ಶಿಗ್ಗಾವಿ: ಜಾತ್ರೆಗಳು ಮನುಷ್ಯರಲ್ಲಿ ದಾನ ಧರ್ಮದ ಜಾಗೃತಿಯನ್ನು ಮೂಡಿಸುತ್ತವೆ. ಮನುಷ್ಯರು ಯಾವತ್ತೂ ಬೇಡುವವರಾಗಬಾರದು, ನೀಡುವವರು ಕೂಡಾ ಆಗಬೇಕು ಎಂದು ಡಾ. ಎ.ಸಿ. ವಾಲಿ ಮಹಾರಾಜರು ಹೇಳಿದರು. ತಾಲೂಕಿನ ಕುನ್ನೂರ ಗ್ರಾಮದಲ್ಲಿ ನಡೆಯುತ್ತಿರುವ ಗ್ರಾಮದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಕುನ್ನೂರ ಗ್ರಾಮದಲ್ಲಿ ಇಂದು ಎಲ್ಲ ಹಿರಿಯರು ಸೇರಿ ದೇವಿ ಜಾತ್ರೆ ಅದ್ಧೂರಿಯಾಗಿ ಮಾಡುತ್ತಿರುವುದು ಸಂತೋಷದ ವಿಚಾರ. ಅದರ ಜೊತೆಗೆ ನಮ್ಮ ಹಡೆದವ್ವಳನ್ನು ಚೆನ್ನಾಗಿ ನೋಡಿಕೊಂಡರೆ ದ್ಯಾಮವ್ವ ಕೂಡಾ ನಮ್ಮ ಮನೆಗೆ ಬರುತ್ತಾಳೆ. ಹಾಗಾಗಿ ಜಾತ್ರೆಯ ಜೊತೆಗೆ ಇಂದು ನಮ್ಮ ತಂದೆ ತಾಯಿಯನ್ನು ಪೂಜಿಸಿ ಗೌರವದಿಂದ ಕಾಣಬೇಕು ಎಂದರು.
ಜಾತ್ರೆಗಳು ಸೌಹಾರ್ದತೆಯ ಸಂಕೇತವಾಗಬೇಕು, ಅನೇಕು ಸಂತ ಶರಣರು ಕೂಡಾ ಅದನ್ನೆ ಪ್ರತಿಪಾದನೆ ಮಾಡಿದರು ಜಾತ್ರೆಗಳು ಹಂಚಿಕೊಂಡು ತಿನ್ನುವುದನ್ನು ಕಲಿಸಬೇಕು, ಯಾವತ್ತೂ ಬೇಡುವ ಕೈಗಳಾಗಬಾರದು. ಶರಣರ ವಾಣಿಯಂತೆ ಸಿರಿ ಬಂದ ಕಾಲಕ್ಕೆ ಕರೆದು ದಾನ ಮಾಡಿದರೆ ನಮಗೆ ಮುಂದೆ ಇನ್ನೂ ಸಿರಿ ಸಂಪತ್ತು ಯತೇಚ್ಛವಾಗಿ ಸಿಗುತ್ತದೆ. ಇಂದು ನಮ್ಮ ನಡುವೆ ಅಕ್ಕ-ತಂಗಿ, ಸಹೋದರಿ ಸಹೋದರರ ಸಂಬಂಧ ಕಡೆದು ಹೋಗುತ್ತಿವೆ. ಇಂತಹ ಜಾತ್ರೆಗಳು ಸಹೋದರ ಬಾಂಧವ್ಯವನ್ನು ಕೂಡಿಸುವಂತಿರಬೇಕು ಹಾಗಾಗಿ ಗ್ರಾಮದೇವಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದರು.ಕಾರ್ಯಕ್ರಮದ ಸಮ್ಮುಖವನ್ನು ಸೋಮಯ್ಯನವರ ಹಿರೇಮಠ ವಹಿಸಿದ್ದರು. ಶ್ಯಾಡಂಬಿಯ ಲ್ಯಾಂಡ್ ಲಾರ್ಡ್ ವರುಣಗೌಡ ಪಾಟೀಲ ಉದ್ಘಾಟಿಸಿದರು. ಸದಾನಂದ ನೆಲ್ಲಿಕೋಪ್ಪ, ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಕಾಂತೆವ್ವ ಮೋರಬದ, ಅಂಬ್ರಮ್ಮಾ ಕಲ್ಲೂರ, ಕಲಾವಿದ ಚಂದ್ರು ಚಿತ್ರಗಾರ, ರಾಮಣ್ಣಾ ಹುಲ್ಲೂರ, ಬಸನಗೌಡ ಪಾಟೀಲ, ವಾಸೂದೇವ ಬಡಿಗೇರ, ಭೀಮಣ್ಣಾ ಬಾರ್ಕಿ, ಮಮ್ಮದಸಾಬ ಮತ್ತೇಖಾನ, ನಾಗಪ್ಪ ಲಂಗೂಟಿ, ವಿಠಲ್ ದುಂಡಪ್ಪನವರ, ಚಂದ್ರಶೇಖರ ಕಲ್ಲೂರ, ಯಮನಪ್ಪ ಗುಂಡಪ್ಪನವರ, ಗಣಪತಿ ಓಲೇಕಾರ, ಅಬ್ದುಗೌಸ್ ಜಮಖಂಡಿ, ಮೈಲಾರೇಪ್ಪ ಇಂದೂರ ಇದ್ದರು. ಹೇಮಾ ಮಾಳೋಜನವರ ಸ್ವಾಗತಿಸಿದರು. ಫಕೀರೇಶ ಕೊಟಗಾರ ನಿರೂಪಿಸಿದರು.