ರಾಂ ಅಜೆಕಾರು ಕಾರ್ಕಳ: ಉಡುಪಿ ಜಿಲ್ಲೆಯಲ್ಲಿ ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ದಿನನಿತ್ಯ ಹವಾಮಾನದಲ್ಲಿ ನಿರಂತರ ಬದಲಾವಣೆಗಳು ಕಂಡುಬರುತ್ತಿದ್ದು, ಈ ವೈಪರೀತ್ಯ ಜನಜೀವನದ ಜೊತೆಗೆ ಸಾರ್ವಜನಿಕ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಸಾಮಾನ್ಯವಾಗಿ ಕರಾವಳಿ ಪ್ರದೇಶ ಎಂದರೆ ಸದಾ ಬಿಸಿ ವಾತಾವರಣ ಹೊಂದಿರುವ ಪ್ರದೇಶವೆಂಬ ಹೆಸರು ಪಡೆದಿದ್ದರೂ, ಈ ಬಾರಿ ಹವಾಮಾನ ತನ್ನ ಸಹಜ ಸ್ವರೂಪದಿಂದ ಭಿನ್ನವಾಗಿ ವರ್ತಿಸುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಇತ್ತೀಚಿನ ವರದಿ ಪ್ರಕಾರ ಉಡುಪಿ, ಬ್ರಹ್ಮಾವರ , ಕಾಪು, 25 ಡಿಗ್ರಿ ಸೆಲ್ಸಿಯಸ್ , ಕುಂದಾಪುರ 24 , ಬ್ರಹ್ಮಾವರ ಬೈಂದೂರು, ಕಾರ್ಕಳದಲ್ಲಿ 21 ಡಿಗ್ರಿ ಸೆಲ್ಸಿಯಸ್, ಹೆಬ್ರಿಯಲ್ಲಿ 20 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಹಗಲು ಮತ್ತು ರಾತ್ರಿ ತಾಪಮಾನದಲ್ಲಿ ಭಾರಿ ವ್ಯತ್ಯಾಸ ಕಂಡುಬರುತ್ತಿದೆ.
ಬೆಳಗ್ಗೆ ಹಾಗೂ ರಾತ್ರಿ ಚಳಿ ಹೆಚ್ಚಾಗುತ್ತಿದ್ದು, ಮಧ್ಯಾಹ್ನ ಮತ್ತೆ ಬಿಸಿಲಿನ ಅನುಭವವಾಗುತ್ತಿರುವುದು ದೇಹದ ಸಹಜ ಹೊಂದಾಣಿಕೆಗೆ ಅಡ್ಡಿಯಾಗುತ್ತಿದೆ. ಇದರ ಪರಿಣಾಮವಾಗಿ ಶಾಲೆಗೆ ಹೋಗುವ ಮಕ್ಕಳ ಆರೋಗ್ಯದ ಮೇಲೆ ಹಾಗೂ ವೃದ್ಧರ ದೈಹಿಕ ಸ್ಥಿತಿಯ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿದೆ.ಹವೆ ಬದಲಾವಣೆಯಿಂದ ಆರೋಗ್ಯ ವ್ಯತ್ಯಯ:ಬೆಳಗಿನ ಚಳಿಯಲ್ಲಿ ಶಾಲೆಗೆ ತೆರಳುವ ಮಕ್ಕಳು ಶೀತ, ಕೆಮ್ಮು, ಜ್ವರ, ಗಂಟಲು ನೋವು ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅದೇ ರೀತಿ ವಯೋವೃದ್ಧರಲ್ಲಿ ಉಸಿರಾಟದ ತೊಂದರೆ, ಸಂಧಿವಾತ ನೋವು, ರಕ್ತದೊತ್ತಡದ ಏರಿಳಿತ, ಅಸ್ತಮಾ ಸಮಸ್ಯೆಗಳು ತೀವ್ರವಾಗುತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ.