ಆಸ್ತಿ ಮಾರಿ ವಚನ ಗ್ರಂಥ ಪ್ರಕಟಿಸಿದ್ದ ಫ.ಗು.ಹಳಕಟ್ಟಿ

KannadaprabhaNewsNetwork | Published : Jul 2, 2025 12:20 AM
ಪಟ್ಟಣದ ನಿವೃತ್ತ ನೌಕರರ ಭವನದಲ್ಲಿ ಜಾಗತಿಕ ಲಿಂಗಾಯಿತ ಮಹಾಸಭಾದ ವತಿಯಿಂದ ಹಮ್ಮಿಕೊಂಡಿದ್ದ ವಚನಶಾಸ್ತ್ರ ಪಿತಾಮಹ ಫ.ಗು.ಹಳಕಟ್ಟಿಯವರ ಸ್ಮರಣೋತ್ಸವ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಮಹಾಸ್ವಾಮಿಗಳು | Kannada Prabha

ಸಾರಾಂಶ

ಲಿಂಗಾಯಿತ ಧರ್ಮ ಅಸ್ತಿತ್ವದಲ್ಲಿ ಇರಬೇಕಾದರೆ ವಚನ ಸಾಹಿತ್ಯ ಬಹಳ ಮುಖ್ಯವಾಗಿದೆ. ಇಂತಹ ವಚನ ಸಾಹಿತ್ಯ ಇಡೀ ಲಿಂಗಾಯಿತ ಧರ್ಮದ ಸಾರವನ್ನು ತಿಳಿಸುತ್ತದೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಮಹಾಸ್ವಾಮೀಜಿ ನುಡಿದಿದ್ದಾರೆ.

- ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಮಹಾಸ್ವಾಮೀಜಿ ಶ್ಲಾಘನೆ

- - -

- ಜಾಗತಿಕ ಲಿಂಗಾಯಿತ ಮಹಾಸಭಾದಿಂದ ವಚನಶಾಸ್ತ್ರ ಪಿತಾಮಹ ಫ.ಗು. ಹಳಕಟ್ಟಿ ಸ್ಮರಣೋತ್ಸವ, ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ

- ಸುಸಂಸ್ಕೃತ ಸಮಾಜ ನಿರ್ಮಾಣವಾಗಲು ವಚನಗಳಲ್ಲಿನ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಲಿಂಗಾಯಿತ ಧರ್ಮ ಅಸ್ತಿತ್ವದಲ್ಲಿ ಇರಬೇಕಾದರೆ ವಚನ ಸಾಹಿತ್ಯ ಬಹಳ ಮುಖ್ಯವಾಗಿದೆ. ಇಂತಹ ವಚನ ಸಾಹಿತ್ಯ ಇಡೀ ಲಿಂಗಾಯಿತ ಧರ್ಮದ ಸಾರವನ್ನು ತಿಳಿಸುತ್ತದೆ ಎಂದು ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಮಹಾಸ್ವಾಮೀಜಿ ನುಡಿದರು.

ಪಟ್ಟಣದ ನಿವೃತ್ತ ನೌಕರರ ಭವನದಲ್ಲಿ ಮಂಗಳವಾರ ಜಾಗತಿಕ ಲಿಂಗಾಯಿತ ಮಹಾಸಭಾದಿಂದ ಹಮ್ಮಿಕೊಂಡಿದ್ದ ವಚನಶಾಸ್ತ್ರ ಪಿತಾಮಹ ಫ.ಗು. ಹಳಕಟ್ಟಿಯವರ ಸ್ಮರಣೋತ್ಸವ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸಾಹಿತ್ಯ ಹಾಗೂ ಗ್ರಂಥಗಳು ಒಂದೇ ಧರ್ಮಕ್ಕೆ ಸೀಮಿತ ಆಗಿರುವುದಿಲ್ಲ. ಲಿಂಗಾಯಿತ ಧರ್ಮಕ್ಕೆ ವಚನ ಗ್ರಂಥ ಮೂಲಾಧಾರವಾದರೆ, ವಚನ ಗ್ರಂಥ ಲಿಂಗಾಯಿತ ಧರ್ಮಕ್ಕೆ ಜೀವಾಳವಾಗಿದೆ ಎಂದರು.

