ಚಂದ್ರು ಕೊಂಚಿಗೇರಿ
ತಾಲೂಕಿನ ಬೀರಬ್ಬಿ ಹತ್ತಿರದ ಮೈಲಾರ ಸಕ್ಕರೆ ಕಾರ್ಖಾನೆಯು 8600 ಕ್ವಿಂಟಲ್ ಮೆಕ್ಕೆಜೋಳ ಖರೀದಿ ಮಾಡಲು ಗುರಿ ನಿಗದಿಯಾಗಿದೆ. ಇದಕ್ಕಾಗಿ ಅರಳಿಹಳ್ಳಿ ವಿಎಸ್‌ಎಸ್‌ಎನ್ ಮೂಲಕ ಬೀರಬ್ಬಿಯಲ್ಲಿ, ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಿದ್ದಾರೆ. ಈವರೆಗೂ 600ಕ್ಕೂ ಹೆಚ್ಚು ರೈತರು, 26 ಸಾವಿರ ಕ್ವಿಂಟಲ್ ಮೆಕ್ಕೆಜೋಳ ಖರೀದಿಗೆ ನೋಂದಣಿ ಮಾಡಿಸಿದ್ದಾರೆ. ಆದರೆ ಕಾರ್ಖಾನೆ ಖರೀದಿಸಿದ್ದು ಕೇವಲ 12 ಲಕ್ಷ ಮೌಲ್ಯದ 640 ಕ್ವಿಂಟಲ್ ಮಾತ್ರ, ಉಳಿದ 2 ರಿಂದ 3 ಸಾವಿರ ಕ್ವಿಂಟಲ್ ಮೆಕ್ಕೆಜೋಳ ಖರೀದಿಗೆ ಕಾರ್ಖಾನೆ ಮಾಲೀಕರು ಕೇಂದ್ರಕ್ಕೆ ಹಣ ಪಾವತಿ ಮಾಡಲು ಹಿಂದೇಟು ಹಾಕುತ್ತಿದೆ ಎಂದು ರೈತರು ಆರೋಪಿಸುತ್ತಾರೆ.
ಮೆಕ್ಕೆಜೋಳ ಖರೀದಿ ಕೇಂದ್ರದಲ್ಲಿ ರೈತರಿಗೆ ಕ್ವಿಂಟಲ್‌ಗೆ ಬೆಂಬಲ ಬೆಲೆ ಪ್ರಕಾರ ₹2400 ನೀಡಬೇಕಿದೆ. ಆದರೆ ಕಾರ್ಖಾನೆ ಮಾಲೀಕರು ಹೊರಗಡೆ ಖಾಸಗಿಯಾಗಿ, ಕ್ವಿಂಟಲ್‌ಗೆ ₹1800 ರಿಂದ ₹1900 ದರದಲ್ಲಿ ರೈತರಿಂದ ಮೆಕ್ಕೆಜೋಳ ಖರೀದಿಗೆ ಮುಂದಾಗಿದ್ದಾರೆ. ಇದರಿಂದ ಕಾರ್ಖಾನೆ ಮಾಲಿಕರಿಗೆ ಕ್ವಿಂಟಲ್‌ಗೆ ₹600 ಲಾಭವಾಗುತ್ತಿದೆ. ಎಪಿಎಂಸಿ ಮೂಲಕ ನೇರ ರೈತರಿಂದ ಮೆಕ್ಕೆಜೋಳ ಖರೀದಿ ಮಾಡಲಿ, ಕಾರ್ಖಾನೆ ಮಾಲಿಕರಿಗೆ ರೈತರ ಕಷ್ಟ ಗೊತ್ತಾಗುತ್ತಿಲ್ಲ. ಅವರು ಲಾಭ ನೋಡುತ್ತಾರೆ. ಸರ್ಕಾರದ ಆದೇಶಕ್ಕೆ ಕಿಮ್ಮತ್ತು ನೀಡದ ಕಾರ್ಖಾನೆ ವಿರುದ್ಧ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಬೇಕೆಂದು ರೈತರು ಆಗ್ರಹಿಸಿದ್ದಾರೆ.ಕಾರ್ಖಾನೆಯ ಮಾಲೀಕರು ಖರೀದಿ ಕೇಂದ್ರದಲ್ಲಿ ತೂಕಕ್ಕೂ ಮುನ್ನವೇ ಹಣ ಪಾವತಿಸಬೇಕೆಂಬ ನಿಯಮವಿದೆ. ಆದರೆ ಕಾರ್ಖಾನೆಯವರು ನಮ್ಮಲ್ಲಿ ಹಣ ಇಲ್ಲ ಎನ್ನುತ್ತಿದ್ದಾರೆ, ಅದಕ್ಕಾಗಿಯೇ ನೋಂದಣಿ ಲಾಗಿನ್ ಲಾಕ್ ಆಗಿದೆ. ರೈತರು ನಿತ್ಯ ಖರೀದಿ ಕೇಂದ್ರಕ್ಕೆ ಹೋಗಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ಬರುತ್ತಿದ್ದಾರೆ.
ಮೈಲಾರ ಸಕ್ಕರೆ ಕಾರ್ಖಾನೆ ಖರೀದಿಗೆ 8600 ಕ್ವಿಂಟಲ್ ನಿಗದಿಯಾಗಿದೆ. ಇದರಲ್ಲಿ 12 ಲಕ್ಷ ಮೌಲ್ಯದ 640 ಕ್ವಿಂಟಲ್ ಮಾತ್ರ ಖರೀದಿಯಾಗಿದೆ. ಈವರೆಗೂ 26 ಸಾವಿರ ಕ್ವಿಂಟಲ್ ಮೆಕ್ಕೆಜೋಳ ಖರೀದಿಗೆ ರೈತರು ನೋಂದಣಿ ಮಾಡಿಸಿದ್ದಾರೆ ಎನ್ನುತ್ತಾರೆ ಬೀರಬ್ಬಿ ವಿಎಸ್‌ಎಸ್‌ಎನ್ ಖರೀದಿ ಕೇಂದ್ರದ ಕಾರ್ಯದರ್ಶಿ ಮದ್ದಾನಸ್ವಾಮಿ.ಮೈಲಾರ ಸಕ್ಕರೆ ಕಾರ್ಖಾನೆಯವರು ಮೆಕ್ಕೆಜೋಳ ಖರೀದಿಗೂ ಮುನ್ನ ಹಣ ಪಾವತಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಅವರಿಗೆ ಸಾಕಷ್ಟು ಬಾರಿ ಸಂಪರ್ಕ ಮಾಡಿದ್ದರೂ ಸ್ಪಂದಿಸದೇ ನಮ್ಮಲ್ಲಿ ಈಗ ಹಣ ಇಲ್ಲ. ಪಾವತಿ ಮಾಡಿದ ಮೇಲೆ ಖರೀದಿ ಮಾಡಿ ಎನ್ನುತ್ತಾರೆ. ಈ ಕುರಿತು ರೈತರಿಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ ಎನ್ನುತ್ತಾರೆ ರಾಜ್ಯ ಮಾರಾಟ ಮಹಾ ಮಂಡಳಿ ಜಿಲ್ಲಾ ವ್ಯವಸ್ಥಾಪಕ ರಂಗನಾಥ.
ರೈತರ ಮೆಕ್ಕೆಜೋಳವನ್ನು ಎಪಿಎಂಸಿಯಲ್ಲಿ ಖರೀದಿ ಕೇಂದ್ರ ತೆರೆದು ಆ ಮೂಲಕ ನೇರವಾಗಿ ಖರೀದಿ ಮಾಡಬೇಕು. ಕಾರ್ಖಾನೆ ಹಾಗೂ ಖರೀದಿ ಕೇಂದ್ರದಲ್ಲಿ ನಾ ಕೊಡೆ ನೀ ಬಿಡೆ ಎನ್ನುವಂತಾಗಿದೆ ಎನ್ನುತ್ತಾರೆ ಮಲ್ಲಿಕಾರ್ಜುನ ಬೀರಬ್ಬಿ.