ಮೇ ೩೧ರವರೆಗೆ ಆಸ್ತಿ ತೆರಿಗೆ ವಿನಾಯ್ತಿ ಅವಧಿ ವಿಸ್ತರಣೆ

KannadaprabhaNewsNetwork |  
Published : May 05, 2026, 01:30 AM IST
೪ಕೆಎಂಎನ್‌ಡಿ-೨ಅಮೃತಭವನ | Kannada Prabha

ಸಾರಾಂಶ

ಸಾರ್ವಜನಿಕರಿಂದ ತೆರಿಗೆ ಪಾವತಿಗೆ ರಾಜ್ಯ ಸರ್ಕಾರ ನೀಡಿದ್ದ ಶೇ.೫ರಷ್ಟು ವಿನಾಯ್ತಿಯನ್ನು ಮೇ ಅಂತ್ಯದವರೆಗೆ ವಿಸ್ತರಣೆ ಮಾಡಲಾಗಿದೆ. ತೆರಿಗೆ ಪಾವತಿ ಮಾಡುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಏಪ್ರಿಲ್ ೩೦ರ ವರೆಗೆ ಇದ್ದ ವಿನಾಯ್ತಿಯನ್ನು ಮೇ ೩೧ರವರೆಗೆ ವಿಸ್ತರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಾರ್ವಜನಿಕರಿಂದ ತೆರಿಗೆ ಪಾವತಿಗೆ ರಾಜ್ಯ ಸರ್ಕಾರ ನೀಡಿದ್ದ ಶೇ.೫ರಷ್ಟು ವಿನಾಯ್ತಿಯನ್ನು ಮೇ ಅಂತ್ಯದವರೆಗೆ ವಿಸ್ತರಣೆ ಮಾಡಲಾಗಿದೆ. ತೆರಿಗೆ ಪಾವತಿ ಮಾಡುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಏಪ್ರಿಲ್ ೩೦ರ ವರೆಗೆ ಇದ್ದ ವಿನಾಯ್ತಿಯನ್ನು ಮೇ ೩೧ರವರೆಗೆ ವಿಸ್ತರಿಸಲಾಗಿದೆ.

ಕಳೆದೊಂದು ತಿಂಗಳಲ್ಲಿ ನಗರಸಭೆಗೆ ವಸತಿ ಮತ್ತು ವಾಣಿಜ್ಯ ತೆರಿಗೆ ೫.೭೦ ಕೋಟಿ ರು. ಸಂಗ್ರಹವಾಗಿದೆ. ರಾಜ್ಯ ಸರ್ಕಾರದ ತೆರಿಗೆ ವಿನಾಯ್ತಿ ಅವಧಿ ವಿಸ್ತರಣೆಯಿಂದ ಮೇ ತಿಂಗಳಿನಲ್ಲೂ ೫ ರಿಂದ ೬ ಕೋಟಿ ರು. ತೆರಿಗೆ ಸಂಗ್ರಹವಾಗಬಹುದೆಂದು ನಿರೀಕ್ಷಿಸಲಾಗಿದೆ.

೨೦೨೫-೨೬ನೇ ಸಾಲಿನಲ್ಲಿ ನಗರಸಭೆ ತೆರಿಗೆ ಸಂಗ್ರಹದಲ್ಲಿ ಗುರಿ ಮೀರಿದ ಸಾಧನೆ ಮಾಡಿತ್ತು. ನಗರ ವ್ಯಾಪ್ತಿಯಲ್ಲಿರುವ ಆಸ್ತಿಗಳಿಂದ ತೆರಿಗೆ ಸಂಗ್ರಹದ ಒಟ್ಟು ಬೇಡಿಕೆ ೧೮.೮೫ ಕೋಟಿ ರು. ಇದ್ದರೂ, ೧೯.೨೩ ಕೋಟಿ ರು. ವಸೂಲಿ ಮಾಡುವುದರೊಂದಿಗೆ ಶೇ.೧೦೨ರಷ್ಟು ಪ್ರಗತಿ ಸಾಧಿಸಿತ್ತು.

ನಗರ ವ್ಯಾಪ್ತಿಯೊಳಗೆ ೨೪, ೫೩೯ ವಸತಿ, ೨೫೭೫ ವಾಣಿಜ್ಯ ಹಾಗೂ ೬೫೪೬ ಖಾಲಿ ನಿವೇಶನ ಸೇರಿ ೩೩,೬೬೦ ಒಟ್ಟು ಆಸ್ತಿಗಳಿವೆ. ಇದರಲ್ಲಿ ವಸತಿಯಿಂದ ೧೩.೬ ಕೋಟಿ ರು., ವಾಣಿಜ್ಯದಿಂದ ೫.೨೩ ಕೋಟಿ ರು. ಹಾಗೂ ಖಾಲಿ ನಿವೇಶನದಿಂದ ೪೦ ಲಕ್ಷ ರು. ಸೇರಿ ೧೯.೨೩ ಕೋಟಿ ರು. ಕರ ಸಂಗ್ರಹಿಸುವ ಮೂಲಕ ದಾಖಲೆಯನ್ನು ಬರೆದಿತ್ತು.

೨೦೨೬-೨೭ನೇ ಸಾಲಿನಲ್ಲಿ ಆಸ್ತಿ ತೆರಿಗೆಯನ್ನು ವಾಸದ ಕಟ್ಟಡಗಳಿಗೆ ಶೇ.೪ರಷ್ಟು, ವಾಣಿಜ್ಯ ಮತ್ತು ಕೈಗಾರಿಕಾ ಕಟ್ಟಡಗಳಿಗೆ ಶೇ.೫ ಹಾಗೂ ಖಾಲಿ ನಿವೇಶನಗಳಿಗೆ ಶೇ.೩ರಷ್ಟು ತೆರಿಗೆಯನ್ನು ಸರ್ಕಾರದ ನಿರ್ದೇಶನದಂತೆ ಹೆಚ್ಚಿಸಲಾಗಿದೆ. ಇದರ ನಡುವೆಯೂ ಸಾರ್ವಜನಿಕರು ತೆರಿಗೆ ಪಾವತಿಗೆ ಹೆಚ್ಚಿನ ಉತ್ಸಾಹ ತೋರುತ್ತಿದ್ದಾರೆ. ಬಾಕಿ ಉಳಿಸಿಕೊಂಡರೆ ಬಡ್ಡಿ ಪಾವತಿಸಬೇಕಾಗಬಹುದೆಂಬ ಭಯದಿಂದ ತೆರಿಗೆ ಪಾವತಿಸಿ ದಂಡದಿಂದ ಪಾರಾಗುತ್ತಿದ್ದಾರೆ.

ಮೊದಲ ಬಾರಿಗೆ ವಿನಾಯ್ತಿ:

ಅನಧಿಕೃತ ಸ್ವತ್ತುಗಳಿಗೆ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಶೇ.೫ರಷ್ಟು ವಿನಾಯ್ತಿ ನೀಡಿದೆ. ಈವರೆಗೆ ಅಧಿಕೃತ ಕಟ್ಟಡಗಳಿಗೆ ಮಾತ್ರ ಶೇ.೫ರಷ್ಟು ತೆರಿಗೆ ವಿನಾಯ್ತಿ ಅನುಕೂಲ ದೊರಕುತ್ತಿತ್ತು. ಜೊತೆಗೆ ರಾಜ್ಯ ಸರ್ಕಾರ ಅನಧಿಕೃತ ಕಟ್ಟಡಗಳನ್ನು ಬಿ-ಖಾತೆಗೆ ಸೇರಿಸುವಂತೆ ಆದೇಶ ಹೊರಡಿಸಿರುವುದರಿಂದ ಅದರ ಮೇಲೆ ಬೀಳುತ್ತಿದ್ದ ಹೆಚ್ಚುವರಿ ಬಡ್ಡಿ ಹೊರೆಯೂ ಜನರಿಗೆ ಕಡಿಮೆಯಾಗಲಿವೆ. ಅದರಿಂದಲೂ ಜನರಿಗೆ ವಿನಾಯ್ತಿ ಸಿಗಲಿದೆ ಹಾಗೂ ಸರ್ಕಾರ ಶೇ.೫ರಷ್ಟು ತೆರಿಗೆ ವಿನಾಯ್ತಿಯನ್ನು ಒಂದು ತಿಂಗಳವರೆಗೆ ವಿಸ್ತರಣೆ ಮಾಡಿರುವುದರಿಂದ ತೆರಿಗೆ ಹೊರೆ ಕಡಿಮೆಯಾಗುವುದರಿಂದ ಸಾರ್ವಜನಿಕರು ತೆರಿಗೆ ಪಾವತಿಗೆ ಇನ್ನೂ ಹೆಚ್ಚಿನ ಉತ್ಸಾಹ ತೋರುವ ಸಾಧ್ಯತೆಗಳಿವೆ.

