ಕನ್ನಡಪ್ರಭ ವಾರ್ತೆ ಹೊಳೆನರಸೀಪುರತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಠಿಯಿಂದ ಮುಸುಕಿನ ಜೋಳ ಬಿಳಿಸುಳಿ ರೋಗದಿಂದ ಶೇ. ೧೧.೫೫ರಷ್ಟು ಬೆಳೆ ಹಾನಿಯಾಗಿದ್ದು, ಇತರೆ ಬೆಳೆಗಳಿಗೆ ಹಾನಿಯಾಗದೇ ಇದ್ದರೂ ಮುಂದಿನ ದಿನಗಳಲ್ಲಿ ರೈತರು ಕೃಷಿ ಇಲಾಖೆಯ ವಿಜ್ಞಾನಿಗಳ ಸಲಹೆ ಜತೆಗೆ ಅಗತ್ಯ ಮುಂಜಾಗ್ರತೆ ಹಾಗೂ ಜಾಗೃತಿ ಅಗತ್ಯವಾಗಿದೆ. ಕೃಷಿ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಮುಂಗಾರು ಹಂಗಾಮಿನಲ್ಲಿ ಒಟ್ಟು ೨೪೧೧೬ ಹೆಕ್ಟೇರ್ ಬಿತ್ತನೆಯಾಗಿದೆ. ಬತ್ತ ೨೦೮೦, ಮುಸುಕಿನ ಜೋಳ ೧೩೧೬೦, ರಾಗಿ ೩೫೯೮, ಅಲಸಂದೆ ೧೪೯೫, ತೊಗರಿ ೪೫, ಹುರುಳಿ ೭೫, ಅವರೇ ೧೧೦, ಹೆಸರು ೨೮, ಎಳ್ಳು ೮೫, ಕಬ್ಬು ೧೦೦೦ ಹಾಗೂ ತಂಬಾಕು ೨೨೩೫ ಸೇರಿ ಒಟ್ಟು ೨೪೧೧೬ ಹೆಕ್ಟೇರ್ ಬೆಳೆಗಳ ಬಿತ್ತನೆ ಮಾಡಲಾಗಿದೆ. ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಮುಸುಕಿನ ಜೋಳ ೧೩೧೬೦ ಹೆಕ್ಟೇರ್ ಬಿತ್ತನೆ ಮಾಡಲಾಗಿತ್ತು ಹಾಗೂ ಅತಿವೃಷ್ಠಿಯಿಂದ ಮುಸುಕಿನ ಜೋಳ ಬೆಳೆಗೆ ಅಂಟಿದ ಬಿಳಿಸುಳಿ ರೋಗದಿಂದ ೧೫೨೦ ಹೆಕ್ಟೇರ್‌ನಷ್ಟು ಬೆಳೆ ಹಾನಿಯಾಗಿದೆ. ಆದ್ದರಿಂದ ಕೃಷಿ ಇಲಾಖೆಯ ವಿಜ್ಞಾನಿಗಳ ಸಲಹೆಯಂತೆ ರೈತರು ಮುಸುಕಿನ ಜೋಳ ಬೆಳೆದ ನಂತರ ಇತರೆ ದ್ವಿದಳ, ಎಣ್ಣೆಕಾಳು ಬೆಳೆಯಬೇಕು, ಬೆಳೆ ಪರಿವರ್ತನೆ ಹಾಗೂ ವೈಜ್ಞಾನಿಕ ಪದ್ಧತಿ ಅಳವಡಿಕೆ, ಮುಂಗಾರಿನಲ್ಲೂ ಮುಸುಕಿನ ಜೋಳದ ಬಿತ್ತನೆಯನ್ನು ಜೂನ್-ಜುಲೈನಲ್ಲಿ ಮಾತ್ರ ಬಿತ್ತನೆ ಮಾಡಬೇಕೆಂದು ಅರಿತಾಗ ರೋಗವನ್ನು ಹತೋಟಿಗೆ ತರಬಹುದು ಇಲ್ಲವಾದಲ್ಲಿ ರೋಗದ ಹತೋಟಿ ಕಷ್ಟಸಾಧ್ಯವೆಂದು ತಿಳಿಸಿದ್ದಾರೆ. ಬೆಳೆಯಲ್ಲಿ ಹೆಚ್ಚಿನ ಇಳುವರಿಗಾಗಿ ರಸಗೊಬ್ಬರಗಳ ಅತಿಯಾಗಿ ಬಳಸಿದರೆ ಮಣ್ಣಿನ ಆರೋಗ್ಯವನ್ನು ಹಾಳು ಮಾಡಬಹುದು, ಜಲಮಾಲಿನ್ಯ ಉಂಟು ಮಾಡಬಹುದು ಮತ್ತು ಗಿಡಗಳನ್ನು ಸುಡಬಹುದು ಜತೆಗೆ ಸೂಕ್ತ ಪ್ರಮಾಣಕ್ಕಿಂತ ಹೆಚ್ಚು ಬಳಸಿದರೆ ಹಾನಿ ಉಂಟಾಗುತ್ತದೆ. ಅಲ್ಲದೆ, ಅವುಗಳು ಮಣ್ಣಿನಲ್ಲಿನ ಸೂಕ್ಷ್ಮಜೀವಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಮತ್ತು ಅತಿಯಾದ ಬಳಕೆಯು ಸಸ್ಯಗಳ ಬೆಳವಣಿಗೆಯನ್ನು ನಿಯಂತ್ರಣಕ್ಕೆ ಮೀರಿದ ಹಂತಕ್ಕೆ ಕೊಂಡೊಯ್ಯಬಹುದು. ಅತಿಯಾದ ರಸಾಯನಿಕ ಗೊಬ್ಬರಗಳ ಬಳಕೆ ಸಸ್ಯಗಳನ್ನು ಅತಿಯಾಗಿ ಬೆಳೆಸಿ, ಅವುಗಳನ್ನು ದುರ್ಬಲಗೊಳಿಸಬಹುದು ಮತ್ತು ಕೀಟಗಳು ಹಾಗೂ ರೋಗಗಳಿಗೆ ಹೆಚ್ಚು ತುತ್ತಾಗುವಂತೆ ಮಾಡುತ್ತದೆ. ಕೀಟನಾಶಕಗಳು ಕೀಟಗಳಿಗೆ ಮಾತ್ರವಲ್ಲದೆ, ಪ್ರಯೋಜನಕಾರಿ ಕೀಟಗಳು, ಪಕ್ಷಿಗಳು ಮತ್ತು ಇತರ ಜೀವಿಗಳಿಗೂ ಹಾನಿ ಮಾಡುತ್ತವೆ, ಇದರಿಂದ ನೈಸರ್ಗಿಕ ಪರಿಸರ ವ್ಯವಸ್ಥೆಗಳು ಅಡ್ಡಿಯಾಗುತ್ತವೆ. ಕೀಟನಾಶಕಗಳ ನಿರಂತರ ಬಳಕೆಯು ಕೀಟಗಳು ಮತ್ತು ಕಳೆಗಳಲ್ಲಿ ನಿರೋಧಕತೆಯನ್ನು ಬೆಳೆಸುತ್ತದೆ, ಇದರಿಂದ ರಸಾಯನಿಕಗಳು ಕಡಿಮೆ ಪರಿಣಾಮಕಾರಿ ಆಗಿರುತ್ತವೆ. ತರಕಾರಿಗಳು ಮತ್ತು ಹಣ್ಣುಗಳ ಮೇಲೆ ರಾಸಾಯನಿಕ ಅವಶೇಷಗಳು ಉಳಿಯುವುದರಿಂದ ಆಹಾರದ ಸುರಕ್ಷತೆಗೆ ಅಪಾಯ ಉಂಟಾಗುತ್ತದೆ. ಅತಿವೃಷ್ಠಿ ಹಾಗೂ ಅನಾವೃಷ್ಠಿಯಿಂದ ಉಂಟಾಗುವ ನಷ್ಟ ಹೊರತುಪಡಿಸಿ, ಕೃಷಿ ಇಲಾಖೆಯ ವಿಜ್ಞಾನಿಗಳ ಸೂಚನೆಯಂತೆ ತಾಲೂಕು ಕೃಷಿ ಇಲಾಖೆ ಉಪ ನಿರ್ದೇಶಕರ ಕಚೇರಿಯ ಹಿರಿಯ ಅಧಿಕಾರಿಗಳು ನೀಡುವ ಸಲಹೆ ಹಾಗೂ ಮಾರ್ಗದರ್ಶನ ಪಾಲನೆಯೂ ಬೆಳೆನಷ್ಟವನ್ನು ಶೂನ್ಯದತ್ತ ಕೊಂಡ್ಯೊಯುವ ಸಾಧ್ಯೆತೆಯೂ ಇದೆ.