರಾಣಿ ಜನ್ಯದಿಂದ ಸಸ್ಯಪ್ರಬೇಧಗಳಿಗೆ ಕಸಿ ಮಾಡಿ ಅದರಿಂದ ಬೀಜಗಳನ್ನು ಸಂಶೋಧಿಸಲಾಗುತ್ತಿದೆ. ಇದು ಪ್ರಕೃತಿಗೆ ವಿರುದ್ಧವಾಗಿದ್ದು, ಇಂತಹ ತಳಿ ಬೀಜಗಳನ್ನು ಸಂಶೋಧಿಸಿರುವ ಅಮೆರಿಕಾ ದೇಶವೇ ತಿರಸ್ಕರಿಸಿದೆ. ಇದನ್ನು ಕೇವಲ ಪ್ರಾಣಿಗಳ ಆಹಾರ, ಎಥೆನಾಲ್ ಸೇರಿದಂತೆ ಇತರೆ ಉತ್ಪಾದನೆಗೆ ಬಳಸಲಾಗುತ್ತಿದೆ. ಹೆಚ್ಚುವರಿ ಉತ್ಪಾದನೆಯನ್ನು ಬೇರೆ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ. ಇನ್ನೂ ಉಳಿದರೆ ತ್ಯಾಜ್ಯವನ್ನಾಗಿ ಮಾಡಲಾಗುತ್ತಿದೆ. ಇಂತಹ ಜೈವಿಕ ಬೀಜಗಳನ್ನು ಬಳಸುವಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ರೈತರಿಗೆ ಒತ್ತಾಯಪೂರ್ವಕವಾಗಿ ಬಳಸುವಂತೆ ಸಂಚು ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.

ಈ ಹಿನ್ನೆಲೆಯಲ್ಲಿ ರಾಜ್ಯದ ೬೦೦ ಜಿಲ್ಲೆಗಳಲ್ಲಿರುವ ಸಂಸದರು, ರಾಜ್ಯಸಭಾ ಸದಸ್ಯರು, ಲೋಕಸಭೆ, ರಾಜ್ಯಸಭೆ ಸ್ಪೀಕರ್‌ಗಳಿಗೆ ಭಾರತೀಯ ಕಿಸಾನ್ ಸಂಘದ ವತಿಯಿಂದ ಮನವಿ ಸಲ್ಲಿಸಿ ಬರುವ ಚಳಿಗಾಲದ ಅವೇಶನದಲ್ಲಿ ಚರ್ಚೆ ನಡೆಸಿ ಇದನ್ನು ಸಾರಾಸಗಟಾಗಿ ತಿರಸ್ಕರಿಸುವಂತೆ ಮನವಿ ಮಾಡುತ್ತಿದ್ದೇವೆ ಎಂದರು.

ಒಂದು ವೇಳೆ ಈ ವಿಷಯದ ಕುರಿತಂತೆ ಚರ್ಚೆ ನಡೆಸಿ ಬಿಡುಗಡೆ ಮಾಡಿದಲ್ಲಿ ರಾಷ್ಟ್ರದಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಭಾರತೀಯ ಕಿಸಾನ್ ಸಂಘದ ಮುಖಂಡರಾದ ವೆಂಕಟೇಶ್ ಪಣಕನಹಳ್ಳಿ, ಅಪ್ಪಾಜಿ ಬೂದನೂರು, ಜಯರಾಮ್ ತೂಬಿಕೆರೆ, ಪಾಪೇಗೌಡ, ಇಂದ್ರಮ್ಮ, ದುರ್ಗೇಶ್ ಇತರರು ಗೋಷ್ಠಿಯಲ್ಲಿದ್ದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು