ತಾವರೆಕೊಪ್ಪದಲ್ಲಿ ಕಣ್ಮನ ಸೆಳೆದ ಹೋರಿ ಹಬ್ಬ

KannadaprabhaNewsNetwork |  
Published : Nov 16, 2024, 12:33 AM IST
ಫೋಟೋ:೧೪ಕೆಪಿಸೊರಬ-೦೧ : ಸೊರಬ ತಾಲೂಕಿನ ತಾವರೆಕೊಪ್ಪ ಗ್ರಾಮದಲ್ಲಿ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬ ಸಂಭ್ರಮದಿAದ ಜರುಗಿತು. | Kannada Prabha

ಸಾರಾಂಶ

ಪೈಲ್ವಾನರಾ... ಹಿಡಿರಿ ಹೋರಿ, ಹರಿ ಕೊಬ್ಬರಿ, ಹೊಡಿರಿ ಕೇಕೆ.. ಇದು ತಾಲೂಕಿನ ತಾವರೆಕೊಪ್ಪ ಗ್ರಾಮದಲ್ಲಿ ಹೋರಿ ಬೆದರಿಸುವ ಹಬ್ಬದ ಧಮಾಕಾ. ಗ್ರಾಮದಲ್ಲಿ ಹೋರಿ ಹಬ್ಬ ಆಚರಣಾ ಸಮಿತಿ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಹೋರಿ ಬೆದರಿಸುವ ಹಬ್ಬ ಅಕ್ಷರಶಃ ರೋಚಕತೆ ಸೃಷ್ಠಿಸಿತ್ತು. ನೆರೆದವರ ಕೇಕೆ, ಹಲಗೆ ಸದ್ದಿಗೆ ಹೋರಿಗಳ ಹೂಂಕರಿಸುವಿಕೆ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಿತ್ತು.

ಕನ್ನಡಪ್ರಭ ವಾರ್ತೆ ಸೊರಬ

ಪೈಲ್ವಾನರಾ... ಹಿಡಿರಿ ಹೋರಿ, ಹರಿ ಕೊಬ್ಬರಿ, ಹೊಡಿರಿ ಕೇಕೆ.. ಇದು ತಾಲೂಕಿನ ತಾವರೆಕೊಪ್ಪ ಗ್ರಾಮದಲ್ಲಿ ಹೋರಿ ಬೆದರಿಸುವ ಹಬ್ಬದ ಧಮಾಕಾ. ಗ್ರಾಮದಲ್ಲಿ ಹೋರಿ ಹಬ್ಬ ಆಚರಣಾ ಸಮಿತಿ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಹೋರಿ ಬೆದರಿಸುವ ಹಬ್ಬ ಅಕ್ಷರಶಃ ರೋಚಕತೆ ಸೃಷ್ಠಿಸಿತ್ತು. ನೆರೆದವರ ಕೇಕೆ, ಹಲಗೆ ಸದ್ದಿಗೆ ಹೋರಿಗಳ ಹೂಂಕರಿಸುವಿಕೆ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಿತ್ತು.