ಇದರ ನಡುವೆ ಗ್ರಾಮೀಣ ಪ್ರದೇಶಗಳಲ್ಲಿ ಹಳ್ಳಿಜಾತ್ರೆಗಳು ಹೆಚ್ಚಾಗುತ್ತಿದ್ದು, ಜನಸಂದಣಿ ಜಾಸ್ತಿಯಾಗುತ್ತಿರುವುದು ಆರೋಗ್ಯದ ದೃಷ್ಟಿಯಿಂದ ಮತ್ತೊಂದು ಸವಾಲಾಗಿದೆ. ಜಾತ್ರೆ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಐಸ್ ಕ್ರೀಂ ಸೇವನೆ, ಫ್ರಿಡ್ಜ್‌ನಲ್ಲಿ ತಣ್ಣಗಾಗಿಸಿದ ತಂಪು ಪಾನೀಯಗಳ ಬಳಕೆ ಹೆಚ್ಚಾಗುತ್ತಿರುವುದನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಗಮನಿಸಿದೆ. ಹವಾಮಾನ ವೈಪರೀತ್ಯದ ನಡುವೆಯೂ ಇಂತಹ ಆಹಾರ ಪದಾರ್ಥಗಳನ್ನು ಸೇವಿಸುವುದು ಶೀತ-ಕೆಮ್ಮು, ವೈರಲ್ ಜ್ವರ ಹಾಗೂ ಗಂಟಲು ಸೋಂಕುಗಳಿಗೆ ಕಾರಣವಾಗಬಹುದು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.ಇದಲ್ಲದೆ ಕಾಡಂಚಿನ ಪ್ರದೇಶಗಳು ಹಾಗೂ ನದಿ ಪಾತ್ರದ ಭಾಗಗಳಲ್ಲಿ ಹವಾಮಾನ ಬದಲಾವಣೆಯ ಪ್ರಭಾವ ಇನ್ನಷ್ಟು ತೀವ್ರವಾಗಿ ಕಾಣಿಸುತ್ತಿದೆ. ಬೆಳಿಗ್ಗೆ ಮಂಜು, ಸಂಜೆ ತೇವಾಂಶ ಹಾಗೂ ರಾತ್ರಿ ಹೆಚ್ಚಿದ ಚಳಿಯಿಂದಾಗಿ ಈ ಪ್ರದೇಶಗಳಲ್ಲಿ ವಾಸಿಸುವ ಜನರು ಹೆಚ್ಚಾಗಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿಶೇಷವಾಗಿ ವೃದ್ಧರು, ಗರ್ಭಿಣಿಯರು ಹಾಗೂ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರು ಹೆಚ್ಚಿನ ಅಪಾಯದಲ್ಲಿದ್ದಾರೆ.ಹವಾಮಾನ ವೈಪರೀತ್ಯದ ಪರಿಣಾಮವಾಗಿ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಸರ್ಕಾರಿ ಆಸ್ಪತ್ರೆಗಳು ಮತ್ತು ಖಾಸಗಿ ವೈದ್ಯಕೀಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯಲು ಬರುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬರುತ್ತಿದೆ. ಶೀತ ಕೆಮ್ಮು, ಜ್ವರ, ಉಸಿರಾಟದ ಸಮಸ್ಯೆ, ವೈರಲ್ ಸೋಂಕು, ಚರ್ಮ ಅಲರ್ಜಿಗಳು ಹಾಗೂ ಮಕ್ಕಳಲ್ಲಿ ವೈರಲ್ ಜ್ವರ ಪ್ರಕರಣಗಳು ಹೆಚ್ಚಾಗುತ್ತಿರುವುದಾಗಿ ಆಸ್ಪತ್ರೆ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಪ್ರತಿದಿನ ಹೊರರೋಗಿಗಳ ವಿಭಾಗದಲ್ಲಿ ಜನಸಂದಣಿ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.ವೈದ್ಯರ ಕಿವಿಮಾತು:
ವೈದ್ಯರ ಪ್ರಕಾರ, ಬಿಸಿಲು ಮತ್ತು ಚಳಿ ಏಕಾಏಕಿ ಬದಲಾಗುತ್ತಿರುವುದರಿಂದ ದೇಹದ ರೋಗನಿರೋಧಕ ಶಕ್ತಿ ಕುಗ್ಗುತ್ತದೆ. ಇದರಿಂದ ಸೋಂಕು ರೋಗಗಳು ಸುಲಭವಾಗಿ ದೇಹವನ್ನು ಆಕ್ರಮಣ ಮಾಡುವ ಸಾಧ್ಯತೆ ಹೆಚ್ಚಾಗುತ್ತದೆ. ಹೀಗಾಗಿ ಸಾರ್ವಜನಿಕರು ಸಾಕಷ್ಟು ನೀರು ಕುಡಿಯಬೇಕು, ಪೌಷ್ಟಿಕ ಮತ್ತು ಬಿಸಿ ಆಹಾರ ಸೇವಿಸಬೇಕು. ಶಾಲಾ ಮಕ್ಕಳು ಹಾಗೂ ವಯೋವೃದ್ಧರು ಬೆಳಿಗ್ಗೆ ಮತ್ತು ರಾತ್ರಿ ಚಳಿಗೆ ತಕ್ಕಂತೆ ಬಿಸಿ ಬಟ್ಟೆ ಧರಿಸುವುದು ಅತ್ಯಂತ ಅಗತ್ಯ.ಐಸ್ ಕ್ರೀಂ, ತಣ್ಣಗಿನ ಪಾನೀಯಗಳು, ಫ್ರಿಡ್ಜ್‌ನಲ್ಲಿಟ್ಟ ಆಹಾರಗಳನ್ನು ಈ ಅವಧಿಯಲ್ಲಿ ಸಾಧ್ಯವಾದಷ್ಟು ತಪ್ಪಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಜ್ವರ, ನಿರಂತರ ಕೆಮ್ಮು, ಉಸಿರಾಟದ ತೊಂದರೆ, ದೌರ್ಬಲ್ಯ ಕಂಡುಬಂದರೆ ನಿರ್ಲಕ್ಷ್ಯ ಮಾಡದೆ ತಕ್ಷಣವೇ ಸಮೀಪದ ಆಸ್ಪತ್ರೆಯನ್ನು ಸಂಪರ್ಕಿಸಬೇಕು ಎಂದು ವೈದ್ಯರು ಎಚ್ಚರಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಮುಂದುವರಿಯುತ್ತಿರುವ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಸಾರ್ವಜನಿಕರು, ವಿಶೇಷವಾಗಿ ಪೋಷಕರು ಮತ್ತು ವಯೋವೃದ್ಧರ ಕುಟುಂಬ ಸದಸ್ಯರು ಹೆಚ್ಚಿನ ಜಾಗ್ರತೆ ವಹಿಸಿ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಆರೋಗ್ಯ ಇಲಾಖೆ ಹಾಗೂ ವೈದ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.ಜನ ಸ್ವಯಂ ಚಿಕಿತ್ಸೆಗೆ ಮುಂದಾಗಬಾರದು. ಜ್ವರ ಸೇರಿದಂತೆ ಯಾವುದೇ ಆರೋಗ್ಯದಲ್ಲಿ ಏರುಪೇರು ಕಂಡುಬಂದಲ್ಲಿ ತಕ್ಷಣವೇ ಸಮೀಪದ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಪರೀಕ್ಷೆಗಳನ್ನು ನಡೆಸಿಸ ವೈದ್ಯರ ಸಲಹೆಯಂತೆ ಔಷಧಿ ಸೇವಿಸಬೇಕು. ತೀವ್ರ ಚಳಿಯ ಸಂದರ್ಭ ಮಕ್ಕಳು ಹಾಗೂ ವೃದ್ಧರು ಕಡ್ಡಾಯವಾಗಿ ಬಿಸಿ ಬಟ್ಟೆಗಳನ್ನು ಧರಿಸಿ, ಬಿಸಿ ನೀರು ಕುಡಿಯುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು.
-ಡಾ. ಚಂದ್ರಿಕಾ ಕಿಣಿ, ವೈದ್ಯಾಧಿಕಾರಿ, ದೊಂಡೆರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರ.