ದಲಿತರ ಶೋಷಣೆಯೇ ಕಾಂಗ್ರೆಸ್‌ ಧ್ಯೇಯ: ಡಾ। ಸುಧಾಕರ್‌

KannadaprabhaNewsNetwork | Updated : Apr 14 2024, 08:19 AM IST

ಸಾರಾಂಶ

 ದಲಿತರನ್ನು ತುಳಿಯುವುದೇ ಕಾಂಗ್ರೆಸ್‌ನ ಧ್ಯೇಯ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ। ಕೆ.ಸುಧಾಕರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಚಿಕ್ಕಬಳ್ಳಾಪುರ: ಸಂವಿಧಾನ ಶಿಲ್ಪಿ ಡಾ। ಬಿ.ಆರ್‌.ಅಂಬೇಡ್ಕರ್‌ ಹಾಗೂ ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಮ್‌ ಅವರು ಬದುಕಿದ್ದಾಗ ಕಾಂಗ್ರೆಸ್‌ ಅವರನ್ನು ಹೀನಾಯವಾಗಿ ಕಂಡು ಅಪಮಾನ ಮಾಡಿತ್ತು. ದಲಿತರನ್ನು ತುಳಿಯುವುದೇ ಕಾಂಗ್ರೆಸ್‌ನ ಧ್ಯೇಯ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ। ಕೆ.ಸುಧಾಕರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

1952ರ ಲೋಕಸಭಾ ಚುನಾವಣೆ ಮತ್ತು 1954ರ ಉಪಚುನಾವಣೆಯಲ್ಲಿ, ಅಂಬೇಡ್ಕರ್ ವಿರುದ್ಧ ನೆಹರು ನೇತೃತ್ವದಲ್ಲಿ ಪ್ರಚಾರ ಮಾಡಿದ ಕಾಂಗ್ರೆಸ್, ದಾದರ್‌ನಲ್ಲಿ ಅವರನ್ನು ಸೋಲಿಸಿತು. ನಂತರ, ಭಾರತೀಯ ಜನಸಂಘ ಮತ್ತು ಇತರ ಪಕ್ಷಗಳು ಕೈ ಜೋಡಿಸಿ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಮತ್ತೆ ಸಂಸತ್ತಿಗೆ ಕಳುಹಿಸಿದವು. ಬಾಬಾಸಾಹೇಬರ ಕೃತಿಗಳನ್ನು ಎಂದಿಗೂ ಕಾಂಗ್ರೆಸ್‌ ಸರ್ಕಾರ ಪ್ರಕಟಿಸಲಿಲ್ಲ, ಪ್ರಚಾರ ಮಾಡಲಿಲ್ಲ. ಕೊನೆಗೆ ಅವರ ಅಂತ್ಯಸಂಸ್ಕಾರಕ್ಕೂ ಜಾಗ ನೀಡಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಪಂಚತೀರ್ಥ ಯೋಜನೆ ಜಾರಿ ಮಾಡಿ ಬಾಬಾ ಸಾಹೇಬರ ಐದು ಪವಿತ್ರ ಸ್ಥಳಗಳನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಅವರು ವಿವರಿಸಿದರು.

ಸ್ವಾತಂತ್ರ್ಯದ ನಂತರ 35 ವರ್ಷ ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಲು ಕಾಂಗ್ರೆಸ್‌ ನಿರಾಕರಿಸಿತ್ತು. ಆದರೆ ಅದೇ ಪ್ರಶಸ್ತಿಯನ್ನು ನೆಹರು ಮತ್ತು ಇಂದಿರಾ ಗಾಂಧಿ ಅವರಿಗೆ ನೀಡಲಾಗಿತ್ತು. 1990ರಲ್ಲಿ ಬಿಜೆಪಿ ಬೆಂಬಲಿತ ವಿ.ಪಿ.ಸಿಂಗ್ ಸರ್ಕಾರ ಅಂಬೇಡ್ಕರ್ ಅವರಿಗೆ ಈ ಗೌರವವನ್ನು ನೀಡಿತ್ತು ಎಂದು ಡಾ। ಕೆ.ಸುಧಾಕರ್‌ ಸ್ಮರಿಸಿದರು.

