ಶೋಷಿತ ಸಮುದಾಯಗಳಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಗ್ರಹ

KannadaprabhaNewsNetwork | Published : Mar 1, 2025 1:01 AM

ಸಾರಾಂಶ

ಬಿಜೆಪಿ ಎಸ್‌ಸಿ, ಎಸ್‌ಟಿ ಸಮುದಾಯದ ಮುಖಂಡರು ಸಂಸದ ಗೋವಿಂದ ಕಾರಜೋಳ, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಎಸ್‌ಸಿ, ಎಸ್‌ಟಿ ಮುಖಂಡರಿಂದ ಸಂಸದ ಗೋವಿಂದ ಕಾರಜೋಳ, ಮಾಜಿ ಶಾಸಕ ತಿಪ್ಪಾರೆಡ್ಡಿ ಗೆ ಮನವಿಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷ ಸ್ಥಾನವನ್ನು ಶೋಷಿತ ಸಮುದಾಯಗಳಿಗೆ ನೀಡುವಂತೆ ಪಕ್ಷದ ಎಸ್‌ಸಿ, ಎಸ್‌ಟಿ ಮುಖಂಡರು ಸಂಸದ ಗೋವಿಂದ ಕಾರಜೋಳ ಹಾಗೂ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರನ್ನು ಆಗ್ರಹಿಸಿದ್ದಾರೆ.

ಬಿಜೆಪಿ ದೇಶದಲ್ಲಿ ಸಾಕಷ್ಟು ಬೆಳೆದಿದೆ. ಪ್ರತಿ ಮನೆ ಮನೆಯಲ್ಲಿ ಬಿಜೆಪಿ ಕಾರ್ಯಕರ್ತರು ಇದ್ದಾರೆ. ಪ್ರತಿ 3 ವರ್ಷಕ್ಕೊಮ್ಮೆ ಪಕ್ಷ ಸಂಘಟನೆಯ ಜವಾಬ್ದಾರಿಗಳನ್ನು ಬದಲಾವಣೆ ಮಾಡುತ್ತಿದೆ. ಪಕ್ಷದ ರಾಷ್ಟ್ರಾಧ್ಯಕ್ಷರಿಂದ ಹಿಡಿದು ಪಕ್ಷದ ಮೋರ್ಚಾಗಳ ಅಧ್ಯಕ್ಷರವರೆಗೂ ಬದಲಾವಣೆಯಾಗುತ್ತಾ ಬರುತ್ತದೆ. ಜಿಲ್ಲೆಯಲ್ಲಿ ಕೆಲವು ಸಮುದಾಯಗಳು ಮಾತ್ರ ಜವಾಬ್ದಾರಿ ನಿಭಾಯಿಸುತ್ತಿವೆ. ಶೋಷಿತ ಸಮುದಾಯಗಳಿಗೆ ಜವಾಬ್ದಾರಿ ಸ್ಥಾನಗಳು ಸಿಗುತ್ತಿಲ್ಲ. ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಮೇಲಿನ ಜವಾಬ್ದಾರಿಗಳು ಕೆಲವು ಸೀಮಿತ ಸಮುದಾಯಗಳಿಗೆ ಸೀಮಿತವಾಗಬಾರದು. ಶೋಷಿತ ಸಮುದಾಯಗಳಿಗೂ ಆ ಜವಾಬ್ದಾರಿಗಳು ಸಿಗಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ.

ಈವರೆಗೆ ಎಸ್‌ಸಿ ಸಮುದಾಯಕ್ಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನ ಸಿಕ್ಕಿಲ್ಲ. ಅದರಂತೆ ಎಸ್‌ಟಿ ಸಮುದಾಯಕ್ಕೆ ಜಿಲ್ಲಾಧ್ಯಕ್ಷ ಸ್ಥಾನ ಸಿಕ್ಕಿಲ್ಲ. ಈ ಜವಾಬ್ದಾರಿಗಳು ಕೇವಲ ಎರಡು ಸಮುದಾಯಗಳಲ್ಲಿ ಗಿರಿಕಿ ಹೊಡೆಯುತ್ತಿವೆ. ಬೇರೆ ಪಕ್ಷದವರು ನಮ್ಮನ್ನು ನೋಡಿ ನಗುತ್ತಿದ್ದಾರೆ. ನೀವೇಕೆ ಬಿಜೆಪಿ ಪಕ್ಷದಲ್ಲಿ ಇದ್ದೀರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ನಾವು ಹಿಂದುತ್ವ ಹಾಗೂ ರಾಷ್ಟ್ರೀಯವಾದ ಇಟ್ಟುಕೊಂಡು ಬಿಜೆಪಿ ಪಕ್ಷದಲ್ಲಿದ್ದೇವೆ. ಆಂತರಿಕ ಪ್ರಜಾಪ್ರಭುತ್ವ ಸಿಗಬೇಕಾದರೆ ಎಲ್ಲಾ ಸಮುದಾಯಗಳಿಗೂ ಜವಾಬ್ದಾರಿ ಸಿಗಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ 3 ಲಕ್ಷಕ್ಕೂ ಅಧಿಕ ಮತದಾರರಿರುವ ಎಸ್‌ಟಿ ಸಮುದಾಯಕ್ಕೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿದರೆ ಪಕ್ಷ ಸಂಘಟನೆ ಆಗುತ್ತದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಟಿ ಸಮುದಾಯಕ್ಕೆ ಮೀಸಲಿರುವ 15 ಕ್ಷೇತ್ರಗಳಲ್ಲಿ ಸಹ ನಾವು ಸೊತ್ತಿದ್ದೇವೆ. ಮುಂಬರುವ ಚುನಾವಣೆಗಳಲ್ಲಿ ಈ ಸ್ಥಿತಿ ಬರಬಾರದು. ಹಾಗಾಗಿ ಶೋಷಿತ ಸಮುದಾಯಗಳಿಗೆ ಆಯಕಟ್ಟಿನ ಹುದ್ದೆ ಬೇಕೆಂದು ಮನವಿ ಮಾಡಿದ್ದಾರೆ.

ನಾಯಕ ಸಮುದಾಯದ ಜಯಪಾಲಯ್ಯ, ಪಾಪೇಶ್ ನಾಯಕ್, ಎಸ್‌ಸಿ ಸಮುದಾಯದಿಂದ ಚಲವಾದಿ ತಿಪ್ಪೇಸ್ವಾಮಿ, ಮೋಹನ್ ಜಿ.ಎಚ್, ಪರಶುರಾಮ್, ಓಬಿಸಿ ಸಮುದಾಯ ಸಂಪತ್ ಕುಮಾರ್, ನವೀನ್, ಕಾಂಚನ, ಸುಮಾ, ಯೋಗೀಶ್ ಸಹ್ಯಾದ್ರಿ, ಪ್ರಶಾಂತ್ ನಾಯಕ, ಪಾಲಣ್ಣ ರೇಣುಕಾಪುರ, ಶಾಂತಕುಮಾರ್, ಸುರೇಶ ಉಗ್ರಣ, ಮಹಾಲಿಂಗಪ್ಪ, ದೊರೆ ನಾಗರಾಜ್, ಪಾಂಡುರಂಗ, ಸಣ್ಣ ನಿಂಗಪ್ಪ, ಕೃಷ್ಣಮೂರ್ತಿ, ನವೀನ್ ಶಾಂತಕುಮಾರ್, ನಾಗರಾಜ್ ಅಂಜನಪ್ಪ ಇದ್ದರು.

Share this article