ತೆರಿಗೆ ಪಾವತಿ ಸಂಬಂಧ ಸಾರ್ವಜನಿಕರಲ್ಲಿ ಜಾಗೃತಿ ಹೆಚ್ಚಿರುವುದರಿಂದ ತೆರಿಗೆ ಪಾವತಿಗೆ ಹಿಂದೆಂದಿಗಿಂತಲೂ ಈಗ ಹೆಚ್ಚಿನ ಉತ್ಸಾಹ ತೋರುತ್ತಿದ್ದಾರೆ. ನಗರಸಭೆಯ ಎಚ್‌ಡಿಎಫ್‌ಸಿ ಬ್ಯಾಂಕಿನ ಪಕ್ಕದಲ್ಲಿ ತೆರಿಗೆ ಪಾವತಿಗೆ ಜನರು ಕ್ಯೂ ನಿಲ್ಲುತ್ತಿರುವುದು ಕಂಡುಬರುತ್ತಿದೆ. ಇದಕ್ಕಾಗಿ ಪ್ರತ್ಯೇಕ ಕೌಂಟರ್‌ನ್ನೇ ತೆರೆದು ತೆರಿಗೆ ಪಾವತಿಸಲು ಬರುವ ಜನರಿಗೆ ಅನುಕೂಲ ಕಲ್ಪಿಸಲಾಗಿದೆ.

ಎಷ್ಟೋ ವರ್ಷಗಳಿಂದ ತೆರಿಗೆ ಪಾವತಿಸದವರೂ ಕೂಡ ಇತರರು ತೆರಿಗೆ ಪಾವತಿಸುತ್ತಿರುವುದನ್ನು ಕಂಡು ತಾವೂ ಕೂಡ ತೆರಿಗೆ ಪಾವತಿಸುವ ಮೂಲಕ ಆರ್ಥಿಕ ಹೊರೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಮುಂದಾಗುತ್ತಿದ್ದಾರೆ. ಸಾಮಾನ್ಯವಾಗಿ ಪ್ರತಿ ವರ್ಷವೂ ರಾಜ್ಯ ಸರ್ಕಾರ ಶೇ.೫ರಷ್ಟು ತೆರಿಗೆ ವಿನಾಯ್ತಿಯನ್ನು ಏಪ್ರಿಲ್ ತಿಂಗಳಿಗಷ್ಟೇ ಸೀಮಿತಗೊಳಿಸುತ್ತಿತ್ತು. ಈ ಬಾರಿ ಮೇ ಅಂತ್ಯದವರೆಗೆ ವಿಸ್ತರಿಸಿದೆ. ಎರಡು ಅಥವಾ ಮೂರು ವರ್ಷಗಳಿಗೊಮ್ಮೆ ಈ ರೀತಿಯ ವಿನಾಯ್ತಿಯನ್ನು ಎರಡು ತಿಂಗಳ ಅವಧಿಗೆ ವಿಸ್ತರಿಸಿರುವ ನಿದರ್ಶನಗಳಿವೆ. ತೆರಿಗೆ ಪಾವತಿಗೆ ಸಾರ್ವಜನಿಕರು ಹೆಚ್ಚಿನ ಮಹತ್ವ ನೀಡುವುದರೊಂದಿಗೆ ಅಭಿವೃದ್ಧಿಗೆ ಸಹಕಾರಿಯಾಗಿ ನಿಲ್ಲಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ.