ಮಾಜಿ ಉಪಪ್ರಧಾನಿ ಡಾ। ಬಾಬು ಜಗಜೀವನ್ ರಾಮ್, ತುರ್ತು ಪರಿಸ್ಥಿತಿ ಹೇರಿಕೆಯಿಂದ ಬೇಸತ್ತು 1977ರಲ್ಲಿ ಕಾಂಗ್ರೆಸ್‌ ತೊರೆದು, ಕಾಂಗ್ರೆಸ್ ಫಾರ್ ಡೆಮಾಕ್ರಸಿ ಎಂಬ ಪಕ್ಷ ಆರಂಭಿಸಿದರು. ಬಾಬೂಜಿಯವರ ಪ್ರತಿಭಟನೆ ಜನರಿಗೆ ಗೊತ್ತಾಗದಂತೆ ಮಾಡಲು ದೂರದರ್ಶನದಲ್ಲಿ ಕಾಂಗ್ರೆಸ್‌ ಸರ್ಕಾರ ʼಬಾಬಿʼ ಸಿನಿಮಾ ಮಾತ್ರ ಪ್ರಸಾರವಾಗುವಂತೆ ನೋಡಿಕೊಂಡಿತು. ಆದರೂ ಆ ಪ್ರತಿಭಟನೆ ಯಶಸ್ವಿಯಾಗಿ ಮರುದಿನ ಪತ್ರಿಕೆಯಲ್ಲಿ ಬಾಬು ಬೀಟ್ಸ್‌ ಬಾಬಿ’ ಎಂದು ಸುದ್ದಿ ಪ್ರಕಟವಾಯಿತು. 1971ರ ಭಾರತ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಬಾಬು ಜಗಜೀವನರಾಮ್‌ ರಕ್ಷಣಾ ಸಚಿವರಾಗಿದ್ದು, ಯುದ್ಧ ಜಯಿಸಲು ಕಾರಣರಾಗಿದ್ದರು. ಆದರೆ ಅವರಿಗೆ ಹೆಸರು ಬಾರದಂತೆ ಮಾಡಲು ಕಾಂಗ್ರೆಸ್‌ ಈ ವಿಚಾರವನ್ನು ಮರೆಮಾಚಿ ಇಂದಿರಾಗಾಂಧಿಯವರ ಹೆಸರನ್ನೇ ಜಪಿಸುತ್ತದೆ ಎಂದು ಡಾ। ಕೆ.ಸುಧಾಕರ್‌ ಹೇಳಿದರು.ಇಎಸ್‌ಐ ಆಸ್ಪತ್ರೆ:

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾರ್ಮಿಕರಿಗಾಗಿ ಇಎಸ್‌ಐ ಆಸ್ಪತ್ರೆ ಮಂಜೂರು ಮಾಡಿಸುತ್ತೇನೆ. ಬತ್ತಿಹೋಗಿರುವ ತ್ಯಾಮಗೊಂಡ್ಲು ಕೆರೆಯನ್ನು ಮತ್ತೆ ತುಂಬಿಸುವ ಯೋಜನೆ ಜಾರಿ ಮಾಡಿಸುತ್ತೇನೆ ಎಂದು ಎನ್‌ಡಿಎ ಅಭ್ಯರ್ಥಿ ಡಾ। ಕೆ.ಸುಧಾಕರ್‌ ಭರವಸೆ ನೀಡಿದರು. ತ್ಯಾಮಗೊಂಡ್ಲು, ಸೋಂಪುರ ಮೊದಲಾದ ಭಾಗಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು ಜನರನ್ನುದ್ದೇಶಿಸಿ ಮಾತನಾಡಿದರು.

ತ್ಯಾಮಗೊಂಡ್ಲು ಕೆರೆ ಬತ್ತಿಹೋಗಿದೆ. ಮುಂದಿನ ಐದು ವರ್ಷಗಳಲ್ಲಿ ಈ ಕೆರೆಯಲ್ಲಿ ನೀರು ತುಂಬಿಸುವ ಕೆಲಸ ಮಾಡುತ್ತೇನೆ. ಹಾಗೆಯೇ ಶಾಶ್ವತ ನೀರಾವರಿ ಯೋಜನೆಯನ್ನು ಕೂಡ ನೀಡುತ್ತೇನೆ. ಕೂಲಿ ಕಾರ್ಮಿಕರಿಗೆ, ಕೃಷಿ ಕಾರ್ಮಿಕರಿಗೆ ಆರೋಗ್ಯ ಸೇವೆ ನೀಡುವ ಇಎಸ್‌ಐ ಆಸ್ಪತ್ರೆಯನ್ನು ಮಂಜೂರು ಮಾಡಿಸುತ್ತೇನೆ. ಕೈಗಾರಿಕೆಗಳನ್ನು ಆರಂಭಿಸಿ ಯುವಜನರಿಗೆ ಉದ್ಯೋಗ ದೊರಕಿಸಿಕೊಡುತ್ತೇನೆ ಎಂದು ಆಶ್ವಾಸನೆ ನೀಡಿದರು.

