ಕನ್ನಡಪ್ರಭ ವಾರ್ತೆ ದಾವಣಗೆರೆ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಇಂದಿನಿಂದ ಆರಂಭಗೊಂಡಿದೆ. ಇದಕ್ಕೆ ಸಾರ್ವಜನಿಕರು ಹಾಗೂ ಮತದಾರರು ಸಂಪೂರ್ಣ ಸಹಕಾರ ನೀಡಬೇಕು ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದರು.
ಮತದಾರರ ಪಟ್ಟಿಯಿಂದ ಕೈಬಿಟ್ಟು ಹೋಗಿರುವ ಪ್ರತಿಯೊಬ್ಬ ಅರ್ಹ ಪ್ರಜೆಯನ್ನು ಪಟ್ಟಿಗೆ ಸೇರಿಸುವ ಮೂಲಕ, ಪ್ರತಿಯೊಬ್ಬರಿಗೂ ಅವರ "ನನ್ನ ಮತ, ನನ್ನ ಹಕ್ಕು " ಚಲಾಯಿಸಲು ಅವಕಾಶ ಕಲ್ಪಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಮತದಾರರು ಪಟ್ಟಿಯಿಂದ ಕೈಬಿಟ್ಟು ಹೋಗಿದಂತೆ ಬಿಗಿ ಕ್ರಮ ಕೈಗೊಳ್ಳಲಾಗಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಈಗಾಗಲೇ ಮತದಾರರ ನೋಂದಣಿ ಪ್ರಕ್ರಿಯೆ ಉತ್ತಮವಾಗಿ ನಡೆದಿದೆ. ಆದರೆ, ನಗರ ಪ್ರದೇಶಗಳಲ್ಲಿ ಇದರ ಪ್ರಮಾಣ ಹಿಂದಿನ ವರ್ಷಗಳಲ್ಲಿ ಕೇವಲ ಶೇ.65 ರಷ್ಟಿತ್ತು. ಸದ್ಯ ಅದು ಶೇ.94ಕ್ಕೆ ಏರಿಕೆಯಾಗಿದ್ದು, ಬಾಕಿ ಇರುವವರೂ ಕಡ್ಡಾಯವಾಗಿ ಸಹಿ ಮಾಡಿ ತಮ್ಮ ಫಾರ್ಮ್‌ಗಳನ್ನು ಸಲ್ಲಿಸಿ ನೋಂದಣಿ ಪೂರ್ಣಗೊಳಿಸಬೇಕಿದೆ ಎಂದರು.ಯಾರೂ ಕೂಡ ಎರಡು ಕಡೆ ಮತದಾನ ಮಾಡಲು ಈ ಬಾರಿ ಅವಕಾಶವಿಲ್ಲ. ತಂತ್ರಜ್ಞಾನ ಆಧಾರಿತ ಆ್ಯಪ್‌ಗಳ ಮೂಲಕ ಮತದಾರರ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಅಥವಾ ಪಾಸ್‌ಬುಕ್ ಸಂಖ್ಯೆಯನ್ನು ಟ್ರ‍್ಯಾಕ್ ಮಾಡಲಾಗುತ್ತದೆ. ಅಲ್ಲದೆ, ಫಾರ್ಮ್‌ಗಳಲ್ಲಿ ವಿಶಿಷ್ಟವಾದ **(Unique)** ಕ್ಯೂಆರ್ ಕೋಡ್ ಇರುವುದರಿಂದ ಯಾವುದೇ ರೀತಿಯ ನಕಲು ಅಥವಾ ಎರಡು ಬಾರಿ ನೋಂದಣಿಗೆ ಅವಕಾಶ ಇರುವುದಿಲ್ಲ ಎಂದರು.
ಮತದಾರರ ಅನುಕೂಲಕ್ಕಾಗಿ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಸುಗಮಗೊಳಿಸಲು ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಾಗೂ ಕಾರ್ಪೊರೇಷನ್ ವ್ಯಾಪ್ತಿಯ 40 ಕಡೆಗಳಲ್ಲಿ ವಿಶೇಷ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ ಹಾಗೂ ಸಾರ್ವಜನಿಕರ ದೂರು ಮತ್ತು ನೂತನ ನೋಂದಣಿಗಾಗಿ ಬಿಎಲ್‌ಒ ಸಹಾಯ ಕೇಂದ್ರ ಹಾಗೂ ನಾಗರಿಕ ಸಹಾಯ ಕೇಂದ್ರಗಳನ್ನು ಸಕ್ರಿಯಗೊಳಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು, ಇನಿಷಿಯಲ್ ಅಥವಾ ಇತರೆ ತಿದ್ದುಪಡಿಗಳಿದ್ದಲ್ಲಿ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಿದರೆ ತಕ್ಷಣವೇ ತಿದ್ದುಪಡಿ ಮಾಡಿಕೊಡಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ವಿಠ್ಠಲ್ ಮಾಧವ್ ರಾವ್, ಉಪ ಕಾರ್ಯದರ್ಶಿ ಮಮತ ಹೊಸಗೌಡರ್ ಇತರರು ಉಪಸ್ಥಿತರಿದ್ದರು. * ಆಕ್ಷೇಪಣೆ ಸ್ಥಳದಲ್ಲೇ ಬಗೆಹರಿಸಲು ಅನುಕೂಲ ಕಳೆದ ಚುನಾವಣೆಗಳಲ್ಲಿ ಕಂಡುಬಂದಿದ್ದ ಮ್ಯಾಪಿಂಗ್ ಕೊರತೆ ಹಾಗೂ ಮತಗಳ ವ್ಯತ್ಯಾಸವನ್ನು ತಡೆಗಟ್ಟಲು ಈ ಬಾರಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಕಾಂಗ್ರೆಸ್, ಬಿಜೆಪಿ ಸೇರಿದಂತೆ ವಿವಿಧ ರಾಷ್ಟ್ರೀಯ ಪಕ್ಷಗಳು ನೀಡಿರುವ ಬಿಎಲ್‌ಎ (ಬೂತ್‌ಮಟ್ಟದ ಏಜೆಂಟ್) ಪಟ್ಟಿಯನ್ನು ಸರ್ಕಾರಿ ಅಧಿಕಾರಿಗಳಾದ ಬಿಎಲ್‌ಒ (ಬೂತ್‌ಮಟ್ಟದ ಅಧಿಕಾರಿ) ಗಳೊಂದಿಗೆ ಜೋಡಿ ಮಾಡಲಾಗಿದೆ. ಇದರಿಂದ ಬೂತ್ ಮಟ್ಟದಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಎಲ್ಲ ಪಕ್ಷಗಳ ಸಮ್ಮುಖದಲ್ಲೇ ಸ್ಥಳದಲ್ಲೇ ಬಗೆಹರಿಸಲು ಅನುಕೂಲವಾಗಲಿದೆ ಎಂದು ಎಸ್‌ಎಸ್‌ಎಂ ಹೇಳಿದರು.