ವ್ಯಕ್ತಿತ್ವ ವಿಕಸನಕ್ಕೆ ಪಠ್ಯೇತರ ಚಟುವಟಿಕೆ ಪೂರಕ: ಡಿಸಿ ಡಾ. ವಿಜಯಮಹಾಂತೇಶ

KannadaprabhaNewsNetwork |  
Published : Jun 18, 2025, 12:29 AM IST
ಫೋಟೊ ಶೀರ್ಷಿಕೆ: 16ಹೆಚ್‌ವಿಆರ್2 ಹಾವೇರಿ: ನಗರದ ಕೆಎಲ್‌ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಾತನಾಡಿದರು.  | Kannada Prabha

ಸಾರಾಂಶ

ಬದುಕಿನ ಅವಿಭಾಜ್ಯ ಅಂಗವಾಗಿ ಶಿಕ್ಷಣ ಒಂದೆಡೆ ಇದ್ದರೆ, ಮತ್ತೊಂದೆಡೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ವಿಕಾಸಕ್ಕೆ ನಾಂದಿಯಾಗುತ್ತವೆ. ಪ್ರಬಲ ವ್ಯಕ್ತಿತ್ವ ರೂಪಿಸಿಕೊಳ್ಳುವಲ್ಲಿ ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳು ಸಹಕಾರಿಯಾಗಿವೆ.

ಹಾವೇರಿ: ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಮುನ್ನಡೆಸುವ ಜವಾಬ್ದಾರಿ ಯುವಕರ ಮೇಲಿದೆ. ನಿರಂತರ ಕ್ರಿಯಾಶೀಲತೆಯ ಕಾರ್ಯನಡೆಯಿಂದ ಭದ್ರ ಭಾರತದ ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಮಹತ್ವ ಪಡೆದುಕೊಂಡಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.ನಗರದ ಕೆಎಲ್‌ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಜರುಗಿದ 2024- 25ನೇ ಶೈಕ್ಷಣಿಕ ವರ್ಷದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಬದುಕಿನ ಅವಿಭಾಜ್ಯ ಅಂಗವಾಗಿ ಶಿಕ್ಷಣ ಒಂದೆಡೆ ಇದ್ದರೆ, ಮತ್ತೊಂದೆಡೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ವಿಕಾಸಕ್ಕೆ ನಾಂದಿಯಾಗುತ್ತವೆ. ಪ್ರಬಲ ವ್ಯಕ್ತಿತ್ವ ರೂಪಿಸಿಕೊಳ್ಳುವಲ್ಲಿ ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳು ಸಹಕಾರಿಯಾಗಿವೆ ಎಂದರು.

ಪ್ರತಿ ವಿದ್ಯಾರ್ಥಿಯಲ್ಲೂ ವಿಶೇಷ ಪ್ರತಿಭೆ ಇರುತ್ತದೆ. ಸೂಕ್ತ ಅವಕಾಶ ಮತ್ತು ವೇದಿಕೆ ದೊರೆತಾಗ ಅವರಲ್ಲಿರುವ ಪ್ರತಿಭೆ ಹೊರಹಾಕಲು ಸಾಧ್ಯವಾಗುತ್ತದೆ. ಪಾಲಕರಾದವರು ತಮ್ಮ ಮಕ್ಕಳಿಗೆ ಯೋಗ್ಯ ಸಂಸ್ಕಾರ ನೀಡಿ ಉತ್ತಮ ಪ್ರಜೆಗಳನ್ನಾಗಿ ಮಾರ್ಪಡಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸಬೇಕಿದೆ ಎಂದರು.

ಗದಗ ಕೆಎಲ್‌ಇ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಎ.ಕೆ. ಮಠ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವಿನಯ, ವಿಧೇಯತೆ ಬೆಳೆದು ಬಂದಾಗ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಸಂಸ್ಕಾರ ಮತ್ತು ಸತ್‌ಚಿಂತನೆಗಳು ಮನುಷ್ಯನನ್ನು ಮೇಧಾವಿಯನ್ನಾಗಿ ಮಾಡಬಲ್ಲವು ಎಂದರು.

