ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಕಣ್ಣು ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಅದರ ಸುರಕ್ಷತೆ, ಸಂರಕ್ಷಣೆ ಅತೀ ಮುಖ್ಯವಾಗಿದೆ ಎಂದು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ನಾಗರಾಜ ಕುರಿ ಹೇಳಿದರು.ಅವರು ಪಟ್ಟಣದ ಹರದೊಳ್ಳಿ ವಾರ್ಡ್‌ನಲ್ಲಿ ಗುರುವಾರ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆಯ ಅಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿ, ಕಣ್ಣು ದೇಹದ ಪ್ರಮುಖವಾದ ಅಂಗ. ಅದರ ಸುರಕ್ಷತೆ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಇತ್ತೀಚೆಗೆ ಸ್ಮಾರ್ಟ್ ಪೋನ್‌ಗಳ ಹೆಚ್ಚಿನ ಬಳಕೆ, ಧೂಳು, ಹೊಗೆ ಹೆಚ್ಚಿರುವ ಪ್ರದೇಶದಲ್ಲಿ ವಾಸವಿರುವುದು ಇವೆಲ್ಲ ಅಂಶಗಳು ಮನುಷ್ಯನ ಕಣ್ಣುಗಳ ಸುರಕ್ಷತೆ ಅಪಾಯಕಾರಿಗಳೇ ಆಗಿವೆ. ಹೀಗಾಗಿ ಪ್ರತಿಯೊಬ್ಬರೂ ಕಣ್ಣುಗಳ ಕಡೆಗೆ ವಿಶೇಷವಾಗಿ ಗಮನ ಹರಿಸಬೇಕು. ಕಣ್ಣು ಬೇನೆ ಬಂದಾಗ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಒಬ್ಬರು ಬಳಸಿದ ಕರವಸ್ತ್ರ ಮತ್ತೊಬ್ಬರು ಬಳಸಬಾರದು. ಕಣ್ಣುಗಳ ಆರೋಗ್ಯಪೂರ್ಣ ಸಂರಕ್ಷಣೆಗೆ ಮೇಲಿಂದ ಮೇಲೆ ನೇತ್ರ ತಜ್ಞರನ್ನು ಸಂಪರ್ಕಿಸಬೇಕು ಎಂದರು.
ನೇತ್ರಾಧಿಕಾರಿ ಡಾ.ಎನ್.ಎಚ್.ಕಿತ್ತಲಿ ಮಾತನಾಡಿ, ವಯಸ್ಸಾದವರು ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡವರು ಯಾವಾಗಲೂ ಕನ್ನಡಕವನ್ನು ಬಳಸಬೇಕು. ಕೈಗಾರಿಕಾ ಪ್ರದೇಶಗಳಲ್ಲಿ ಕೆಲಸ ಮಾಡುವವರಂತೂ ಮೇಲಿಂದ ಮೇಲೆ ಕಣ್ಣುಗಳ ತಪಾಸಣೆ ಮಾಡಿಸುವುದು ಸೂಕ್ತ. ಕಣ್ಣು ಆರೋಗ್ಯಪೂರ್ಣವಾಗಿದ್ದರೆ ಮನುಷ್ಯನ ಕ್ರಿಯಶೀಲತೆಗೂ ಸಹಕಾರಿಯಾಗುತ್ತದೆ ಎಂದರು.ಕಣ್ಣುಗಳ ತಪಾಸಣೆಯಲ್ಲಿ ಒಟ್ಟು 22 ಜನರಿಗೆ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲು ಸೂಚಿಸಲಾಯಿತು. ಅಲ್ಲದೇ ಸುಮಾರು 104 ಜನರಿಗೆ ಬಿಪಿ ಮತ್ತು ಶುಗರ್ ತಪಾಸಣೆ ಮಾಡಿ ಅವರಿಗೂ ಸೂಕ್ತ ಆರೋಗ್ಯಪೂರ್ಣ ಸಲಹೆಗಳನ್ನು ನೀಡಲಾಯಿತು. ಹಿರಿಯ ಎಚ್ಐಒ ಎಂ.ಪಿ.ಪಾಗದ, ಐಸಿಟಿಸಿ ಸಮಾಲೋಚಕಿ ಜ್ಯೋತಿ ಮೆಣಸಿನಕಾಯಿ, ಸಮಾಲೋಚಕಿ ಜಯಶ್ರೀ ಕಳಸಾ, ಎನ್.ಸಿ.ಡಿ. ಸಮಾಲೋಚಕ ಮಂಜು ಪದರಾ, ಲ್ಯಾಬ್ ಟೆಕ್ನಿಶಿಯನ್ ಮಹಾಂತೇಶ ಹಕಾರಿ, ಎಚ್ಐಒ ಶಂಕರ ಔರಸಂಗ್, ಸ್ಟಾಫ್ ನರ್ಸ್ ಶಕುಂತಲಾ ಹೊಸಮನಿ, ಪ್ರೀತಿ ಬೆಳಗಲ್ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಬಸಣ್ಣ ಕಳ್ಳಿಗುಡ್ಡ, ಮೂಕಪ್ಪ ಹುನ್ನೂರ ಸೇರಿದಂತೆ ಸಮಾಜದ ಮುಖಂಡರು ಶಿಬಿರದಲ್ಲಿ ಭಾಗವಹಿಸಿದ್ದರು.