ಕನ್ನಡಪ್ರಭ ವಾರ್ತೆ ಶಿಕಾರಿಪುರ
ವಿಧಾನ ಪರಿಷತ್ ನ ನೈಋತ್ಯ ಪದವೀಧರ ಕ್ಷೇತ್ರ ಹಾಗೂ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದ ಪ್ರಬುದ್ಧ ಅಭ್ಯರ್ಥಿಗಳ ಆಯ್ಕೆಗೆ ಶ್ರಮಿಸಿ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.ಪಟ್ಟಣದ ಮಂಗಳ ಭವನದಲ್ಲಿ ಶಿಕಾರಿಪುರ ಬಿಜೆಪಿ ಮಂಡಲ ವತಿಯಿಂದ ಆಯೋಜಿಸಿದ್ದ ಪ್ರಮುಖ ಕಾರ್ಯಕರ್ತರ ವಿಶೇಷ ಸಭೆಯಲ್ಲಿ ಮಾತನಾಡಿ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಶಿಸ್ತು ಬದ್ಧವಾಗಿ ಚುನಾವಣೆ ಎದುರಿಸಿದ್ದು, ಪಕ್ಷದ ವಿರುದ್ಧ ಸೀಮಿತ ಗುಂಪು ನಡೆಸಿದ ವಿರೋಧ ಲೆಕ್ಕಿಸದೆ ಚುನಾವಣೆಯ ಸಂಘಟನಾತ್ಮಕವಾಗಿ ವ್ಯವಸ್ಥಿತ ರೀತಿಯಲ್ಲಿ ನಡೆಸಿದ್ದು, ಈ ಬಾರಿಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಡಾ.ಸರ್ಜಿ ವಿರುದ್ಧ ಮಾಜಿ ಶಾಸಕ ರಘುಪತಿ ಭಟ್, ಜೊತೆಗೆ ಪಕ್ಷದಲ್ಲಿ ಎಲ್ಲ ಅಧಿಕಾರ ಅನುಭವಿಸಿದ ಆಯನೂರು ಮಂಜುನಾಥ್ ಮತ್ತಿತರರು ಕಣದಲ್ಲಿದ್ದಾರೆ. ಲೋಕಸಭಾ ಚುನಾವಣೆ ರೀತಿಯಲ್ಲಿ ಪಕ್ಷಕ್ಕೆ ಈ ಬಾರಿ ಮತ್ತೆ ಸವಾಲು ಎದುರಾಗಿದ್ದು ಮುಖಂಡರು, ಕಾರ್ಯಕರ್ತರು ನಿರ್ಲಕ್ಷಿಸದೆ ವಿರೋಧಿಗಳಿಗೆ ತಕ್ಕಪಾಠ ಕಲಿಸಬೇಕಿದೆ ಎಂದರು. ವಿಧಾನ ಪರಿಷತ್ತಿನಲ್ಲಿ ಪಕ್ಷದ ಶಾಸಕರು ಹಲವು ವರ್ಷಗಳಿಂದ ಹೆಚ್ಚಿದ್ದು ಇದೀಗ ಪಕ್ಷದ ಸಂಘಟನೆ ಸದೃಢವಾಗಿದ್ದು, ಈ ಸಂದರ್ಭದಲ್ಲಿ ವಿಧಾನಪರಿಷತ್ತಿನ ಎಲ್ಲ ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯಗಳಿಸಬೇಕಾದ ಅಗತ್ಯವಿದೆ. ಕಳೆದ ಬಾರಿ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯೇ ಈ ಬಾರಿ ಪ್ರಮುಖ ಎದುರಾಳಿಯಾಗಿದ್ದು ಮಣಿಸಲು ಕಾರ್ಯಕರ್ತರು ಚುನಾವಣೆಯ ಸವಾಲಾಗಿ ಸ್ವೀಕರಿಸಲು ತಿಳಿಸಿದರು.
ಈ ಬಾರಿಯ ಚುನಾವಣೆಯಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರ ನೋಂದಾಯಿಸಿ ಆಶಾಭಾವನೆ ಮೂಡಿಸಿದ್ದು ಇದೀಗ ಪ್ರತಿ ಮತದಾರರ ಮನೆಮನೆಗೆ ತೆರಳಿ ಮನವೊಲಿಸಿ ಪಕ್ಷದ ಪರವಾಗಿ ಮತ ಚಲಾಯಿಸಲು ತಿಳಿಸಿ ಚುನಾವಣೆಯ ದೃಷ್ಟಿಯಿಂದ ಹಲವಾರು ಸಂಘಟನಾತ್ಮಕ ವಿಚಾರಗಳ ಕುರಿತು ಚರ್ಚೆ ನಡೆಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮ ವಹಿಸಲು ಸೂಕ್ತ ಸಲಹೆ ಸೂಚನೆಗಳ ನೀಡಿದರು.ಈ ಸಂದರ್ಭದಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಹನುಮಂತಪ್ಪ ಸಂಕ್ಲಾಪುರ, ನಗರಾಧ್ಯಕ್ಷ ರಾಘವೇಂದ್ರ ಎಸ್.ಎಸ್, ಮುಖಂಡ ಹರಿಕೃಷ್ಣ, ರೇವಣಪ್ಪ ಕೊಳಗಿ, ವೀರೇಂದ್ರ, ಸಿದ್ದಲಿಂಗಪ್ಪ, ಡಾ.ಭೂಕಾಂತ್, ಮೋಹನ್ ಟಿ.ಎಸ್, ಮಹೇಶ್ ಹುಲ್ಮಾರ್, ಬೆಣ್ಣೆ ಪ್ರವೀಣ, ಡಿ.ಎಲ್.ಬಸವರಾಜ, ರುದ್ರಪ್ಪಯ್ಯ, ಶೇಖರಪ್ಪ ಅಂಬಾರಗೊಪ್ಪ, ಮಲ್ಲಿಕಾರ್ಜುನಾಚಾರ್, ಪ್ರವೀಣ ಶೆಟ್ಟಿ ಮತ್ತಿತರರಿದ್ದರು.
ಬಿಜೆಪಿಯೊಂದಿಗೆ ಜೆಡಿಎಸ್ ಪಕ್ಷವು ವಿಧಾನ ಪರಿಷತ್ ಚುನಾವಣೆಯಲ್ಲಿ ಮೈತ್ರಿ ಮಾಡಿದ್ದು, ಪ್ರತಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಹೊಂದಾಣಿಕೆಯಿಂದ ಈಗಾಗಲೇ ನೋಂದಣಿ ಮಾಡಿರುವ ಪದವೀಧರರ ಹಾಗೂ ಶಿಕ್ಷಕರ ಪಕ್ಷದ ಕಾರ್ಯಕರ್ತರು ಖುದ್ದು ಭೇಟಿಯಾಗಿ ಪಕ್ಷದತ್ತ ಹೆಚ್ಚಿನ ಒಲವು ತೋರಲು ಮನವೊಲಿಸುವ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಈ ಮೂಲಕ ಮೈತ್ರಿ ಅಭ್ಯರ್ಥಿಗಳ ಗೆಲ್ಲಿಸಬೇಕು.ಬಿ.ವೈ.ರಾಘವೇಂದ್ರ, ಸಂಸದ