ವಚನ ಶಾಸ್ತ್ರದ ಪಿತಾಮಹರಾದ ಡಾ.ಫ.ಗು.ಹಳಕಟ್ಟಿ ಅವರು ಶಿವಶರಣರ 22 ಸಾವಿರ ವಚನಗಳನ್ನು ಸಂಶೋಧಿಸಿ ಸಂಗ್ರಹಿಸಿದ್ದರು. ತಮ್ಮ ಸ್ವಂತ ಆಸ್ತಿ ಮಾರಿ ವಚನ ಗ್ರಂಥವನ್ನು ಪ್ರಕಟಿಸಿದ್ದರು. ಇದರ ಫಲವಾಗಿ ವಚನಗಳು ಇಂದಿಗೂ ಸಮಾಜದಲ್ಲಿ ಪ್ರಸ್ತುತವಾಗಿದೆ. ವಚನ ಸಾಹಿತ್ಯವನ್ನು ಉಳಿಸಿ, ಬೆಳೆಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.

ಲಿಂಗಾಯಿತ ಮಹಾಸಭಾ ಕಾರ್ಯಾಧ್ಯಕ್ಷ ಎಂ.ಯು. ಚನ್ನಬಸಪ್ಪ ಮಾತನಾಡಿ, ಲಿಂಗಾಯಿತ ಧರ್ಮದ ಆಚಾರ-ವಿಚಾರಗಳು ವಚನ ಸಾಹಿತ್ಯದಲ್ಲಿ ಅಡಗಿವೆ. ವಚನಗಳಲ್ಲಿ ಅಡಕವಾಗಿರುವ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಸುಸಂಸ್ಕೃತ ಸಮಾಜ ನಮ್ಮದಾಗಲಿದೆ. 12ನೇ ಶತಮಾನದಲ್ಲಿನ ಬಸವಾದಿ ಶಿವಶರಣರು ಸಮಾಜದಲ್ಲಿದ್ದ ತಾರತಮ್ಯಗಳ ವಿರುದ್ಧ ಹೋರಾಡಿ ತಮ್ಮ ಜೀವನದಲ್ಲಿ ತಾವು ಅನುಭವಿಸಿದ ಕಷ್ಟ- ನೋವುಗಳ ಅನುಭವಗಳನ್ನೇ ವಚನಗಳ ಮೂಲಕ ಪ್ರಸ್ತುತಪಡಿಸಿದ್ದರು ಎಂದರು.

ಸಮಾರಂಭದಲ್ಲಿ ನಿವೃತ್ತ ಪ್ರಾಚಾರ್ಯ ಜಿ.ಬಿ. ಚಂದ್ರಶೇಖರಪ್ಪ ಅನುಭಾವ ವಾಣಿ ನುಡಿದರು. ಮುಖ್ಯ ಅತಿಥಿಗಳಾಗಿ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಎಂ.ರಾಜಪ್ಪ, ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಜಿ.ಎಂ.ಉಜ್ಜಿನಪ್ಪ, ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಟಿ.ವಿ.ರಾಜು, ಶಿವಮೂರ್ತಪ್ಪ ಉಪಸ್ಥಿತರಿದ್ದರು.

- - -

-1ಕೆಸಿಎನ್ಜಿ1.ಜೆಪಿಜಿ:

ಚನ್ನಗಿರಿಯಲ್ಲಿ ವಚನಶಾಸ್ತ್ರ ಪಿತಾಮಹ ಫ.ಗು. ಹಳಕಟ್ಟಿಯವರ ಸ್ಮರಣೋತ್ಸವ, ವಚನ ಸಾಹಿತ್ಯ ಸಂರಕ್ಷಣಾ ದಿನ ಕಾರ್ಯಕ್ರಮದಲ್ಲಿ ಶ್ರೀ ಗುರುಬಸವ ಮಹಾಸ್ವಾಮೀಜಿ ಮಾತನಾಡಿದರು.

PREV