ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಸವಾಲುಗಳನ್ನು ಎದುರಿಸಿ ಉದ್ಯಮಶೀಲತೆ ಅಳವಡಿಸಿಕೊಂಡು ನಿರಂತರ ಹೊಸ ತಂತ್ರಜ್ಞಾನ ಕಲಿಯುತ್ತಾ ಉದ್ಯಮ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರನೀಡಲು ಪ್ರಯತ್ನಿಸಬೇಕೆಂದು ಮಹಾರಾಷ್ಟ್ರ ಕರಾಡದ ಎಜಿ ಎಲೆಕ್ಟ್ರೋ ಸರ್ವೀಸಿಸ್ ನ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀಧರ್ ರಾಮದುರ್ಗಕರ್ ಹೇಳಿದರು.ಬಿ.ವಿ.ವಿ ಸಂಘದ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ 3 ದಿನಗಳ ಕಾಲ ಹಮ್ಮಿಕೊಂಡ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರಾಜೆಕ್ಟ್ ಪ್ರದರ್ಶನ/ಸ್ಪರ್ಧೆ, ಅನ್ವೇಷಣ ಪ್ರಾಜೆಕ್ಟ್ ಪ್ರದರ್ಶನ ಕಾರ್ಯಕ್ರಮವನ್ನು ಶೂಕ್ರವಾರ ಉದ್ಘಾಟಿಸಿ ಮಾತನಾಡಿದರು.
ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸೃಜನಶೀಲತೆ ಮತ್ತು ಸಂಶೋಧನಾ ಮನೋಭಾವದಿಂದ ವಿಜ್ಞಾನ ಮತ್ತು ತಂತ್ರಜ್ಞಾನದ ವೃತ್ತಿಯ ಕಡೆಗೆ ಗಮನಹರಿಸಬೇಕು, ಜೀವನದಲ್ಲಿ ಹೊಸದನ್ನು ಕಲಿಯುತ್ತಾ ಸಾಮಾಜಿಕ ಮಾಧ್ಯಮವನ್ನು ಸದ್ಬಳಕೆ ಮಾಡಿಕೊಂಡು ಸಮಯದ ಮಹತ್ವ ಅರಿತು, ರಿಸ್ಕ್ ತೆಗೆದುಕೊಂಡು ಔದ್ಯೋಗಿಕ ರಂಗದಲ್ಲಿ ಸಾಧನೆ ಮಾಡಬೇಕು, ಬರದಂತಹ ಸಂದರ್ಭದಲ್ಲಿ ರೈತರಿಗೆ ಅನೂಕುಲವಾಗುವ ನಿಟ್ಟಿನಲ್ಲಿ ಎಂಜಿನಿಯರಿಂಗ್ ತಂತ್ರಜ್ಞಾನವನ್ನು ಯಾವ ರೀತಿ ಬಳಬಹುದು ಎಂಬುವುದರತ್ತ ವಿದ್ಯಾರ್ಥಿಗಳು ಗಮನಹರಿಸಬೇಕು ಎಂದು ಸಲಹೆ ನೀಡಿದರು.ಬಿ.ವಿ.ವಿ.ಎಸ್ ತಾಂತ್ರಿಕ ಶಿಕ್ಷಣ ನಿರ್ದೇಶಕ ಡಾ.ಆರ್.ಎನ್. ಹೆರಕಲ್ ಮಾತನಾಡಿ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಪ್ರತಿಭೆ ಅನಾವರಣ ಮಾಡಲು ಉತ್ತಮ ವೇದಿಕೆ ಕಲ್ಪಿಸುತ್ತವೆ. ವಿದ್ಯಾರ್ಥಿಗಳು ತಮ್ಮ ಹೊಸ ಕಲ್ಪನೆಗಳನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಭಾರತ ಸರ್ಕಾರದ ಎಐಸಿಟಿಇ-ಬಿಇಸಿ-ಐಡಿಯಾ ಲ್ಯಾಬ್ ಒಂದು ಉತ್ತಮ ಸೌಲಭ್ಯವಾಗಿದೆ. ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವದಿಂದ ಹೊಸ ಹೊಸ ಚಿಂತನೆಗಳನ್ನು ಕಾರ್ಯರೂಪಕ್ಕೆ ತಂದಾಗ ಅದ್ಭುತ ಬದಲಾವಣೆಗಳನ್ನು ತರಬಹುದು ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಚಾರ್ಯರಾದ ಡಾ. ವೀಣಾ ಸೋರಗಾವಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ತಾಂತ್ರಿಕ ಸಾಮರ್ಥ್ಯ, ಆತ್ಮ ವಿಶ್ವಾಸ ಮತ್ತು ಉತ್ತಮ ಸಂವಹನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಸಹಕಾರಿಯಾಗುತ್ತವೆ. ಸಮಾಜದ ವಿವಿಧ ಸಮಸ್ಯೆಗಳಿಗೆ ಕೃತಕ ಬುದ್ಧಿಮತ್ತೆ ಮತ್ತು ಮಷೀನ್ ಲರ್ನಿಂಗ್ ನಂತಹ ನೂತನ ತಂತ್ರಜ್ಞಾನ ಅಳವಡಿಕೆಯಿಂದ ಪರಿಣಾಮಕಾರಿ ಮತ್ತು ಸುಸ್ಥಿರ ಪರಿಹಾರ ನೀಡಲು ಪ್ರಯತ್ನಿಸಬೇಕು ಎಂದು ಹೇಳಿದರು.ಕಾರ್ಯಕ್ರಮದ ಸಂಯೋಜಕ ಡಾ.ಅನೀಲ ದೇವನಗಾಂವಿ ಮೂರು ದಿನಗಳ ಪ್ರದರ್ಶನ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ನೀಡಿದರು. ಡೀನ್ ಗಳಾದ ಡಾ.ಪಿ.ಎನ್. ಕುಲಕರ್ಣಿ, ಡಾ.ಭಾರತಿ ಮೇಟಿ, ಡಾ.ಮಹಾಬಳೇಶ, ಡಾ.ಎಸ್.ಜಿ. ಕಂಬಾಳಿಮಠ ಹಾಗೂ ವಿಭಾಗಗಳ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ರಕ್ಷಿತಾ ಜೋಶಿ ಸ್ವಾಗತ ಗೀತೆ ಹಾಡಿದರು. ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಕೆ.ಚಂದ್ರಶೇಖರ ಸ್ವಾಗತಿಸಿದರು. ಸಂಯೋಜಕ ಡಾ.ಸಿ.ಎಂ. ಜವಳಗಿ ಪರಿಚಯಿಸಿದರು. ಇ&ಸಿಇ ವಿಭಾಗದ ಪ್ರಾಧ್ಯಾಪಕ ಡಾ. ವಿಜಯಲಕ್ಷ್ಮೀ ಜಿಗಜಿನ್ನಿ ನಿರೂಪಿಸಿದರು. ಸಂಯೋಜಕ ಸಿಎಸ್ಸಿ ವಿಭಾಗದ ಡಾ.ವಿ.ಬಿ. ಪಾಗಿ .
ಗಮನ ಸೆಳೆದ ಪ್ರದರ್ಶನ:ರೈತರಿಗೆ ಮಳೆಯ ಮುನ್ಸೂಚನೆ ನೀಡುವ ಮಾದರಿ, ಪ್ರಚಲಿತ ತಾಂತ್ರಿಕತೆ ಮತ್ತು ಔದ್ಯೋಗಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ಅನೇಕ ಪ್ರದರ್ಶನಗಳು ಜನರ ಗಮನ ಸೆಳದವು, ಎಐಸಿಟಿಇ-ಬಿಇಸಿ-ಐಡಿಯಾ ಲ್ಯಾಬ್ ಅಡಿಯಲ್ಲಿ ಹಮ್ಮಿಕೊಂಡ ಈ ಪ್ರದರ್ಶನ/ಸ್ಪರ್ಧಾ ಕಾರ್ಯಕ್ರಮದಲ್ಲಿ 600 ಕ್ಕೂ ಅಧಿಕ ವಿದ್ಯಾರ್ಥಿಗಳು 250 ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಿದರು.