ಫ.ಗು. ಹಳಕಟ್ಟಿಯವರ ಬದುಕು, ಬರಹ ಪ್ರಸ್ತುತ ಅನಿವಾರ್ಯ

KannadaprabhaNewsNetwork | Published : Jul 2, 2025 11:48 PM
ಫ.ಗು. ಹಳಕಟ್ಟಿಯವರ ಬದುಕು ಮತ್ತು ಬರಹ ಪ್ರಸ್ತುತ ಅನಿವಾರ್ಯ : ಕೆ.ಎನ್.ರೇಣುಕಯ್ಯ   | Kannada Prabha

ಸಾರಾಂಶ

ಹಳಕಟ್ಟಿಯವರು ವಕೀಲಿ ವೃತ್ತಿಯನ್ನು ಬಿಟ್ಟು ವಚನ ಸಾಹಿತ್ಯವನ್ನು ರಚಿಸುವ ಸಲುವಾಗಿ ಸೈಕಲ್ ಏರಿ ನಾಡಿನೆಲ್ಲೆಡೆ ಸವಾರಿ ಮಾಡಿ ಹಸ್ತಪ್ರತಿಗಳನ್ನು ಸಂಗ್ರಹಿಸಿ ಆಳವಾಗಿ ಅಧ್ಯಯನ ಮಾಡಿ ಪುಸ್ತಕಗಳ ರೂಪದಲ್ಲಿ ಪ್ರಕಟಿಸಿ ಹೊರತಂದರು.

ವಚನ ಸಾಹಿತ್ಯ ಪಿತಾಮಹ ಎಂಬ ಬಿರುದಿಗೆ ಪಾತ್ರರಾದ ಫಕೀರಪ್ಪ: ಕೆ.ಎನ್.ರೇಣುಕಯ್ಯ

ಕನ್ನಡಪ್ರಭ ವಾರ್ತೆ ತಿಪಟೂರು

ದುಡಿಯುವ ವಕೀಲಿ ವೃತ್ತಿಯನ್ನು ಬಿಟ್ಟು ಸೈಕಲ್ಲಿನಲ್ಲಿ ಸವಾರಿ ಮಾಡುತ್ತಾ ಓಲೆಗರಿ ಮತ್ತು ಹಸ್ತ ಪ್ರತಿಗಳನ್ನು ಸಂಗ್ರಹಿಸಿ ಆಳವಾಗಿ ಸಂಶೋಧಿಸಿ, ವಚನಶಾಸ್ತ್ರಗಳನ್ನು ಬರೆದು ವಚನ ಸಾಹಿತ್ಯ ಪಿತಾಮಹ ಎಂಬ ಬಿರುದಿಗೆ ಪಾತ್ರರಾದ ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರ ಬದುಕು ಮತ್ತು ಬರಹ ಪ್ರಸ್ತುತ ಅನಿವಾರ್ಯ ಎಂದು ನಗರದ ಎಸ್‌ವಿಪಿ ಕಾಲೇಜಿನ ಪ್ರಾಂಶುಪಾಲ ಕೆ.ಎನ್.ರೇಣುಕಯ್ಯ ತಿಳಿಸಿದರು.

ನಗರದ ಎಸ್.ವಿ.ಪಿ. ಸಂಯುಕ್ತ ಪದವಿ ಪೂರ್ವ ಕಾಲೇಜು, ಎನ್.ಎಸ್.ಎಂ.ಬಾಲಿಕಾ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳ ಸಹಯೋಗದಲ್ಲಿ ನಡೆದ ವಚನಶಾಸ್ತ್ರ ಸಂಶೋಧಕ ಫ.ಗು.ಹಳಕಟ್ಟಿಯವರ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಹಳಕಟ್ಟಿಯವರು ವಕೀಲಿ ವೃತ್ತಿಯನ್ನು ಬಿಟ್ಟು ವಚನ ಸಾಹಿತ್ಯವನ್ನು ರಚಿಸುವ ಸಲುವಾಗಿ ಸೈಕಲ್ ಏರಿ ನಾಡಿನೆಲ್ಲೆಡೆ ಸವಾರಿ ಮಾಡಿ ಹಸ್ತಪ್ರತಿಗಳನ್ನು ಸಂಗ್ರಹಿಸಿ ಆಳವಾಗಿ ಅಧ್ಯಯನ ಮಾಡಿ ಪುಸ್ತಕಗಳ ರೂಪದಲ್ಲಿ ಪ್ರಕಟಿಸಿ ಹೊರತಂದರು. ಸಂಸಾರದ ನಿರ್ವಹಣೆಗೆಂದು ಇಟ್ಟುಕೊಂಡಿದ್ದ ಹಣ, ಒಡವೆ, ವಸ್ತ್ರಗಳನ್ನೆಲ್ಲಾ ಪುಸ್ತಕಗಳ ಮುದ್ರಣಕ್ಕೆಂದು ಖರ್ಚು ಮಾಡಿದರು. ಆದರೂ ಎದೆಗುಂದದೆ ಶಿವಾನುಭವ ಮತ್ತು ನವಕರ್ನಾಟಕ ಪತ್ರಿಕೆಗಳನ್ನು ಪ್ರಾರಂಭಿಸಿ ಆ ಮೂಲಕ ವಚನಶಾಸ್ತ್ರಗಳ ಪ್ರಚಾರ ಮಾಡುತ್ತಾ ಸಾಹಿತ್ಯದ ಪ್ರೀತಿಯನ್ನು ಎತ್ತಿಹಿಡಿದರು ಎಂದರು.

