ಮಸುಕಾಗುತ್ತಿವೆ ಸಂಸ್ಕೃತಿ ಬಿಂಬಿಸುವ ಜಾನಪದ ಕಲೆ: ವೈ.ಎಸ್.ವಿ.ದತ್ತ

KannadaprabhaNewsNetwork | Published : Jan 17, 2024 1:45 AM

ಸಾರಾಂಶ

ಯಗಟಿ ಗ್ರಾಮದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ದ್ವಿತೀಯ ಜಾನಪದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ವೈ.ಎಸ್.ವಿ.ದತ್ತ ಬದಲಾಗುತ್ತಿರುವ ಕಾಲಘಟ್ಟದಲ್ಲಿ ನಮ್ಮ ಸಂಸ್ಕೃತಿ ಬಿಂಬಿಸುವ ಜಾನಪದ ಕಲೆಗಳು ಮಸುಕಾಗುತ್ತಿದೆ ಎಂಬ ಬೇಸರ ವಿದ್ದರೂ ತಲ ತಲಾಂತರದಿಂದ ಬಂದಿರುವ ಜಾನಪದಕ್ಕೆ ಎಂದೂ ಅಳಿವಿಲ್ಲ ಎಂದರು.

ಯಗಟಿ ಗ್ರಾಮದಲ್ಲಿ ಜಾನಪದ ಸಮ್ಮೇಳನ

ಕನ್ನಡಪ್ರಭ ವಾರ್ತೆ, ಕಡೂರು

ಬದಲಾಗುತ್ತಿರುವ ಕಾಲಘಟ್ಟದಲ್ಲಿ ನಮ್ಮ ಸಂಸ್ಕೃತಿ ಬಿಂಬಿಸುವ ಜಾನಪದ ಕಲೆಗಳು ಮಸುಕಾಗುತ್ತಿದೆ ಎಂಬ ಬೇಸರ ವಿದ್ದರೂ ತಲ ತಲಾಂತರದಿಂದ ಬಂದಿರುವ ಜಾನಪದಕ್ಕೆ ಎಂದೂ ಅಳಿವಿಲ್ಲ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಹೇಳಿದರು. ಮಂಗಳವಾರ ತಾಲೂಕಿನ ಯಗಟಿ ಗ್ರಾಮದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ದ್ವಿತೀಯ ಜಾನಪದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಜಾನಪದ ಎಂಬುದು ನಮ್ಮ ಗ್ರಾಮೀಣ ಬದುಕಿನ ಪ್ರತೀಕ. ಇಂದಿಗೂ ಗ್ರಾಮೀಣ ಜನರಲ್ಲಿ ಜಾನಪದ ಆಚರಣೆಗಳಿವೆ. ನಮ್ಮ ಗ್ರಾಮ ದೇವತೆಗಳು ಜಾನಪದದ ಜ್ವಲಂತ ಪ್ರತಿನಿಧಿಗಳು. ದೇವರ ಜೊತೆ ಪ್ರೀತಿಯಿಂದ ಭಾವನಾತ್ಮಕವಾಗಿ ಮಾತನಾಡುವ, ಬಯ್ಯುವ, ಛೇಡಿಸುವ ಶಕ್ತಿಯಿರುವುದು ನಮ್ಮ ಜಾನಪದರಿಗೆ ಮಾತ್ರ. ಆದರೆ ಬದಲಾಗುತ್ತಿರುವ ಕಾಲಘಟ್ಟದಲ್ಲಿ ನಮ್ಮ ಸಂಸ್ಕೃತಿ ಬಿಂಬಿಸುವ ಜಾನಪದ ಕಲೆಗಳು ಮಸುಕಾಗುತ್ತಿದೆಯೆಂಬ ಬೇಸರ ಒಂದೆಡೆ ಇದ್ದರೂ ಜಾನಪದಕ್ಕೆ ಎಂದೂ ಅಳಿವಿಲ್ಲ ಎಂದರು.

ಪ್ರಧಾನ ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಪ್ರೊ. ಕಾಳೇಗೌಡ ನಾಗವಾರ, ಸಮಾನತೆ ಮತ್ತು ಜೀವನಾನುಭವದ ಸಂಕಲನವೇ ಜಾನಪದ. ಜಾನಪದರು ಎಲ್ಲರಿಗೂ ಒಳಿತನ್ನೆ ಬಯಸಿದರು. ಜನರು ಯಾವ ರೀತಿಯಲ್ಲಿ ಜೀವಿಸಬೇಕು, ಯಾವುದು ತಪ್ಪು, ಯಾವುದು ಸರಿ, ಸಾಮಾಜಿಕ ಜವಾಬ್ದಾರಿಗಳೇನು, ಧಾರ್ಮಿಕ, ವೈಜ್ಞಾನಿಕವಾಗಿ ಹೇಗೆ ಜೀವಿಸಬೇಕು ಎಂಬುದನ್ನು ಸಮರ್ಥವಾಗಿ ಜಾನಪದ ಸಾಹಿತ್ಯ ತಿಳಿಸುತ್ತದೆ. ಜಾನಪದ ನಮ್ಮ ತಾಯಿಬೇರು. ಅದನ್ನು ಆಳವಾಗಿ ಅಭ್ಯಾಸ ಮಾಡಿದಷ್ಟೂ ನಮ್ಮ ಜ್ಞಾನದ ಮಟ್ಟ ಹೆಚ್ಚುತ್ತದೆ. ಅದೊಂದು ಅನರ್ಘ್ಯ ಭಂಡಾರ ಎಂದರು.

ಕಜಾಪ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ನಮ್ಮ ಗ್ರಾಮೀಣ ಜನರ ಬದುಕೇ ಜಾನಪದದಂತೆ ಮುಂದುವರಿಯುತ್ತಿದೆ. ಆದರೆ ನಶಿಸಿ ಹೋಗುತ್ತಿರುವ ನಮ್ಮ ಮೂಲ ಜಾನಪದ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯದಲ್ಲಿ ಜಾನಪದ ಪರಿಷತ್ ಸದಾ ಕ್ರಿಯಾಶೀಲವಾಗಿರುತ್ತದೆ. ಜಾನಪದ ಉಳಿದರೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾದ್ಯ ಎಂದರು.

ತಾಲೂಕು ಘಟಕದ ಅಧ್ಯಕ್ಷ ಜಗದೀಶ್ವರಾಚಾರ್, ಕನ್ನಡ ಶಕ್ತಿ ಕೇಂದ್ರದ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ, ಎಸ್.ಎಸ್‌. ವೆಂಕಟೇಶ್, ನಿವೃತ್ತ ತಹಸೀಲ್ದಾರ್ ಡಾ.ಲಕ್ಷ್ಮೀನಾರಾಯಣಪ್ಪ, ಎಸ್.ಸಿ ಲೊಕೇಶ್, ವೈ.ಎಸ್.ರವಿಪ್ರಕಾಶ್, ಜಾನಪದ ಕಲಾವಿದರಾದ ಚೌಡಮ್ಮ, ಡಾ.ಮಾಳೇನಹಳ್ಳಿ ಬಸಪ್ಪ, ಯರದಕೆರೆರಾಜಪ್ಪ, ಕೋಡಿಹಳ್ಳಿ ಮಹೇಶ್ವರಪ್ಪ ಇದ್ದರು. --- ಬಾಕ್ಸ್ --- ಉದ್ಘಾಟನೆ

ಸಮ್ಮೇಳನಾಧ್ಯಕ್ಷ ಕುಂಕಾನಾಡು ಓಂಕಾರಪ್ಪನವರನ್ನು ಯಗಟಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಆಲಂಕೃತ ರಥದಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ವೇದಿಕೆ ಬಳಿ ಜಾನಪದ ಬದುಕನ್ನು ಬಿಂಬಿಸುವ ಪರಿಕರಗಳ ಪ್ರದರ್ಶನವನ್ನು ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ರಾಗಿ ಕಲ್ಲು ಬೀಸುವ ಮೂಲಕ ಉದ್ಘಾಟಿಸಿದರು.

--ಬಾಕ್ಸ್ --

ಜಾನಪದ ನಮ್ಮೆಲ್ಲರ ಜೀವನದ ತಾಯಿಬೇರು

ಸಮ್ಮೇಳನಾಧ್ಯಕ್ಷ ಕುಂಕಾನಾಡು ಓಂಕಾರಪ್ಪ ಮಾತನಾಡಿ, ಜಾನಪದವೆಂಬುದು ನಮ್ಮೆಲ್ಲರ ದೈನಂದಿನ ಜೀವನದ ತಾಯಿಬೇರು.ಗ್ರಾಮೀಣ ಬದುಕಿನ ಕೈಗನ್ನಡಿಯಾದ ಜಾನಪದ ಕಲೆಗಳು ಇಂದು ನೇಪಥ್ಯಕ್ಕೆ ಸರಿಯುತ್ತಿದೆ. ಆಧುನಿಕತೆ ಭರಾಟೆಯಲ್ಲಿ ಜಾನಪದ ಸಂಸ್ಕೃತಿ ಅವಗಣನೆಗೆ ಒಳಗಾಗಿದೆ. ಇಂದಿನ ಯುವಪೀಳಿಗೆಯಲ್ಲಿ ಜಾನಪದದ ಬಗ್ಗೆ ಆಸಕ್ತಿ ಮೂಡಿಸಬೇಕಿದೆ. ಜಾನಪದ ಗೀತೆಗಳಲ್ಲಿರುವ ಜೀವನಾನುಭವ ನಮ್ಮ ಯುವಜನತೆಗೆ ದಾರಿದೀಪವಾಗಬೇಕು. ಅರ್ಥವಿಲ್ಲದ ರಚನೆಗಳಿಗೆ ಮೈಮರೆಯುವ ಬದಲು ಮುಂದಿನ ಪೀಳಿಗೆಗೆ ನಮ್ಮಸಾಂಪ್ರದಾಯಿಕ ಕಲೆ, ಗೀತೆಗಳು, ಆಚರಣೆ ಉಳಿಸಿಕೊಡುವ ಮೂಲಕ ಜಾನಪದವನ್ನು ಜೀವಂತವಾಗಿಡಲು ಎಲ್ಲರೂ ಶ್ರಮಿಸೋಣ ಎಂದು ಕರೆ ನೀಡಿದರು.

16ಕೆಕೆಡಿಯು1.

ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿ ನಡೆದ ಕನ್ನಡ ಜಾನಪದ ಸಮ್ಮೇಳನವನ್ನು ಮಾಜಿ ಶಾಸಕ ವೈ. ಎಸ್ ವಿ.ದತ್ತ ಉದ್ಘಾಟಿಸಿದರು.

16ಕೆಕೆಡಿಯು1ಎ.1 ಬಿ..

ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿ ನಡೆದ ಕನ್ನಡ ಜಾನಪದ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಕುಂಕಾನಾಡು ಓಂಕಾರಪ್ಪನವರನ್ನು ಮೆರವಣಿಗೆ ಮೂಲಕ ಕರೆ ತರಲಾಯಿತು.

Share this article