ಭಾರಿ ಮಳೆಗೆ ಶಾಲಾ ಕಾಲೇಜುಗಳಿಗೆ ಮುಂದುವರೆದ ರಜೆ

KannadaprabhaNewsNetwork | Published : Jul 16, 2024 12:38 AM

ಸಾರಾಂಶ

ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಗೆ ಸಾಕಷ್ಟು ಹಾನಿಯಾಗಿದೆ. ಅಲ್ಲಲ್ಲಿ ಮರಗಳು ಉರುಳಿದೆ. ಸಂಚಾರ ವ್ಯವಸ್ಥೆ ಕೂಡ ಅಸ್ತವ್ಯಸ್ತವಾಗಿದೆ.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ತಾಲೂಕಿನದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ಸಾಕಷ್ಟು ಹಾನಿಯೊಂದಿಗೆ ಅಲ್ಲಲ್ಲಿ ಮರಗಳು ಉರುಳಿರುವುದರಿಂದ ಸಂಚಾರ ವ್ಯವಸ್ಥೆ ಕೂಡ ಅಸ್ತವ್ಯಸ್ತವಾಗಿದೆ. ಅಲ್ಲದೇ ವಿದ್ಯುತ್‌ ಕೂಡ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ.

ತಾಲೂಕಿನ ಐಗೂರು, ತಾಕೇರಿ, ಅಬ್ಬೂರುಕಟ್ಟೆ, ದೊಡ್ಡಮಳ್ತೆ, ಶಾಂತಳ್ಳಿ, ತೋಳೂರುಶೆಟ್ಟಳ್ಳಿ ಸೇರಿದಂತೆ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಯಿಂದ ಹೆಚ್ಚಿನ ಹಾನಿಯಾದ ವರದಿಯಾಗಿದ್ದು, ವಿದ್ಯುತ್ ಮಾರ್ಗಗಳ ಮೇಲೆ ಮರಗಳು ಉರುಳಿದ್ದರಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಕತ್ತಲೆಯಲ್ಲಿ ಕಾಲ ಕಳೆಯುವಂತಾಯಿತು. ಪಟ್ಟಣಕ್ಕೆ ಮಾತ್ರ ಸಂಜೆ 6 ಗಂಟೆಗೆ ವಿದ್ಯುತ್ ನೀಡಲು ಇಲಾಖೆ ಸಫಲರಾದರೂ, ಗ್ರಾಮೀಣ ಭಾಗಗಳಲ್ಲಿ ಸಮಸ್ಯೆ ಪರಿಹರಿಸಲು ಸೆಸ್ಕ್‌ ಸಿಬ್ಬಂದಿ ಹೈರಾಣಾಗಿದ್ದಾರೆ.

ಕಳೆದ ಎರಡು ದಿನಗಳಿಂದ ಬಿಡುವು ನೀಡದೆ ಎಲ್ಲೆಡೆ ಮಳೆ ಸುರಿಯುತ್ತಿರುವುದರಿಂದ, ಜನರು ಮನೆಯಿಂದ ಹೊರಗೆ ಬರಲು ಪರದಾಡುವಂತಾಗಿದೆ. ಶಾಲಾ ಕಾಲೇಜಿಗೆ ರಜೆ ನೀಡಿದ್ದರಿಂದ ವಿದ್ಯಾರ್ಥಿಗಳು ಮನೆಯಲ್ಲಿ ಕಾಲ ಕಳೆಯುವಂತಾಯಿತು. ಸೋಮವಾರದ ಸಂತೆಗೆ ಹೆಚ್ಚಿನ ಜನರು ಬಾರದ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ನಷ್ಟ ಅನುಭವಿಸಬೇಕಾಗಿದೆ ಎಂದು ವ್ಯಾಪಾರಸ್ಥರು ತಿಳಿಸಿದರು.

ಗ್ರಾಮೀಣ ರಸ್ತೆಗಳಲ್ಲಿ ಮನೆ ಮತ್ತು ರಸ್ತೆಗೆ ಮರಗಳು ಉರುಳಿದ್ದರಿಂದ, ಸಂಚಾರಕ್ಕೆ ತೊಡಕಾದರೂ, ಹೆಚ್ಚಿನ ಹಾನಿ ಸಂಭವಿಸಲಿಲ್ಲ. ಶೀತಗಾಳಿ ಬೀಸುತ್ತಿರುವುದರಿಂದ ಚಳಿ ಹೆಚ್ಚಾಗಿದೆ. ಭಾನುವಾರ ಇಡೀ ರಾತ್ರಿ ಜೋರಾದ ಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದರಿಂದ ಮನೆಯೊಳಗೆ ಜನರು ನೆಮ್ಮದಿಯ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಜನರು ತಿಳಿಸಿದರು.

ಸಮೀಪದ ನೇಗಳ್ಳೆ ಕರ್ಕಳ್ಳಿ ಗ್ರಾಮದ ನಿವಾಸಿ ಜಯಂತಿ ಎಂಬುವವರ ವಾಸದ ಮನೆಯ ಮೇಲೆ ಬೃಹತ್ ಮರ ಉರುಳಿದ್ದರಿಂದ ಸಾಕಷ್ಟು ಹಾನಿಯಾಗಿದೆ. ಮನೆಯ ಮೇಲ್ಚಾವಣಿ, ಹೆಂಚುಗಳು, ಮನೆಯ ಗೋಡೆಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಜೀವಹಾನಿಯಾಗಿಲ್ಲ. ಸ್ಥಳಕ್ಕೆ ಕಂದಾಯ ಇಲಾಖೆಯ ಸಿಬ್ಬಂದಿ ತೆರಳಿ ಮಾಹಿತಿ ಪಡೆದರು.

ಇಲ್ಲಿನ ಮಹದೇಶ್ವರ ಬ್ಲಾಕ್‍ನ ನಿವಾಸಿ ಸುರೇಶ್ ಅವರ ಮನೆಗೆ ಕಾಂಪೌಂಡ್ ಕುಸಿದು ಹಾನಿಯಾಗಿದೆ. ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ತೆರಳಿ ಮಾಹಿತಿ ಪಡೆದರು. ಇಂದು ತಾಲೂಕಿನಾದ್ಯಂತ ಭಾರಿ ಮಳೆ ಸುರಿಯುತ್ತಿರುವುದರಿಂದ ನದಿ ತೊರೆಗಳು ತುಂಬಿ ಹರಿಯುತ್ತಿದ್ದು, ಅಪಾಯದ ಅಂಚಿನಲ್ಲಿವೆ, ಕೆಲವೆಡೆ ಕೃಷಿ ಭೂಮಿಯನ್ನು ಆಕ್ರಮಿಸಿ ನೀರು ಹರಿಯುತ್ತಿದೆ.

ಕಳೆದ 24 ಗಂಟೆ ಅವಧಿಯಲ್ಲಿ ಶಾಂತಳ್ಳಿ ಹೋಬಳಿಗೆ ಅತಿ ಹೆಚ್ಚು ಮಳೆಯಾಗಿದ್ದು, 14 ಸೆಮೀ ಮಳೆ ದಾಖಲಾಗಿದೆ. ಸೋಮವಾರಪೇಟೆ ಕಸಬಾ 9.44, ಶನಿವಾರಸಂತೆ 4.6 ಹಾಗೂ ಕೊಡ್ಲಿಪೇಟೆ 2.7 ಸೆಂಟೀ ಮೀಟರ್ ಮಳೆಯಾಗಿದೆ.

Share this article