ಹಾವೇರಿ: ಜಿಲ್ಲೆಯಲ್ಲಿ ಕಬ್ಬಿನ ದರ ನಿಗದಿ ಕುರಿತು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಬೇಕಿದ್ದ ಸಭೆಗೆ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಬಾರದ್ದರಿಂದ ರದ್ದಾಗಿದೆ. ಪ್ರತಿ ಟನ್ ಕಬ್ಬಿಗೆ ₹3600 ದರ ನೀಡಲೇಬೇಕು ಎಂದು ಪಟ್ಟು ಹಿಡಿದಿರುವ ರೈತರು, ಇದಕ್ಕೆ ಬುಧವಾರದವರೆಗೆ ಗಡುವು ನೀಡಿದ್ದಾರೆ. ಅಷ್ಟರೊಳಗೆ ಬೇಡಿಕೆ ಈಡೇರದಿದ್ದರೆ ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಅವರ ಮನೆ ಮುಂದೆ ಅಹೋರಾತ್ರಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಇದಾದ ಬಳಿಕ ಬೆಳಗಾವಿ ಜಿಲ್ಲೆಯ ರೈತರಿಗೆ ಪ್ರತಿ ಟನ್ ಕಬ್ಬಿಗೆ ಗರಿಷ್ಠ ₹3600 ನೀಡಲು ಅಲ್ಲಿನ ಸಕ್ಕರೆ ಕಾರ್ಖಾನೆಗಳು ಒಪ್ಪಿಕೊಂಡಿರುವುದು ಹಾವೇರಿ ಜಿಲ್ಲೆಯ ರೈತರ ಹೋರಾಟಕ್ಕೆ ಮತ್ತಷ್ಟು ಬಲ ನೀಡಿದೆ. ಬೆಳಗಾವಿಯಲ್ಲಿ ಒಪ್ಪಂದವಾದ ಮಾದರಿಯಲ್ಲಿಯೇ ಹಾವೇರಿ ಜಿಲ್ಲೆಯ ರೈತರಿಗೂ ₹3600 ದರ ನೀಡಬೇಕು ಎಂದು ರೈತ ಮುಖಂಡರು ಪಟ್ಟು ಹಿಡಿದಿದ್ದಾರೆ.
ಗುರುವಾರ ನಡೆದ ಎರಡನೇ ಸುತ್ತಿನ ಸಭೆಯಲ್ಲಿಯೂ ಕಾರ್ಖಾನೆಗಳ ಪ್ರತಿನಿಧಿಗಳು ತಮ್ಮ ನಿಲುವು ಬದಲಿಸಲಿಲ್ಲ. ಒಂದು ಕಾರ್ಖಾನೆಯವರು ಪ್ರತಿ ಟನ್‌ಗೆ ಗರಿಷ್ಠ ₹3000 ಹಾಗೂ ಮತ್ತೊಂದು ಕಾರ್ಖಾನೆಯವರು ₹3100 ಮಾತ್ರ ನೀಡಲು ಸಾಧ್ಯ ಎಂದು ಸ್ಪಷ್ಟಪಡಿಸಿದರು. ಇದಕ್ಕಿಂತ ಹೆಚ್ಚಿನ ದರ ನೀಡಲು ಸಾಧ್ಯವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು. ಹೀಗಾಗಿ ಎರಡನೇ ಸಭೆಯೂ ಯಾವುದೇ ನಿರ್ಧಾರಕ್ಕೆ ಬರದೆ ಮುಕ್ತಾಯಗೊಂಡಿತ್ತು. ಈ ಹಿನ್ನೆಲೆಯಲ್ಲಿ ನ.14ರಂದು ನಡೆಯುವ ಸಭೆಗೆ ಸಕ್ಕರೆ ಕಾರ್ಖಾನೆಗಳ ಮಾಲೀಕರೇ ಖುದ್ದಾಗಿ ಹಾಜರಾಗುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಆದರೆ, ಶನಿವಾರದ ಸಭೆಗೆ ಕಾರ್ಖಾನೆಗಳ ಪ್ರತಿನಿಧಿಗಳೇ ಗೈರುಹಾಜರಾಗಿದ್ದಾರೆ. ಸಭೆಗೂ ಮುನ್ನವೇ ತಾವು ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ಮೊತ್ತ ನೀಡಲು ಸಾಧ್ಯವಿಲ್ಲ ಎಂಬ ವಿಷಯವನ್ನು ಕಾರ್ಖಾನೆಗಳ ಆಡಳಿತ ಮಂಡಳಿಗಳು ಪತ್ರದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತಿಳಿಸಿವೆ ಎನ್ನಲಾಗಿದೆ.ಬುಧವಾರದ ಗಡುವು:ಕಾರ್ಖಾನೆಗಳ ಹಠಮಾರಿ ಧೋರಣೆಯಿಂದ ಅಸಮಾಧಾನಗೊಂಡಿರುವ ರೈತ ಮುಖಂಡರು, ಪ್ರತಿ ಟನ್ ಕಬ್ಬಿಗೆ ₹3600 ನೀಡುವ ಬೇಡಿಕೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬುಧವಾರದೊಳಗೆ ಕಾರ್ಖಾನೆಗಳು ಸೂಕ್ತ ನಿರ್ಧಾರ ಪ್ರಕಟಿಸಬೇಕು. ಇಲ್ಲದಿದ್ದರೆ ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಅವರ ಮನೆ ಮುಂದೆ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಜಿಲ್ಲೆಯ ಕಬ್ಬಿನ ದರ ನಿಗದಿ ವಿವಾದ ಕಗ್ಗಂಟಾಗಿದ್ದು, ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ.