ಹೆಲ್ಮೆಟ್‌ ಧರಿಸದಿದ್ದರೆ ದಂಡ ಗ್ಯಾರಂಟಿ

KannadaprabhaNewsNetwork | Published : Dec 1, 2023 12:45 AM

ಸಾರಾಂಶ

ಅಪಘಾತ ಪ್ರಕರಣಗಳಲ್ಲಿ ಜಿಲ್ಲೆಯಲ್ಲಿ ಪ್ರತಿ ವರ್ಷ 200ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದು, ಇದನ್ನು ತಪ್ಪಿಸಲು ಹೆಲ್ಮೆಟ್‌ ಕಡ್ಡಾಯ ನಿಯಮವನ್ನು ಅನುಷ್ಠಾನಕ್ಕೆ ತರಲು ಪೊಲೀಸ್ ಇಲಾಖೆ ಮುಂದಾಗಿದೆ. ಅದಕ್ಕಾಗಿ ಜಿಲ್ಲಾದ್ಯಂತ ಹೆಲ್ಮೆಟ್‌ ಕಡ್ಡಾಯದ ಅಭಿಯಾನ ಶುರು ಮಾಡಿದ್ದು, ಇನ್ನು ಮುಂದೆ ಹೆಲ್ಮೆಟ್‌ ಧರಿಸದಿದ್ದರೆ ದಂಡ ಬೀಳುವುದು ಗ್ಯಾರಂಟಿ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ಹಾವೇರಿ

ಅಪಘಾತ ಪ್ರಕರಣಗಳಲ್ಲಿ ಜಿಲ್ಲೆಯಲ್ಲಿ ಪ್ರತಿ ವರ್ಷ 200ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದು, ಇದನ್ನು ತಪ್ಪಿಸಲು ಹೆಲ್ಮೆಟ್‌ ಕಡ್ಡಾಯ ನಿಯಮವನ್ನು ಅನುಷ್ಠಾನಕ್ಕೆ ತರಲು ಪೊಲೀಸ್ ಇಲಾಖೆ ಮುಂದಾಗಿದೆ. ಅದಕ್ಕಾಗಿ ಜಿಲ್ಲಾದ್ಯಂತ ಹೆಲ್ಮೆಟ್‌ ಕಡ್ಡಾಯದ ಅಭಿಯಾನ ಶುರು ಮಾಡಿದ್ದು, ಇನ್ನು ಮುಂದೆ ಹೆಲ್ಮೆಟ್‌ ಧರಿಸದಿದ್ದರೆ ದಂಡ ಬೀಳುವುದು ಗ್ಯಾರಂಟಿ.

ದ್ವಿಚಕ್ರ ಸವಾರರಿಗೆ ಹೆಲ್ಮೆಟ್‌ ಕಡ್ಡಾಯದ ಕಾನೂನು ಜಾರಿಯಾಗಿದ್ದರೂ ಜಿಲ್ಲೆಯಲ್ಲಿ ಅನುಷ್ಠಾನವಾಗಿರಲಿಲ್ಲ. ಪೊಲೀಸರು ಕಟ್ಟುನಿಟ್ಟು ಮಾಡಿದಾಗ ಮಾತ್ರ ಸಾರ್ವಜನಿಕರು ಹೆಲ್ಮೆಟ್‌ ಧರಿಸುತ್ತಿದ್ದರೆ ನಂತರ ಮತ್ತೆ ಹೆಲ್ಮೆಟ್‌ ಇಲ್ಲದೇ ಸವಾರಿ ಮಾಡುವುದು ಮಾಮೂಲಿಯಾಗಿದೆ. ಆದರೆ, ರಸ್ತೆ ಅಪಘಾತದಲ್ಲಿ ಸಾವಿನ ಪ್ರಕರಣ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಅದಕ್ಕಾಗಿ ನೂತನ ಪೊಲೀಸ್‌ ವರಿಷ್ಠಾಧಿಕಾರಿ ಅಂಶಕುಮಾರ್‌ ಜಿಲ್ಲಾದ್ಯಂತ ಹೆಲ್ಮೆಟ್‌ ಕಡ್ಡಾಯಗೊಳಿಸಲು ಜಾಗೃತಿ ಅಭಿಯಾನ ಶುರು ಮಾಡಿದ್ದು, ಸ್ವತಃ ಎಸ್ಪಿ ಅವರೇ ರಸ್ತೆಗಿಳಿದಿದ್ದಾರೆ. ಗುರುವಾರ ಜಿಲ್ಲಾ ಕೇಂದ್ರದ ಸುಮಾರು 50 ಕಡೆಗಲ್ಲಿ ಪೊಲೀಸರು ಹೆಲ್ಮೆಟ್ ಧರಿಸದ ಚಕ್ರ ವಾಹನ ಸವಾರರಿಗೆ ದಂಡ ವಿಧಿಸುವ ಕಾರ್ಯ ಮಾಡಿದ್ದಾರೆ.

ಪ್ರತಿ ವರ್ಷ 200ಕ್ಕೂ ಹೆಚ್ಚು ಸಾವು:

ರಸ್ತೆ ಅಪಘಾತ ಪ್ರಕರಣಗಳಲ್ಲಿ ಜಿಲ್ಲೆಯಲ್ಲಿ ಪ್ರತಿ ವರ್ಷ 200ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗಿದೆ. ಇನ್ನು ಗಾಯಾಳುಗಳ ಸಂಖ್ಯೆ ಸಾವಿರಕ್ಕೂ ಹೆಚ್ಚಿದೆ. ರಸ್ತೆ ನಿಯಮಗಳ ಉಲ್ಲಂಘನೆಯಿಂದ ಅಪಘಾತಗಳಲ್ಲಿ ಸಾವು ನೋವಿನ ಸಂಖ್ಯೆ ಹೆಚ್ಚುತ್ತಿದೆ. ಪೊಲೀಸ್ ಇಲಾಖೆ ಮಾಹಿತಿ ಪ್ರಕಾರ 2021ರಲ್ಲಿ ರಸ್ತೆ ಅಪಘಾತದಲ್ಲಿ 230 ಜನರು ಪ್ರಾಣ ಕಳೆದುಕೊಂಡಿದ್ದರೆ, 1236 ಜನ ಗಾಯಾಳುಗಳಾಗಿದ್ದಾರೆ.

2022ರಲ್ಲಿ 284 ಜನ ಮೃತಪಟ್ಟಿದ್ದರೆ, 1385 ಜನರು ಗಾಯಾಳುಗಳಾಗಿದ್ದಾರೆ. 2023ರಲ್ಲಿ ಅಕ್ಟೋಬರ್ ವರೆಗೆ 228 ಜನರು ಸಾವನ್ನಪ್ಪಿದ್ದರೆ, 1134 ಜನ ಗಾಯಾಳುಗಳಾಗಿದ್ದಾರೆ. ಕೇವಲ 3 ವರ್ಷಗಳಲ್ಲಿ 742 ಜನರು ರಸ್ತೆ ಅಪಘಾತದಲ್ಲಿ ಸತ್ತಿದ್ದಾರೆ.

ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾದ ಖಾಕಿ:

ಸಂಚಾರಿ ನಿಯಮ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಖಾಕಿ ಪಡೆ ಮುಂದಾಗಿದೆ. ಯಾವ ಒತ್ತಡಕ್ಕೂ ಮಣಿಯದೇ ಹೆಲ್ಮೆಟ್‌ ಕಡ್ಡಾಯ ಜಾರಿಗೊಳಿಸಲು ನಿರ್ಧರಿಸಿದೆ. ಅದಕ್ಕಾಗಿ ಒಂದು ತಿಂಗಳ ಕಾಲ ಜಾಗೃತಿ ಮೂಡಿಸುವ ಸಲುವಾಗಿ ತಪಾಸಣೆ ನಡೆಸಲು ಉದ್ದೇಶಿಸಲಾಗಿದೆ. ಗುರುವಾರ ಜಿಲ್ಲಾದ್ಯಂತ 60 ಕಡೆಗಳಲ್ಲಿ ಪೊಲೀಸರು ದ್ವಿಚಕ್ರ ವಾಹನ ಸವಾರರನ್ನು ತಪಾಸಣೆ ಮಾಡಿದ್ದಾರೆ. ಗುರುವಾರ ಒಂದೇ ದಿನ 742 ಸವಾರರಿಂದ ಹೆಲ್ಮೆಟ್‌ ಧರಿಸದ್ದಕ್ಕೆ ₹3.71 ಲಕ್ಷ ದಂಡ ಸಂಗ್ರಹಿಸಿದ್ದಾರೆ.

ಯುವಕರಿಂದಲೇ ಉಲ್ಲಂಘನೆ:

ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಯುವ ಜನತೆಯೇ ಸಂಚಾರಿ ನಿಯಮ ಉಲ್ಲಂಘಿಸುತ್ತಿರುವ ಪ್ರಕರಣ ಜಿಲ್ಲೆಯಲ್ಲಿ ಕಂಡುಬರುತ್ತಿದೆ. ಹೆಲ್ಮೆಟ್‌ ಧರಿಸದೇ ವೇಗವಾಗಿ ಬೈಕ್‌ ಓಡಿಸುವುದು ಎಲ್ಲೆಡೆ ಕಂಡುಬರುತ್ತಿದೆ. ಇದಲ್ಲದೇ ಡ್ರೈವಿಂಗ್‌ ಲೈಸನ್ಸ್‌ ಇಲ್ಲದಿರುವುದು, ವಾಹನಕ್ಕೆ ವಿಮೆ ಮಾಡಿಸದಿರುವುದು ಸೇರಿದಂತೆ ಸಂಚಾರಿ ನಿಯಮಗಳನ್ನು ಗಾಳಿಗೆ ತೂರುತ್ತಿರುವುದು ಹೆಚ್ಚಿದೆ. ಇದನ್ನು ತಡೆಯಲು ಪೊಲೀಸ್ ಇಲಾಖೆ ದಂಡ ಪ್ರಯೋಗ ಮಾಡುತ್ತಿದೆ.

ಹೆಲ್ಮೆಟ್‌ ಕಡ್ಡಾಯ ಕಾನೂನು ಇದ್ದರೂ ಜಿಲ್ಲೆಯಲ್ಲಿ ಸಾರ್ವಜನಿಕರು ಪಾಲಿಸುತ್ತಿಲ್ಲ. ಅದಕ್ಕಾಗಿ ಜಾಗೃತಿ ಅಭಿಯಾನ ಶುರು ಮಾಡಲಾಗಿದೆ. ಬೆಳಗ್ಗೆ 9 ಗಂಟೆಯಿಂದ 11ರವರೆಗೆ ಮತ್ತು ಸಂಜೆ 5ರಿಂದ 7 ಗಂಟೆವರೆಗೆ ಪ್ರಮುಖ ರಸ್ತೆ, ವೃತ್ತಗಳಲ್ಲಿ ಪೊಲೀಸರು ದ್ವಿಚಕ್ರ ವಾಹನಗಳ ಸವಾರರನ್ನು ತಪಾಸಣೆ ಮಾಡುವ ಕಾರ್ಯ ಶುರು ಮಾಡಲಾಗಿದೆ. ಪ್ರಾಣಕ್ಕೆ ಕುತ್ತಾಗುವುದನ್ನು ತಪ್ಪಿಸಲು ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಹೆಲ್ಮೆಟ್‌ ಧರಿಸಬೇಕು ಎನ್ನುತ್ತಾರೆ

ಎಸ್ಪಿ ಅಂಶುಕುಮಾರ್‌.

Share this article