ಇವರ ಸೇವೆ, ಸಾಧನೆ, ಸಂಶೋಧನೆಯನ್ನು ಗುರುತಿಸಿ ಧಾರವಾಡ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ವಚನಶಾಸ್ತ್ರ ರಚನೆಯಿಂದ ಜೀವನದಲ್ಲಿ ಅಪಾರ ಕಷ್ಟನಷ್ಟಗಳನ್ನು ಅನುಭವಿಸಿ, ಎಲ್ಲವನ್ನು ಕಳೆದುಕೊಂಡರೂ ಸಾಹಿತ್ಯದ ಕೃಷಿ ಮತ್ತು ಅಭಿಮಾನದಿಂದ ಹೆಚ್ಚು ಹಿರಿಮೆಯನ್ನು ಗಳಿಸಿದ್ದರು. ಇಂತಹ ಮಹಾನ್ ಸಂಶೋಧಕರನ್ನು ಮೈಸೂರಿನ ಮಹಾರಾಜರು ಅರಮನೆಗೆ ಆಹ್ವಾನಿಸಿ, ಅಭಿನಂದಿಸಿ, ಗೌರವಿಸಲು ಔತಣಕೂಟಕ್ಕೆ ಕರೆದರು. ಔತಣಕ್ಕೆ ಕುಳಿತಾಗ ಮಹಾರಾಜರು ಹಳಕಟ್ಟಿಯವರು ಹಾಕಿದ್ದ ಕರಿಕೋಟನ್ನು ತೆಗೆಯಿರಿ ಎಂದು ಬಲವಂತವಾಗಿ ತೆಗಿಸಿದಾಗ ಒಳಗೆ ಅವರ ಹರಿದಿರುವ ಅಂಗಿಯನ್ನು ನೋಡಿ ಮಮ್ಮಲ ಮರುಗಿದ್ದರು.

ಸಾಹಿತ್ಯ, ಸಂಸ್ಕೃತಿ, ವಚನಗಳ ರಚನೆ ಮತ್ತು ಅಭಿವೃದ್ಧಿ, ಸಂರಕ್ಷಣೆಗಾಗಿ ಇಡೀ ಜೀವಮಾನವನ್ನೇ ಮುಡುಪಾಗಿಟ್ಟ ಹಳಕಟ್ಟಿಯವರ ಆದರ್ಶಗಳನ್ನು ಇಂದಿನ ಮಕ್ಕಳು ಮತ್ತು ಸಾಹಿತಿಗಳು ಅಳವಡಿಸಿಕೊಂಡರೆ ಸಾಹಿತ್ಯ ಶ್ರೀಮಂತವಾಗುವುದರಲ್ಲಿ ಯಾವುದೇ ಸಂಶಯವಿಲ್ಲವೆಂದು ಎಂದರು. ದೈಹಿಕ ಶಿಕ್ಷಕ ಉದಯ್‌ಶಂಕರ್ ಮಾತನಾಡಿ, ಹಳಕಟ್ಟಿಯವರು ನಿಸ್ವಾರ್ಥದಿಂದ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ. ಅವರ ಸಾಧನೆಯ ಒಂದು ಭಾಗವನ್ನಾದರೂ ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಅಧ್ಯಯನ ಮಾಡುವ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಹಳಕಟ್ಟಿಯವರ ಸಾಧನೆಗೆ ಸಾರ್ಥಕತೆ ಲಭಿಸುತ್ತದೆಯೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿತ ಸದಸ್ಯ ಎಸ್.ಬಿ. ರೇಣು, ಉಪನ್ಯಾಸಕರಾದ ನಾಗರಾಜ, ಜಗದೀಶ್, ಸುನೀಲ್‌ನಾಯ್ಕ್, ಹಿರಿಯ ಶಿಕ್ಷಕರಾದ ವಿಜಯಕುಮಾರ್, ವಿಜಯಕುಮಾರಿ, ಪದ್ಮ, ಬಿಂದು, ಹೇಮಲತಾ, ಶಿಕ್ಷಕರಾದ ಸಿದೇಶ್, ಸಂತೋಷ್, ಪಿ. ವೀರೇಶ್, ಜುಂಜಪ್ಪ, ಬಸವರಾಜು, ಶಿವಕುಮಾರಯ್ಯ ಮತ್ತಿತರರಿದ್ದರು.ಫೋಟೋ 2-ಟಿಪಿಟಿ5ರಲ್ಲಿ ಕಳುಹಿಸಲಾಗಿದೆ. ಶೀರ್ಷಿಕೆ : ತಿಪಟೂರು ನಗರದ ಎಸ್‌ವಿಪಿ ವಿದ್ಯಾಸಂಸ್ಥೆಯಲ್ಲಿ ವಚನಶಾಸ್ತ್ರ ಸಂಶೋಧಕ ಫ.ಗು.ಹಳಕಟ್ಟಿಯವರ ಜಯಂತಿಯನ್ನು ಆಚರಿಸಲಾಯಿತು.

PREV