ನರಸಿಂಹರಾಜಪುರ, ಕಳೆದ 2 ದಿನದಿಂದಲೂ ಮೋಡದ ವಾತಾವರಣ ಮುಂದುವರಿದಿದ್ದು ತಾಲೂಕಿನಾದ್ಯಂತ ಸಾವಿರಾರು ಎಕರೆ ಬತ್ತದ ಗದ್ದೆ ಕೊಯ್ಲು ಮಾಡಿದ ರೈತರಿಗೆ ಚಿಂತೆ ಹೆಚ್ಚಾಗಿದೆ.
ಯಡಗೆರೆ ಮಂಜುನಾಥ್
ನರಸಿಂಹರಾಜಪುರ : ಕಳೆದ 2 ದಿನದಿಂದಲೂ ಮೋಡದ ವಾತಾವರಣ ಮುಂದುವರಿದಿದ್ದು ತಾಲೂಕಿನಾದ್ಯಂತ ಸಾವಿರಾರು ಎಕರೆ ಬತ್ತದ ಗದ್ದೆ ಕೊಯ್ಲು ಮಾಡಿದ ರೈತರಿಗೆ ಚಿಂತೆ ಹೆಚ್ಚಾಗಿದೆ. ಕಳೆದ 15 ದಿನದಿಂದಲೂ ಆಗಾಗ್ಗೆ ಮೋಡ, ತುಂತುರು ಮಳೆ . 2 ದಿನ ಬಿಸಿಲು ಬಂದರೆ ಮತ್ತೆ ಚಂಡಮಾರುತ ಎದ್ದು ಪದೇ, ಪದೇ ಮೋಡ, ಮಳೆ ಬರಬಹುದು ಎಂಬ ಭೀತಿಯಿಂದ ರೈತರು ಗದ್ದೆ ಕೊಯ್ಲನ್ನು ಮುಂದೂಡುತ್ತಲೇ ಬಂದಿದ್ದರು.
ತಾಲೂಕಿನಲ್ಲಿ ಅಂದಾಜು 1950 ಹೆಕ್ಟೇರ್ ಬತ್ತದ ಗದ್ದೆಗಳಿವೆ. ಈಗಾಗಲೇ ಕಸಬಾ ಹೋಬಳಿಯಲ್ಲಿ ಅಂದಾಜು ಶೇ. 60 ರಷ್ಟು ಮತ್ತು ಬಾಳೆಹೊನ್ನೂರು ಹೋಬಳಿಯಲ್ಲಿ ಶೇ.50 ರಷ್ಟು ಗದ್ದೆ ಕೊಯ್ಲು ಮುಕ್ತಾಯವಾಗಿದೆ. ಉಳಿದ ಸಾವಿರಾರು ಎಕರೆ ಬತ್ತದ ಗದ್ದೆ ಪ್ರದೇಶದಲ್ಲಿ ಭತ್ತದ ಪೈರು ಹಣ್ಣಾಗಿ ಕಟಾವಿಗೆ ಬಂದಿದೆ. ಕಸಬಾ ಹೋಬಳಿಯ ಮುತ್ತಿನ ಕೊಪ್ಪ, ಶೆಟ್ಟಿಕೊಪ್ಪ, ಮೆಣಸೂರು, ಗುಬ್ಬಿಗಾ, ಸೀತೂರು, ಕಾನೂರು, ಬಾಳೆ , ಹೊನ್ನೇಕೊಡಿಗೆ ಗ್ರಾಪಂನ ವಿವಿಧ ಗ್ರಾಮಗಳಲ್ಲಿ ಈಗ ಬಿರುಸಿನಿಂದ ಕಟಾವು ನಡೆದಿದೆ.
ಆದರೆ, ಮೋಡದ ವಾತಾವರಣ ಮುಂದುವರಿಯುತ್ತಿರುವುದರಿಂದ ಕೆಲವು ರೈತರು ಕೊಯ್ಲು ನಿಲ್ಲಿಸಿದರೆ, ಕೆಲವರು ಕಟಾವು ಮುಂದುವರಿಸಿದ್ದಾರೆ. ಮಳೆ ಬಂದರೆ ಗದ್ದೆ ಕೊಯ್ಲು ಮಾಡಿದ ರೈತರಿಗೆ ತುಂಬಾ ನಷ್ಟವಾಗುತ್ತದೆ. ಭತ್ತ ಕಪ್ಪಾಗುತ್ತದೆ. ಹುಲ್ಲು ಕೊಳೆಯುತ್ತದೆ. ಕಳೆದ ಜೂನ್ ತಿಂಗಳಿಂದಲೂ ಕಷ್ಟ ಪಟ್ಟು ಸಾವಿರಾರು ರು. ಸಾಲ ಮಾಡಿ ಬೇಸಾಯ ಮಾಡಿದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬಂತಾಗುತ್ತಿದೆ.
ಒಣಗುತ್ತಿಲ್ಲ ಅಡಕೆ : ಪ್ರಸ್ತುತ ಮಲೆನಾಡು ಭಾಗದಲ್ಲಿ ಈಗ 2 ನೇ ಅಡಕೆ ಕೊಯ್ಲು ಬಿರುಸಿನಿಂದ ನಡೆಯುತ್ತಿದೆ. ಆದರೆ, ಬಿಸಿಲು ಸರಿಯಾಗಿ ಬಾರದೆ ಬೇಯಿಸಿದ ಅಡಕೆ ಒಣಗುತ್ತಿಲ್ಲ. ಕಳೆದ 15-20 ದಿನಗಳಿಂದಲೂ ಮೋಡ ಮುಚ್ಚಿರುವುದರಿಂದ ಎಲ್ಲಾ ಕಡೆ ಅಡಕೆ ಹಣ್ಣಾಗಿ ಉದುರುತ್ತಿದೆ. ಇದರಿಂದ ಅಡಕೆ ಬೆಳೆಗಾರರಿಗೆ ಸೂಕ್ತ ಧಾರಣೆ ಸಿಗದೆ ನಷ್ಟ ಉಂಟಾಗುತ್ತದೆ.
ಆನೆಗಳ ಕಾಟ: ಮೋಡ, ಮಳೆಯಿಂದ ಮಲೆನಾಡಿನ ರೈತರು ಬೆಳೆದ ಭತ್ತ, ಅಡಕೆ ಬೆಳೆ ಹಾಳಾಗಿ ಸಂಕಷ್ಟಕ್ಕೆ ಈಡಾಗುತ್ತಿದ್ದರೆ ಇದರ ಜೊತೆಯಲ್ಲೇ ತಾಲೂಕಿನ ಎಲ್ಲಾ ಗ್ರಾಮಗಳಲ್ಲೂ ಕಾಡಾನೆಗಳ ಕಾಟದಿಂದ ರೈತರು ಕಂಗಾಲಾಗಿದ್ದಾರೆ. ರಾತ್ರಿ ಸಮಯದಲ್ಲಿ ರಸ್ತೆಯಲ್ಲೂ ಪ್ರಯಾಣ ಮಾಡಲು ಭಯ ಪಡುವಂತಾಗಿದೆ. ಯಾವಾಗ ಕಾಡಾನೆಗಳು ಗ್ರಾಮಕ್ಕೆ ನುಗ್ಗುತ್ತ ದೆಯೋ ಎಂಬ ಭೀತಿ ಗ್ರಾಮಸ್ಥರಲ್ಲಿ ಕಾಡುತ್ತಿದೆ.