ಅಧ್ಯಕ್ಷತೆಯನ್ನು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರ ಪ್ರತಿನಿಧಿ ಎಂ.ಸಿ. ಕೊಳ್ಳಿ ವಹಿಸಿದ್ದರು. ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಸಿ.ಬಿ. ಹಿರೇಮಠ, ಎಸ್.ಎಂ. ಹುರಳಿಕುಪ್ಪಿ, ಎಸ್.ಜೆ. ಹೆರೂರ, ಜೆ.ಎಸ್. ಅರಣಿ, ಬಸವರಾಜ ಮಾಸೂರ ಇದ್ದರು.

ರೇಣುಕಾ ಶೇತಸನದಿ ಸಂಗಡಿಗರು ಪ್ರಾರ್ಥಿಸಿದರು. ಪ್ರಾಚಾರ್ಯ ಪ್ರೊ. ಎಂ.ಎಂ. ಹೊಳ್ಳಿಯವರ ಸ್ವಾಗತಿಸಿದರು. ಕ್ರೀಡಾ ಒಕ್ಕೂಟದ ಕಾರ್ಯಾಧ್ಯಕ್ಷ ಡಾ. ಎಸ್.ಆರ್. ನಾಯಕ ಪರಿಚಯಿಸಿದರು. ಸಾಂಸ್ಕೃತಿಕ ಒಕ್ಕೂಟದ ಕಾರ್ಯಾಧ್ಯಕ್ಷೆ ಪ್ರೊ. ಜಿ.ಕೆ. ಮಂಕಣಿ ವರದಿ ವಾಚಿಸಿದರು. ಡಾ. ಎಂ.ಪಿ. ಕಣವಿ, ಪ್ರೊ. ಪೂಜಾ ಎಂ., ಪ್ರೊ. ಶ್ರೀದೇವಿ ದೊಡ್ಡಮನಿ ನಿರ್ವಹಿಸಿದರು. ಐಕ್ಯುಎಸಿ ಸಂಯೋಜಕಿ ಪ್ರೊ. ರೂಪಾ ಕೋರೆ ವಂದಿಸಿದರು. ವ್ಯಕ್ತಿ ಕಾಣೆ: ಪತ್ತೆಗೆ ಮನವಿ

ಹಾವೇರಿ: ಮೂಲತಃ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕು ಬೆಣ್ಣಿಹಳ್ಳಿ ಗ್ರಾಮದ, ಪ್ರಸ್ತುತ ಹಾವೇರಿ ವಿದ್ಯಾನಗರದ ಬಿ ಬ್ಲಾಕ್‌ 3ನೇ ರಸ್ತೆಯ ಮನೆಯಿಂದ ಹೊರಹೋದ ವ್ಯಕ್ತಿ ಕಾಣೆಯಾಗಿರುವ ಕುರಿತು ಇಲ್ಲಿಯ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿದ್ದಲಿಂಗಪ್ಪ ರಾಮಪ್ಪ ದೊಡ್ಡಬಸಪ್ಪನವರ(46) ಕಾಣೆಯಾದ ವ್ಯಕ್ತಿ. ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ. ಕಾಣೆಯಾದ ವ್ಯಕ್ತಿಯು 5.5 ಅಡಿ ಎತ್ತರ, ಉದ್ದ ಮುಖ, ಎಣ್ಣೆಗೆಂಪು ಮೈಬಣ್ಣ, ದಪ್ಪ ತುಟಿ, ಸದೃಢ ಮೈಕಟ್ಟು ಹೊಂದಿದ್ದು, ಬಿಳಿ ಪೈಜಾಮ, ಜುಬ್ಬಾ ಧರಿಸಿದ್ದಾನೆ. ಈ ವ್ಯಕ್ತಿಯ ಗುರುತು ಪತ್ತೆಯಾದಲ್ಲಿ ಹಾವೇರಿ ಶಹರ ಠಾಣೆ ದೂ. 08375- 232333, ಮೊ. 9480804545, ಹಾವೇರಿ ಕಂಟ್ರೋಲ್ ರೂಂ. 08375- 237368 ಹಾಗೂ ಪೊಲೀಸ್ ಅಧೀಕ್ಷಕರ ಕಚೇರಿ ದೂ. 08375- 232800 ಸಂಪರ್ಕಿಸಬೇಕೆಂದು ಹಾವೇರಿ ಶಹರ ಪೊಲೀಸ್ ಠಾಣೆ ಆರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