ಚಿಕ್ಕಬಳ್ಳಾಪುರದಲ್ಲಿ ಹಿಂದೆ ಸಾವಿರ ಅಡಿ ಆಳಕ್ಕೆ ಭೂಮಿ ಕೊರೆದರೂ ನೀರು ಸಿಗುವುದಿಲ್ಲ. ಆದರೆ ಈಗ ಕೇವಲ 100 ಅಡಿ ಆಳಕ್ಕೆ ಕೊರೆದರೂ ನೀರು ಸಿಗುತ್ತದೆ. ಒಟ್ಟು 65 ಕೆರೆಗಳನ್ನು ತುಂಬಿಸುವ ಯೋಜನೆಯನ್ನು ನಾನು ತಂದಿದ್ದರಿಂದ ಅಂತರ್ಜಲದ ಪ್ರಮಾಣ ಏರಿಕೆ ಕಂಡಿದೆ. ನನ್ನ ತಾಯಿ ತೀವ್ರ ಹೃದಯಾಘಾತದಿಂದ ತೀರಿಕೊಂಡರು. ಸಮೀಪದಲ್ಲೇ ಆಸ್ಪತ್ರೆ ಇದ್ದಿದ್ದರೆ ಅವರು ಬದುಕುಳಿಯುತ್ತಿದ್ದರು. ಅದಕ್ಕಾಗಿ ಅಂದಿನಿಂದಲೇ ನಿರ್ಧಾರ ಮಾಡಿ ಸಚಿವನಾದ ಬಳಿಕ ಚಿಕ್ಕಬಳ್ಳಾಪುರಕ್ಕೆ ಸುಸಜ್ಜಿತ ಮೆಡಿಕಲ್‌ ಕಾಲೇಜು ಮಂಜೂರು ಮಾಡಿಸಿದೆ. ಈ ಮೆಡಿಕಲ್‌ ಕಾಲೇಜಿಗಾಗಿ ಜಿದ್ದಾಜಿದ್ದಿಯ ಹೋರಾಟ ನಡೆಸಬೇಕಾಯಿತು. ಎಷ್ಟೋ ವಿರೋಧ ಬಂದರೂ ಮೆಡಿಕಲ್‌ ಕಾಲೇಜು ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಜನರು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಿ ರಾಜ್ಯ ಪಶ್ಚಾತ್ತಾಪ ಪಡುತ್ತಿದ್ದಾರೆ. ಈ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕಿದರೆ ಮತ್ತೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದರು. 

ಬರಗಾಲ ಖಚಿತ, ಬಡತನ ಉಚಿತ:

ರೈತರಿಗೆ ಬದ್ಧತೆ ಇದ್ದಿದ್ದರೆ ಹಾಲಿನ ಪ್ರೋತ್ಸಾಹಧನ ನೀಡಬೇಕಿತ್ತು. ಬಿಜೆಪಿ ಸರ್ಕಾರ ನೀಡಿದ್ದ ಕಿಸಾನ್‌ ಸಮ್ಮಾನ್‌, ವಿದ್ಯಾನಿಧಿಯಂತಹ ಯೋಜನೆಗಳನ್ನು ಸ್ಥಗಿತಗೊಳಿಸಲಾಗಿದೆ. 10 ಕೇಜಿ ಅಕ್ಕಿಯ ವಿಷಯದಲ್ಲೂ ಜನರಿಗೆ ನಾಮ ಹಾಕಿದ್ದಾರೆ. ಕೋವಿಡ್‌ ಸಮಯದಲ್ಲಿ ಪ್ರಧಾನಿ ಮೋದಿ ಸರ್ಕಾರ 10 ಕೇಜಿ ಅಕ್ಕಿ ನೀಡಿತ್ತು. ಈಗ 5 ಕೇಜಿಯನ್ನು ಕೂಡ ಪ್ರಧಾನಿಯೇ ನೀಡುತ್ತಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಬರಗಾಲ ಖಚಿತ, ಭಯೋತ್ಪಾದನೆ ನಿಶ್ಚಿತ, ಬಡತನ ಉಚಿತ ಎಂದು ಸುಧಾಕರ್‌ ಹೇಳಿದರು.

ಕೋವಿಡ್‌ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಎಲ್ಲ ರಾಜ್ಯಗಳಿಗೆ ಮಾರ್ಗದರ್ಶನ ಮಾಡಿ ಜನರ ಜೀವ ಉಳಿಸಿದ್ದರು. ಆದರೆ ಕಾಂಗ್ರೆಸ್‌ ನಾಯಕರು ಮನೆಯಿಂದ ಹೊರಗೆ ಬಂದಿರಲಿಲ್ಲ. ಬಿ.ಎಸ್‌.ಯಡಿಯೂರಪ್ಪ ಹಾಗೂ ಎಚ್‌.ಡಿ.ಕುಮಾರಸ್ವಾಮಿ ನೀರಾವರಿಗೆ ಹಾಗೂ ರೈತರಿಗೆ ಹೆಚ್ಚು ಸಹಾಯ ಮಾಡಿದ್ದಾರೆ ಎಂದರು.

ನರೇಂದ್ರ ಮೋದಿಯವರ ಬಲಿಷ್ಠ ಆಡಳಿತದಿಂದ ಭಯೋತ್ಪಾದನೆ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಮಣ್ಣಿನ ಮಗ ಎಚ್‌.ಡಿ.ದೇವೇಗೌಡರು ಹಾಗೂ ನರೇಂದ್ರ ಮೋದಿಯವರ ಸಮಾಗಮದಿಂದ ಎಲ್ಲ ಜನ ವರ್ಗಗಳ ಅಭಿವೃದ್ಧಿ ಸಾಧ್ಯವಾಗುತ್ತದೆ. ಅದೇ ರೀತಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಎಚ್‌.ಡಿ.ಕುಮಾರಸ್ವಾಮಿಯವರು ಒಂದಾಗಿರುವುದರಿಂದ ರಾಜ್ಯದ ವಿಕಾಸ ಸಾಧ್ಯವಾಗುತ್ತದೆ ಎಂದು ಹೇಳಿದರು.

Share this article