ಮೊಬೈಲ್ ವ್ಯಾಮೋಹದಿಂದ ವಿದ್ಯಾರ್ಥಿಗಳಲ್ಲಿ ಕಣ್ಣಿನ ದೋಷ: ವೈದ್ಯಾಧಿಕಾರಿ ಡಾ . ವಿಜಯ್

KannadaprabhaNewsNetwork |  
Published : Jul 11, 2025, 11:48 PM IST
11ಎಚ್ಎಸ್ಎನ್13 : ಶ್ರೀ ಶಾರದಾ ಪೀಠಂ ಶಂಕರ ಮಠ ಬೇಲೂರು,  ಹಾಗೂ ಔಷಧಿ ವ್ಯಾಪಾರಿಗಳ ಸಂಘ, ಶ್ರೀ ಲಕ್ಷ್ಮಿ ಕಣ್ಣಿನ ಆಸ್ಪತ್ರೆ ಮತ್ತು ಆಪ್ಟಿಕಲ್ಸ್ ಇವರಿಂದ ಉಚಿತ ನೇತ್ರ ಪರೀಕ್ಷೆ ಮತ್ತು ಪೊರೆ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. | Kannada Prabha

ಸಾರಾಂಶ

ಸರ್ಕಾರಿ ಆಸ್ಪತ್ರೆಯ ಜೊತೆಗೆ ಖಾಸಗಿ ಸಂಸ್ಥೆಗಳು ಕೂಡ ಕಣ್ಣಿನ ತಪಾಸಣಾ ಶಿಬಿರವನ್ನು ಏರ್ಪಡಿಸುತ್ತಿರುವುದು ಸ್ವಾಗತಾರ್ಹ, ಸಾರ್ವಜನಿಕ ಸಂಸ್ಥೆಗಳು ಇಂತಹ ಶಿಬಿರಗಳನ್ನು ಗ್ರಾಮೀಣ ಪ್ರದೇಶದಲ್ಲಿ ಏರ್ಪಡಿಸುತ್ತಿರುವುದರಿಂದ ದೃಷ್ಟಿ ದೋಷ ಉಳ್ಳವರು ತಪಾಸಣೆಯ ಜೊತೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಅನುಕೂಲವಾಗಿದೆ.

ಕನ್ನಡಪ್ರಭ ವಾರ್ತೆ ಬೇಲೂರು

ಮನುಷ್ಯನ ಪಂಚೇಂದ್ರಿಯಗಳಲ್ಲಿ ಕಣ್ಣು ಸೂಕ್ಷ್ಮ ಹಾಗೂ ಬಹು ಮುಖ್ಯ ಅಂಗವಾಗಿದ್ದು, ಸಕಾಲಕ್ಕೆ ತಪಾಸಣೆ ಮಾಡಿಸಿ ಕಾಪಾಡಿಕೊಳ್ಳಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ . ವಿಜಯ್ ಹೇಳಿದರು.

ಶ್ರೀ ಶಾರದಾ ಪೀಠಂ ಶಂಕರ ಮಠ ಬೇಲೂರು ಹಾಗೂ ಔಷಧಿ ವ್ಯಾಪಾರಿಗಳ ಸಂಘ, ಶ್ರೀ ಲಕ್ಷ್ಮೀ ಕಣ್ಣಿನ ಆಸ್ಪತ್ರೆ ಮತ್ತು ಆಪ್ಟಿಕಲ್ಸ್ ಇವರಿಂದ ಉಚಿತ ನೇತ್ರ ಪರೀಕ್ಷೆ ಮತ್ತು ಪೊರೆ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು. ಇತ್ತೀಚೆಗೆ ವಿದ್ಯಾರ್ಥಿಗಳು ಹಾಗೂ ಯುವಕರ ಮೊಬೈಲ್ ವ್ಯಾಮೋಹದಿಂದ ಕಣ್ಣಿನ ದೋಷ ಹೆಚ್ಚಾಗಿ ಕಂಡು ಬರುತ್ತಿದೆ. ಅದರಲ್ಲೂ ಶಾಲಾ ವಿದ್ಯಾರ್ಥಿಗಳ ದೃಷ್ಟಿ ಸಮಸ್ಯೆಯೂ ಉಲ್ಬಣವಾಗುತ್ತಿದೆ. ಈ ಬಗ್ಗೆ ಶಾಲಾ ಮಟ್ಟದಲ್ಲಿ ಮಕ್ಕಳ ಕಣ್ಣಿನ ತಪಾಸಣೆಗಾಗಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಯೋಜನೆ ಕಾರ್ಯಕ್ರಮದಡಿ ಸ್ಥಳಕ್ಕೆ ತೆರಳಿ ಮಕ್ಕಳ ಕಣ್ಣನ್ನು ಪರೀಕ್ಷೆ ಮಾಡಲಾಗುತ್ತಿದೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲೂ ಕಣ್ಣಿನ ಶಸ್ತ್ರ ಚಿಕಿತ್ಸೆಯ ಸೌಲಭ್ಯ ಇದೆ. ಈ ಹಿಂದೆ ಇದ್ದ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದರು. ಅವರು ವರ್ಗಾವಣೆ ಆಗಿದ್ದರಿಂದ ಸೂಕ್ತ ವೈದ್ಯರು ಬಂದರೆ ಇಲ್ಲೇ ನಡೆಸಲಾಗುತ್ತದೆ ಎಂದರು.

ಸರ್ಕಾರಿ ಆಸ್ಪತ್ರೆಯ ಜೊತೆಗೆ ಖಾಸಗಿ ಸಂಸ್ಥೆಗಳು ಕೂಡ ಕಣ್ಣಿನ ತಪಾಸಣಾ ಶಿಬಿರವನ್ನು ಏರ್ಪಡಿಸುತ್ತಿರುವುದು ಸ್ವಾಗತಾರ್ಹ, ಸಾರ್ವಜನಿಕ ಸಂಸ್ಥೆಗಳು ಇಂತಹ ಶಿಬಿರಗಳನ್ನು ಗ್ರಾಮೀಣ ಪ್ರದೇಶದಲ್ಲಿ ಏರ್ಪಡಿಸುತ್ತಿರುವುದರಿಂದ ದೃಷ್ಟಿ ದೋಷ ಉಳ್ಳವರು ತಪಾಸಣೆಯ ಜೊತೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಅನುಕೂಲವಾಗಿದೆ. ಸಾಮಾನ್ಯವಾಗಿ 50 ವರ್ಷ ಕಳೆದ ನಂತರ ದೃಷ್ಟಿ ದೋಷಗಳು ಗೋಚರಿಸುತ್ತವೆ. ಕಣ್ಣಿಗೆ ಪೊರೆ ಬಂದಾಗ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ ಎಂದು ಹೇಳಿದರು.

ಬೆಂಗಳೂರಿನ ನುರಿತ ನೇತ್ರ ತಜ್ಞ ಬಿ. ವಿ. ಪ್ರವೀಣ್ ಚಂದ್ರ, ಮೈಸೂರು ಜೆಎಸ್ಎಸ್ ಕಾಲೇಜಿನ ಡಿ. ಎನ್. ಪಾಂಡುರಂಗ ಮಾತನಾಡಿದರು.

ಶ್ರೀ ಶಾರದಾ ಪೀಠಂ ಶಂಕರ ಮಠದ ಕಾರ್ಯದರ್ಶಿ ಆರ್. ಸುಬ್ರಹ್ಮಣ್ಯ, ವ್ಯಾಪಾರಿಗಳ ಸಂಘದ ಅಧ್ಯಕ್ಷ ರವೀಂದ್ರನಾಥ್, ಆಸ್ಪತ್ರೆ ಮಾಲೀಕ ನಾಗರಾಜ್, ತೊ.ಚ ಅನಂತಸುಬ್ಬರಾಯ, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ವಿಜಯಕೇಶವ್, ರಮೇಶ್ ಆನಂದ, ಸುರೇಶ್, ಮೆಡಿಕಲ್ ಮೋಹನ್ ಇತರರು ಇದ್ದರು.

PREV