ಮುಂದಿನ ಒಂದು ತಿಂಗಳೊಳಗಾಗಿ ಶಾಲಾ ಮಕ್ಕಳ ಫೇಸ್ ರೀಡಿಂಗ್ ಹಾಜರಾತಿ ಪ್ರಕ್ರಿಯೆಗೆ ರಾಜ್ಯದಲ್ಲಿ ಚಾಲನೆ ನೀಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಗದಗ: ಮುಂದಿನ ಒಂದು ತಿಂಗಳೊಳಗಾಗಿ ಶಾಲಾ ಮಕ್ಕಳ ಫೇಸ್ ರೀಡಿಂಗ್ ಹಾಜರಾತಿ ಪ್ರಕ್ರಿಯೆಗೆ ರಾಜ್ಯದಲ್ಲಿ ಚಾಲನೆ ನೀಡಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಸೋಮವಾರ ಸಂಜೆ ಜಿಲ್ಲಾಡಳಿತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಶಿಕ್ಷಕರ ಫೇಸ್ ರೀಡಿಂಗ್ ಆನ್‌ಲೈನ್ ಹಾಜರಾತಿ "ಪ್ರತ್ಯಕ್ಷ " ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಸರ್ಕಾರಿ ಶಾಲಾ ಶಿಕ್ಷಕರ ಆನ್ ಲೈನ್ ಹಾಜರಾತಿ ಅಗತ್ಯವಿದ್ದು, ಇದೇ ಪ್ರಕ್ರಿಯೆಯನ್ನು ರಾಜ್ಯಾದ್ಯಂತ ಕೈಗೊಳ್ಳಲು ಹಿರಿಯ ಸಚಿವ ಎಚ್.ಕೆ. ಪಾಟೀಲ ಅವರ ಸಹಕಾರ ಅತ್ಯಗತ್ಯವಿದೆ. ಶಿಕ್ಷಕರ ಫೇಸ್ ರೀಡಿಂಗ್ ಹಾಜರಾತಿ ಪ್ರಕ್ರಿಯೆಯಂತೆ ರಾಜ್ಯದಲ್ಲಿರುವ 57 ಲಕ್ಷ ಶಾಲಾ ಮಕ್ಕಳ ಫೇಸ್ ರೀಡಿಂಗ್ ಹಾಜರಾತಿಗೆ ಇನ್ನೊಂದು ತಿಂಗಳ ಒಳಗಾಗಿ ಪ್ರಕ್ರಿಯೆಗೆ ಅಧಿಕೃತ ಚಾಲನೆ ನೀಡಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ತಂತ್ರಜ್ಞಾನ ಬಳಕೆ ಮಾಡಿಕೊಂಡು ರಾಜ್ಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಣ ಇಲಾಖೆ ಅಧಿಕಾರಿಗಳು ಮುಂದಾಗೋಣ ಎಂದರು. ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಆಯವ್ಯಯ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆಯಂತೆ ರಾಜ್ಯದಲ್ಲಿ ಶಿಕ್ಷಕರು, ಇಲಾಖೆಯ ಸಿಬ್ಬಂದಿಗಳಿಗೆ ಆನ್ ಲೈನ್ ಹಾಜರಾತಿಗೆ ಇಂದು ಗದಗನಲ್ಲಿ ಚಾಲನೆ ನೀಡಲಾಗಿದೆ. ಖೊಟ್ಟಿ ಹಾಜರಾತಿಗೆ ಇನ್ಮುಂದೆ ಅವಕಾಶ ಇಲ್ಲ. ಇದು ರಾಜ್ಯದಲ್ಲೇ ಮೊದಲು ಗದಗನಲ್ಲಿ ಚಾಲನೆ ದೊರೆತಿದೆ ಎಂದರು. ಆನ್ ಲೈನ್ ಹಾಜರಾತಿಯು ಶಿಕ್ಷಕರು ಶಾಲಾ ಆವರಣ ತಲುಪಿದ ನಂತರ ಮೊಬೈಲ್ ಆ್ಯಪ್ ಮೂಲಕ ಹಾಕಬೇಕಾಗುತ್ತದೆ. ಮನೆಯಲ್ಲಿ ಕುಳಿತು ಹಾಜರಿ ಹಾಕುವ ಅವಕಾಶ ಇಲ್ಲ. ಇದರಿಂದ ಸಮಯಕ್ಕೆ ಸರಿಯಾಗಿ ಶಾಲೆಯಲ್ಲಿ ಶಿಕ್ಷಕರು ಇರುವಂತೆ ಪ್ರಕ್ರಿಯೆ ಆಗುತ್ತಿದೆ. ಇದರಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಶಿಕ್ಷಕರಿಗೆ ಕಾಲಾವಕಾಶ ಸಿಕ್ಕಂತಾಗುತ್ತಿದೆ ಎಂದು ಸಚಿವ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು. ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ, ವಿಪ ಸದಸ್ಯ ಎಸ್.ವಿ. ಸಂಕನೂರ, ಶಾಸಕ ಡಾ. ಚಂದ್ರು ಲಮಾಣಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಬಿ.ಬಿ. ಅಸೂಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರ್ ಸಾಬ್ ಬಬರ್ಜಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿಪಂ ಸಿಇಒ ಭರತ ಎಸ್, ಶಿಕ್ಷಣ ಇಲಾಖೆ ಅಪರ ಆಯುಕ್ತರು, ಗದಗ ಡಿಡಿಪಿಐ ಆರ್. ಎಸ್. ಬುರಡಿ ಸೇರಿದಂತೆ ಇತರ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.
ಗದಗ ಜಿಲ್ಲೆಯ ಒಟ್ಟು ಶಿಕ್ಷಕರು ಮತ್ತು ಸಿಬ್ಬಂದಿಗಳು ಸೇರಿ 4789 ಜನರು ಆನ್ ಲೈನ್ ಹಾಜರಾತಿ ನೋಂದಣಿ ಮಾಡಿಕೊಂಡಿದ್ದಾರೆ. ಜಿಲ್ಲೆಯ 715 ಶಾಲೆಗಳು, 14 ಕಚೇರಿಗಳು, 253 ಸಿಬ್ಬಂದಿಗಳು ಮತ್ತು ಶಿಕ್ಷಕರು ಸೇರಿ ಈಗಾಗಲೇ ನೋಂದಣಿ ಪ್ರಕ್ರಿಯೆ ಯಶಸ್ವಿ ಆಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಈ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.