ರಾಜ್ಯ ಸರ್ಕಾರ ತೆರಿಗೆ ವಿನಾಯ್ತಿಯ ಅವಧಿಯನ್ನು ಮೇ ಅಂತ್ಯದವರೆಗೆ ವಿಸ್ತರಿಸಿದೆ. ಇದರಿಂದ ತೆರಿಗೆ ಪಾವತಿದಾರರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅನಧಿಕೃತ ಕಟ್ಟಡಗಳನ್ನು ಬಿ-ಖಾತೆಗೆ ಸೇರಿಸುವಂತೆ ಸರ್ಕಾರ ಆದೇಶಿಸಿರುವುದರಿಂದ ಹೆಚ್ಚುವರಿ ಬಡ್ಡಿಯ ಹೊರೆಯೂ ಕಡಿಮೆಯಾಗಲಿದೆ. ಶೇ.೫ರಷ್ಟು ತೆರಿಗೆ ವಿನಾಯ್ತಿಯಿಂದ ಏಪ್ರಿಲ್ ತಿಂಗಳಿನಲ್ಲಿ ೫.೭೦ ಕೋಟಿ ರು. ತೆರಿಗೆ ಸಂಗ್ರಹವಾಗಿದೆ. ಅನಧಿಕೃತ ಸ್ವತ್ತುಗಳಿಗೆ ಇದೇ ಮೊದಲ ಬಾರಿಗೆ ಶೇ.೫ರಷ್ಟು ರಿಯಾಯ್ತಿತಿ ನೀಡಲಾಗಿದೆ. ಸಾರ್ವಜನಿಕರು ಸದುಪಯೋಗ ಪಡೆದು ಸಕಾಲದಲ್ಲಿ ತೆರಿಗೆ ಪಾವತಿಸಿ, ಅಭಿವೃದ್ಧಿಗೆ ಸಹಕರಿಸಿ.

-ಯು.ಪಿ.ಪಂಪಾಶ್ರೀ, ಆಯುಕ್ತರು, ಮಂಡ್ಯ

ತೆರಿಗೆ ವಸೂಲಾತಿಯಲ್ಲಿ ಶೇ.108 ರಷ್ಟು ಸಾಧನೆ, ಸಚಿವರಿಂದ ಅಭಿನಂದನೆ

ಪಾಂಡವಪುರ:ತಾಲೂಕಿನ 24 ಗ್ರಾಮ ಪಂಚಾಯ್ತಿಗಳು 2025-26ನೇ ಸಾಲಿನಲ್ಲಿ ತೆರಿಗೆ ವಸೂಲಾತಿಯಲ್ಲಿ ಶೇ.108 ರಷ್ಟು ಸಾಧನೆ ಮಾಡುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ವತಿಯಿಂದ ತಾಲೂಕಿನ ಪಿಡಿಒ, ಕಾರ್ಯದರ್ಶಿ ಹಾಗೂ ಬಿಲ್ ಕಲೆಕ್ಟರ್‌ಗಳ ಕೆಲಸ ಪ್ರಸಂಶಿಸಿ ತಾಲೂಕಿನ ಪರ ತಾಪಂ ಇಒ ಎಂ.ಎಸ್.ವೀಣಾ ಅವರಿಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಅಭಿನಂದನ ಪತ್ರ ನೀಡಿ ಗೌರವ ಸಲ್ಲಿಸಿದರು. ಸೆಸ್ಕ್ ಅಧ್ಯಕ್ಷ ರಮೇಶ್‌ಬಂಡಿಸಿದ್ದೇಗೌಡ, ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ಎಚ್.ಟಿ.ಮಂಜು, ಪಿರವಿಕುಮಾರ್, ಎಂಎಲ್‌ಸಿ ದಿನೇಶ್‌ಗೂಳಿಗೌಡ, ಜಿಲ್ಲಾಧಿಕಾರಿ ಡಾ.ಕುಮಾರ್, ಸಿಇಒ ನಂದಿನಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಪ ಚುನಾವಣೆಯಲ್ಲಿ ಗೆಲುವು: ಕಾಂಗ್ರೆಸ್ಸಿಗರ ಸಂಭ್ರಮ ಆಚರಣೆ
ಪಶ್ಚಿಮ ಬಂಗಾಳಕ್ಕೆ ಬಿಜೆಪಿಯಿಂದ ಹೊಸ ಬೆಳಕು: ಡಾ.ನಿಂಗರಾಜ್‌ಗೌಡ