ಸವಣೂರು: ಕಂದಾಯ ಇಲಾಖೆಯಲ್ಲಿ ಮಾಸಾಶನಕ್ಕೆ ಅರ್ಜಿ ಸಲ್ಲಿಸಿದರೆ ೬ರಿಂದ ೭ ಸಾವಿರ ರು.ಗಳನ್ನು ಅಂಗವಿಕಲರಿಂದ ಸುಲಿಗೆ ಮಾಡಲಾಗುತ್ತಿದೆ ಎಂಬ ಆರೋಪ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ವಿಶೇಷಚೇತನರ ಕುಂದು ಕೊರತೆಯ ಸಭೆಯಲ್ಲಿ ಕೇಳಿ ಬಂದಿತು.ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ವಿಶೇಷಚೇತನರ ಕುಂದುಕೊರತೆಗಳ ಸಭೆ ಏಕಾಏಕಿ ಪಟ್ಟಣದ ಹೊರವಲಯದಲ್ಲಿರುವ ತಾಲೂಕು ಪಂಚಾಯತಿ ಸಭಾಂಗಣಕ್ಕೆ ಸ್ಥಳಾಂತರಗೊಂಡಿದ್ದು ವಿಶೇಷತನರು ಪರದಾಡುವಂತಾಯಿತು. ತ್ರಿಚಕ್ರ ವಾಹನ ಹೊಂದಿದ್ದ ಬೆರಳಣಿಕೆಯಷ್ಟು ಜನ ವಿಶೇಷಚೇತನರು ಮಾತ್ರ ಸಭೆಗೆ ತೆರಳುವಂತಾಯಿತು. ಇನ್ನುಳಿದವರು ಸಭೆಗೆ ಗೈರಾಗಬೇಕಾದ ಅನಿವಾರ್ಯತೆ ಎದುರಾಯಿತು. ಸಭೆ ಏರ್ಪಡಿಸಿದ್ದು ವಿಶೇಷಚೇತನರ ಕುಂದು ಕೊರತೆಗಳನ್ನು ಈಡೇರಿಸುವುದಕ್ಕೋ ಅಥವಾ ಅವರಿಗೆ ಇನ್ನಷ್ಟು ತೊಂದರೆ ನೀಡಿ ಸಭೆಯಿಂದ ದೂರ ಇಡುವ ಅಧಿಕಾರಿಗಳ ಧೋರಣೆ ಹಲವಾರು ಸಮಸ್ಯೆಗಳನ್ನು ಹೊತ್ತು ತಂದಿದ್ದ ಗ್ರಾಮೀಣ ಪ್ರದೇಶದಿಂದ ಆಗಮಿಸಿದ ವಿಶೇಷಚೇತನ ಅಸಹಾಯಕರ ಆಕ್ರೋಶಕ್ಕೆ ಕಾರಣವಾಯಿತು.ಕಂದಾಯ ಇಲಾಖೆಯಲ್ಲಿ ವಿಶೇಷಚೇತನರು ಮಾಸಾಶನಕ್ಕೆ ಅರ್ಜಿ ಸಲ್ಲಿಸಿದರೆ, ಪ್ರಮಾಣ ಪತ್ರ ಪಡೆಯಲು ೬-೭ ತಿಂಗಳು ಅಲೆದಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಗ್ರಾಮ ಲೆಕ್ಕಾಧಿಕಾರಿಯಿಂದ ಹಿಡಿದು ಸಂಬಂಧಿಸಿದ ವಿವಿಧ ಅಧಿಕಾರಿಗಳಿಗೆ ಸುಮಾರು ೮ ಸಾವಿರ ವರೆಗೆ ಲಂಚ ನೀಡಿ ಪ್ರಮಾಣ ಪತ್ರ ಪಡೆಯಬೇಕಾದ ಪರಿಸ್ಥಿತಿ ವಿಶೇಷಚೇತನರದ್ದಾಗಿದೆ. ಅನ್ಯ ಕಾರ್ಯಗಳಿಗೆ ಎಲ್ಲ ಅಂಗಾಂಗಳು ಸರಿ ಇದ್ದವರಿಂದ ಬೇಕಾದರೆ, ಹಣ ದೋಚುತ್ತಾರೆ ಆದರೆ ವಿಕಲಾಂಗರನ್ನು ಸಹ ಸುಲಿಗೆ ಮಾಡುತ್ತಿರುವ ಅಧಿಕಾರಿಗಳಿಗೆ ಮಾನವೀಯತೆ ಇದೆಯೇ ಎಂಬ ಪ್ರಶ್ನೆಗಳು ವಿಶೇಷಚೇತನರಿಂದ ಕೇಳಿಬಂದವು. ಲಂಚ ಬೇಡಿಕೆ ಕುರಿತು ತಹಸೀಲ್ದಾರರಿಗೆ ಮನವರಿಕೆ ಮಾಡಿಕೊಟ್ಟ ವಿಶೇಷಚೇತನರು, ಕೂಡಲೇ ತಹಸೀಲ್ದಾರರು ಸಂಬಂಧಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಕಳೆದ ೫-೬ ತಿಂಗಳುಗಳಿಂದ ವಿಶೇಷಚೇತನರ ಮಾಸಾಶನ ಸ್ಥಗಿತಗೊಂಡಿದ್ದು, ಕೂಡಲೇ ಸರಿಪಡಿಸಿ ವಿಶೇಷಚೇತನರಿಂದ ಏನಾದರೂ ಅಗತ್ಯ ದಾಖಲೆಗಳು ಬೇಕಿದ್ದರೆ ಪಡೆದುಕೊಂಡು ಮಾಸಾಶನಕ್ಕೆ ಅನುಕೂಲ ಕಲ್ಪಿಸಿಕೊಡಿ ಎಂದು ತಹಸೀಲ್ದಾರ್‌ಗೆ ಮನವಿ ಮಾಡಿದರು. ತಾಲೂಕು ಮಟ್ಟದ ಸರಕಾರಿ ಮತ್ತು ಅರೆ ಸರಕಾರಿ ಇಲಾಖೆಗಳಲ್ಲಿ ವಿಕಲಸ್ನೇಹಿ ವಾತಾವರಣ ನಿರ್ಮಾಣ ಮಾಡಬೇಕು. ಸರಕಾರಿ ಇಲಾಖೆಗಳು, ಶಾಲಾ ಕಾಲೇಜುಗಳಲ್ಲಿ, ಬ್ಯಾಂಕ್‌ಗಳಲ್ಲಿ ವಿಶೇಷಚೇತನರಿಗೆ ರ‍್ಯಾಂಪ್ ವ್ಯವಸ್ಥೆ, ವ್ಹೀಲ್ ಚೇರ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ವಿಶೇಷಚೇತನರು ಮನವಿ ಮಾಡಿದರು. ಸವಣೂರ ಪಟ್ಟಣದ ಬಸ್ ನಿಲ್ದಾಣದಲ್ಲಿ ಇರುವ ಶೌಚಾಲಯ ಸಂಪೂರ್ಣ ಸ್ಥಗಿತಗೊಂಡಿದ್ದು, ವಿಶೇಷಚೇತನರ ಬದಲಾಗಿ ಅನ್ಯರೆ ಅದನ್ನು ಬಳಕೆ ಮಾಡಿದ ಪರಿಣಾಮ ಶೌಚಾಲಯ ಇದ್ದೂ ಇಲ್ಲದಂತಾಗಿದೆ. ಆದ್ದರಿಂದ ವಿಶೇಷಚೇತನರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು. ಈ ಕುರಿತು ಪುರಸಭೆಯಲ್ಲಿನ ೫% ಅನುದಾನವನ್ನು ಬಳಕೆ ಮಾಡಿಕೊಂಡು ವಿಶೇಷಚೇತನರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಿಕೊಡಲು ಪುರಸಭೆ ವ್ಯವಸ್ಥಾಪಕರಿಗೆ ಸೂಚಿಸಲಾಯಿತು. ಪ್ರತಿಕ್ರಿಯಿಸಿದ ವ್ಯವಸ್ಥಾಪಕ ಎಂ.ಬಿ. ದೊಡ್ಡಣ್ಣನವರ, ಪುರಸಭೆಯಿಂದ ಈಗಾಗಲೇ ಕ್ರಿಯಾಯೋಜನೆಯನ್ನು ತಯಾರಿಸಲಾಗಿದೆ ಎಂದರು. ತಾ.ಪಂ ಇಓ ಮಾತನಾಡಿ, ಆ ಕ್ರಿಯಾಯೋಜನೆಯನ್ನು ತಿದ್ದುಪಡಿ ಮಾಡಿ ವಿಶೇಷಚೇತನರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಿಕೊಡಲು ಪುರಸಭೆ ವ್ಯವಸ್ಥಾಪಕರಿಗೆ ಸೂಚಿಸಲಾಯಿತು.
ವಿಶೇಷಚೇತನರ ಕುಂದು ಕೊರತೆಗಳನ್ನು ಸ್ಥಳದಲ್ಲಿಯೇ ಸರಿಪಡಿಸಲು ಆಗಮಿಸಬೇಕಿದ್ದ ೨೭ ಇಲಾಖೆಯ ಅಧಿಕಾರಿಗಳ ಪೈಕಿ, ಕೇವಲ ಬೆರಳೆಣಿಕೆಯಷ್ಟು ಅಧಿಕಾರಿಗಳು ಸಭೆಗೆ ಹಾಜರಾಗಿದ್ದು ಪ್ರತಿಬಾರಿ ಅಧಿಕಾರಿಗಳ ಗೈರಿನಿಂದಾಗಿ ವಿಶೇಷಚೇತನರ ಆಕ್ರೋಶಕ್ಕೆ ಕಾರಣವಾಗಿದ್ದು ಕೂಡಲೇ ತಹಸೀಲ್ದಾರರು ಗೈರಾದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸಭೆಯಲ್ಲಿ ಆಗ್ರಹಿಸಲಾಯಿತು.