ವಂತಿಕೆ, ಶುಲ್ಕದ ಹೆಸರಲ್ಲಿ ಪೋಷಕರ ಸುಲಿಗೆ

KannadaprabhaNewsNetwork | Published : May 7, 2025 12:49 AM
Follow Us

ಸಾರಾಂಶ

ಚಿತ್ರದುರ್ಗದ ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ

ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಪ್ರಾಥಮಿಕ, ಪ್ರೌಢ ಶಾಲೆ ಅಡ್ಮಿಷನ್ ಕ್ಲೋಜ್ । ಸರ್ಕಾರದ ನಿಯಮಾವಳಿ ಉಲ್ಲಂಘನೆ ಚಿಕ್ಕಪ್ಪನಹಳ್ಳಿ ಷಣ್ಮುಖ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಇಂಗ್ಲಿಷ್ ಮೇಲಿನ ವ್ಯಾಮೋಹ, ಮಕ್ಕಳ ವೃತ್ತಿ ಶಿಕ್ಷಣಕ್ಕೆ ಕಳಿಸಲೇಬೇಕೆಂಬ ಪೋಷಕರ ಕಾಳಜಿಗಳ ಚಿತ್ರದುರ್ಗದ ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ದುರುಪಯೋಗ ಪಡಿಸಿಕೊಂಡು ಸುಲಿಗೆಗೆ ಇಳಿದಿವೆ ಎಂಬ ಆರೋಪಗಳು ಸಾರ್ವತ್ರಿಕವಾಗಿ ಕೇಳಿ ಬಂದಿವೆ. ವಂತಿಕೆ ಹಾಗೂ ಶುಲ್ಕ ವಸೂಲಿ ಎರಡರಲ್ಲಿಯೂ ರಾಮ ಮತ್ತು ಕೃಷ್ಣನ ಲೆಕ್ಕಗಳದ್ದೇ ಪಾರುಪತ್ಯೆ. ಒಂದೆಡೆ ಸರ್ಕಾರ ರೂಪಿಸಿರುವ ನಿಯಮಾವಳಿಗೆ ಸಡ್ಡು ಹೊಡೆದರೆ ಮತ್ತೊಂಡೆದೆ ಪೋಷಕರ ಸಾಲದ ಕೂಪಕ್ಕೆ ಸಿಲುಕಿಸಿದಂತಾಗಿದೆ.

ಖಾಸಗಿ ಶಾಲೆ ಎಂದಾಕ್ಷಣ ಸರ್ಕಾರದಿಂದ ಅನುಮತಿ ಪಡೆದು ಅಂಗಡಿ ತೆರೆದು ಬೇಕಾಬಿಟ್ಟಿಯಾಗಿ ವ್ಯಾಪಾರ ಮಾಡಿಕೊಳ್ಳುವುದಲ್ಲ. ತಮ್ಮದೇ ಆದ ಸಂವಿಧಾನ ರೂಪಿಸಿಕೊಂಡು ಆನೆ ನಡೆದದ್ದೇ ಹಾದಿ ಎಂಬಂತೆ ಮುನ್ನುಗ್ಗಿದರೆ ರಾಜ್ಯ ಸರ್ಕಾರ ರೂಪಿಸಿರುವ ನಿಯಮಾವಳಿಗಳೆಂಬ ಅಂಕುಶ ತಿವಿಯುತ್ತದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ( District Education Regulating Authority) ಸೂಚಿಸುವ ನಿರ್ದೇಶನಗಳ ಪಾಲಿಸುತ್ತಾ ಶೈಕ್ಷಣಿಕ ವ್ಯ್ವವಸ್ಥೆ ನಿರ್ವಹಣೆ ಮಾಡಬೇಕಿದೆ.

ಕರ್ನಾಟಕ ಪ್ರೌಢಶಿಕ್ಷಣ ಅಧಿನಿಯಮ 1983ರ ಸೆಕ್ಷನ್ 47 ಹಾಗೂ ಕರ್ನಾಟಕ ಶಿಕ್ಷಣ ಸಂಸ್ಥೆಗಳು (ವರ್ಗೀಕರಣ, ನಿಯಂತ್ರಣ, ಮತ್ತು ಪಠ್ಯಕ್ರಮದ ನಿಗಧೀಕರಣ) ನಿಯಮಗಳು 1995ರ 14, ಉಪ ನಿಯಮ (7) ರಂತೆ ಮಕ್ಕಳ ದಾಖಲಾತಿ ಪ್ರಕ್ರಿಯೆ ಕಡ್ಡಾಯವಾಗಿ ಪ್ರತಿವರ್ಷ ಏಪ್ರಿಲ್‌ನಲ್ಲಿ ಪ್ರಾರಂಭಿಸಬೇಕು. ಮುಂಚಿತವಾಗಿ ದಾಖಲಾತಿ ನಿರ್ವಹಿಸಿದರೆ ನಿಯಮಗಳ ಉಲ್ಲಂಘನೆಯಾಗುತ್ತದೆ ಎಂದು ಸರ್ಕಾರ ಸ್ಪಷ್ಟವಾಗಿ ಸೂಚಿಸಿದೆ.

ಅಚ್ಚರಿ ಎಂದರೆ ಜಿಲ್ಲೆಯ ಬಹುತೇಕ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮಾರ್ಚ್‌ನಲ್ಲಿಯೇ ಪ್ರವೇಶ ಪ್ರಕ್ರಿಯೆ ಆರಂಭಿಸಿ ಏಪ್ರಿಲ್ ಅಂತ್ಯದೊಳಗೆ ಪೂರ್ಣಗೊಳಿಸಿವೆ.

ಪ್ರತಿಷ್ಠಿತ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಹೋದರೆ ಸೀಟಿಲ್ಲ, ಮುಗಿದಿವೆ. ಒಂದೆರೆಡು ದಿನ ಬಿಟ್ಟು ಬನ್ನಿ ಎಂಬ ಡಿಮ್ಯಾಂಡ್ ಸೃಷ್ಟಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಹಜವಾಗಿಯೇ ವಂತಿಕೆ ಹೆಚ್ಚಳವಾಗುತ್ತದೆ. ಮಗ ಇಲ್ಲವೇ ಮಗಳಿಗೆ ಸೀಟು ಸಿಕ್ಕಿತೆಂಬ ಖುಷಿಯಲ್ಲಿ ಪೋಷಕರು ಖಾಸಗಿ ಶಾಲೆಗಳು ಬೀಸುವ ಬಲೆಗೆ ಸಿಲುಕಿ ಸಾಲದ ಪ್ರಮಾಣ ಹೆಚ್ಚಿಗೆ ಮಾಡಿಕೊಳ್ಳುತ್ತಿದ್ದಾರೆ.

ಕರ್ನಾಟಕ ಶಿಕ್ಷಣ ಸಂಸ್ಥೆ ನಿಯಮಗಳು 1995ರ ನಿಯಮ 14ರ ಅನ್ವಯ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ದಾಖಲಾತಿಗಾಗಿ ಮುಕ್ತ ಹಾಗೂ ಪಾರದರ್ಶಕ ಕಾರ್ಯವಿಧಾನಗಳನ್ನು ಅನುಸರಿಸಬೇಕೆಂದಿದ್ದರೂ ಎಲ್ಲವೂ ಗುಪ್ತವಾಗಿ ನಡೆಯುತ್ತದೆ. ವಿದ್ಯಾರ್ಥಿಗಳ ಪ್ರವೇಶಕ್ಕೆ ವಿಧಿಸಲಾದ ಮಾನದಂಡಗಳು ಎಲ್ಲಿಯೂ ಗೋಚರಿಸುವುದಿಲ್ಲ. ಶಿಕ್ಷಣ ಸಂಸ್ಥೆಗಳು ಪ್ರವೇಶಕ್ಕೆ ತಮ್ಮದೇ ಆದ ಮಾನದಂಡ ಹಾಗೂ ದಾಖಲಾತಿ ವೇಳಾಪಟ್ಟಿ ಅನುಸರಿಸುವಂತಿಲ್ಲ. ಹಾಗೆ ಮಾಡುವುದರಿಂದ ಸರ್ಕಾರಿ ನೌಕರರಾಗಿರುವ ಪೋಷಕರಿಗೆ ತೊಂದರೆ ಆಗುತ್ತದೆ. ಏಪ್ರಿಲ್ ಹಾಗೂ ಮೇ ತಿಂಗಳು ಸಾಮಾನ್ಯ ವರ್ಗಾವಣೆ ಅವಧಿಯಾಗಿದ್ದು ಮಾರ್ಚ್ ತಿಂಗಳಲ್ಲಿಯೇ ಪ್ರವೇಶ ಅಂತಿಮಗೊಳಿಸಿದರೆ ವರ್ಗಾವಣೆಯಾದ ಪೋಷಕರ ಮಕ್ಕಳು ತೊಂದರೆ ಅನುಭವಿಸಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಸರ್ಕಾರ ಏಕರೂಪದ ನಿಯಮಾವಳಿ ರೂಪಿಸಿ ಪಾಲಿಸುವಂತೆ ಸೂಚಿಸಿದೆಯಾದರೂ ಬಹುತೇಕ ಶಿಕ್ಷಣ ಸಂಸ್ಥೆಗಳು ಉಲ್ಲಂಘಿಸಿವೆ.

ಶುಲ್ಕ ಹಾಗೂ ವಂತಿಕೆ ಸಂಗ್ರಹಿಸುವುದರ ಕುರಿತು ಶಿಕ್ಷಣ ಇಲಾಖೆಗೆ ಮಾಹಿತಿ ಕೊಟ್ಟ ನಂತರವೇ ಪ್ರವೇಶ ಪ್ರಕ್ರಿಯೆ ಆರಂಭಿಸಬೇಕಿದೆ. ಆದರೆ ಬಹುತೇಕ ಖಾಸಗಿ ವಿದ್ಯಾಸಂಸ್ಥೆಗಳು ಶಿಕ್ಷಣ ಇಲಾಖೆಗೆ ಶುಲ್ಕ ಸಂಗ್ರಹದ ಮಾಹಿತಿ ನೀಡದೇ ಪ್ರವೇಶ ಮುಗಿಸಿವೆ. ಕೈಗೊಂದಿಷ್ಟು ಕ್ಯಾಷ್, ಉಳಿದಂತೆ ಬ್ಯಾಂಕ್ ಅಕೌಂಟ್ ಗೆ ನೇರ ಪಾವತಿ ಮೂಲಕ ಹಣ ಪಡೆದಿರುವ ಕೆಲ ಖಾಸಗಿ ವಿದ್ಯಾಸಂಸ್ಥೆಗಳು ರಾಮ ಮತ್ತು ಕೃಷ್ಣನ ಲೆಕ್ಕಗಳ ಸೊಗಸಾಗಿ ನಿರ್ವಹಣೆ ಮಾಡಿವೆ. ಸುಲಿಗೆಯಲ್ಲೂ ನಾಜೂಕುತನ ಪ್ರದರ್ಶಿವೆ ಎಂದು ಹೇಳಲಾಗಿದೆ.