ಮಲೆನಾಡು ಹಾಗೂ ಬಯಲುಸೀಮೆ ಭಾಗದ ಹಬ್ಬವಾಗಿರುವ ಜನಪದ ಕ್ರೀಡೆ ಸಾಂಪ್ರದಾಯಿಕ ಹೋರಿ ಬೆದರಿಸುವ ಹಬ್ಬ ಸಡಗರ ಸಂಭ್ರಮದಿಂದ ಜರುಗಿತು. ದೀಪಾವಳಿಯ ನಂತರ ಗ್ರಾಮೀಣ ಭಾಗದಲ್ಲಿ ಹೋರಿ ಬೆದರಿಸುವ ಹಬ್ಬಕ್ಕೆ ಸಾಕಷ್ಟು ಮಹತ್ವವಿದೆ. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಡಿ ಹೋಗುವ ದೃಶ್ಯ ನೋಡುಗರಲ್ಲಿ ಮೈನವಿರೇಳಿಸಿತು. ಹೋರಿಗಳ ಮಾಲೀಕರು ಹೋರಿಗಳಿಗೆ ವಿವಿಧ ಬಗೆಯ ಜೂಲಗಳನ್ನು ಹೊದಿಸಿ, ಬಣ್ಣ ಬಣ್ಣದ ಟೇಪು, ಬಲೂನುಗಳು ಮತ್ತು ಕೊಬ್ಬರಿ ಕಟ್ಟಿ ಶೃಂಗರಿಸಿದ್ದರು. ಅಖಾಡದಲ್ಲಿ ತಾವರೆಕೊಪ್ಪದ ರಾಜನರಸಿಂಹ, ರಾಜಾ ಹುಲಿ, ಶ್ರೀವೀರ ಕಲ್ಕಿ, ನಾಗನೂರ ನಾಗರಹಾವು, ನರಹಂತಕ, ಚಿಕ್ಕಸವಿ ದೊಡ್ಮನೆ ದೊರೆ, ಶಾಂತಗೇರಿ ಸುಗ್ರೀವ, ಹರೂರು ಘಟಸರ್ಪ, ಯಲವಳ್ಳಿ ಜಮೀನ್ದಾರ, ತಾವರೆಕೊಪ್ಪ ಚಕುವ, ಬಿದರಗೇರಿ ಸ್ನೇಹಜೀವಿ ಶ್ರೀನಂದಿ, ಕೊಲೆಗಾರ ಸಾಮ್ರಾಜ್ಯದ ಪ್ರಳಯ, ಹರಗಿ ಗ್ಯಾಂಗ್ ಸ್ಟಾರ್, ಮಲೆನಾಡ ಹುಲಿ, ಶಿಗ್ಗಾದ ಮೆಜೆಸ್ಟಿಕ್ ಹುಲಿ, ಅಂಬರಕೊಪ್ಪದ ಕಿಂಗ್, ಸೊರಬದ ಸೃಷ್ಟಿಕರ್ತ, ಪೈಲ್ವಾನ, ಸೊರಬದ ಸೈಕೋ, ಬಿದರೇರಿ ಬುಲೇಟ್ ಕಾ. ರಾಜ, ಎಎನ್‌ಕೆ ಬ್ಲಾಕ್ ಟೈಗರ್, ಹರೂರು ಜೈ ಹನುಮ, ಹರೂರು ಮಾರಿಕಾಂಬ ಎಕ್ಸ್ಪ್ರೆಸ್, ಬಿದರಗೇರಿ ಸೆವೆನ್ ಸ್ಟಾರ್ ಸೇರಿದಂತೆ ವಿವಿಧ ಹೆಸರಿನ ಹೋರಿಗಳು ಓಡಿದವು. ಯುವಕರು ಹೋರಿಗಳನ್ನು ಹಿಡಿದು ಬಲ ಪ್ರದರ್ಶಿಸಿದರೆ, ಜನತೆ ಅದನ್ನು ನೋಡಿ ರೋಮಾಂಚನಗೊಂಡರು. ಅಖಾಡದಲ್ಲಿ ಹೋರಿಗಳು ಓಡಿ ಹೋಗುವುದನ್ನು ನೋಡಲು ತಾಲೂಕು ಸೇರಿದಂತೆ ನೆರೆಯ ತಾಲೂಕು ಮತ್ತು ಜಿಲ್ಲೆಯ ವಿವಿಧ ಗ್ರಾಮಗಳಿಂದ ಭಾರಿ ಸಂಖ್ಯೆಯಲ್ಲಿ ಹೋರಿ ಪ್ರಿಯರು ಆಗಮಿಸಿದ್ದರು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲಪ್ರದರ್ಶನ ತೋರಿದ ಪೈಲ್ವಾನರನ್ನು ಸಮಿತಿ ವತಿಯಿಂದ ಗುರುತಿಸಲಾಯಿತು. ಅಖಾಡದ ಎರಡು ಬದಿಯಲ್ಲಿ ಬೇಲಿ ನಿರ್ಮಿಸಿ, ಒಂದೊಂದೆ ಹೋರಿಗಳನ್ನು ಓಡಿಸುವ ಮೂಲಕ ಸಮಿತಿಯವರು ಸುರಕ್ಷತೆಗೆ ಹೆಚ್ಚಿನ ಗಮನ ನೀಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!