ಕನ್ನಡಪ್ರಭ ವಾರ್ತೆ ಮಂಗಳೂರು
ಅಡಕೆ ಮಾರುಕಟ್ಟೆಗೆ ನಕಲಿ ಅಡಕೆ ದಾಳಿ ಇಟ್ಟಿದ್ದು, ಇದರ ಬಗ್ಗೆ ಜಾಗರೂಕರಾಗಿರುವಂತೆ ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಬೆಳೆಗಾರರಿಗೆ ಎಚ್ಚರಿಕೆ ನೀಡಿದೆ.
ಕೆಲವು ತಿಂಗಳ ಹಿಂದೆ ಪಶ್ಚಿಮ ಬಂಗಾಳದ ಕಸ್ಟಮ್ಸ್ ಕಚೇರಿಯಿಂದ ಅಡಿಕೆಯ ಮಾದರಿಯನ್ನು ಅದರ ವಿಶ್ಲೇಷಣೆಗಾಗಿ ಅಧಿಕಾರಿಗಳು ಮಂಗಳೂರಿನ ಕ್ಯಾಂಪ್ಕೋದ ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನಕ್ಕೆ ಕಳುಹಿಸಿಕೊಟ್ಟಿದ್ದರು. ಕಸ್ಟಮ್ಸ್ ಹೇಳಿಕೆಯ ಪ್ರಕಾರ ಅವರು ೯೦೦ ಕೆಜಿಯಷ್ಟು ಅಂತಹ ಮಾಲನ್ನು ತಡೆಹಿಡಿದ್ದಿದ್ದರು. ತಡೆಹಿಡಿದ ಮಾಲಿನ ಒಟ್ಟು ಮೌಲ್ಯ ೪,೫೦,೦೦೦ ರು.ಎಂದು ತಿಳಿಸಲಾಗಿತ್ತು.ಆ ಮಾಲು ಹೊರಗಿನಿಂದ ನೋಡಲು ಕೆಂಪು ಅಡಕೆ (ಬೆಟ್ಟೆ) ಯನ್ನು ಹೋಲುತ್ತಿತ್ತು. ಆದರೆ ಅವುಗಳನ್ನು ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಡಾ. ಕೇಶವ ಭಟ್ ಅವರು ವಿಶ್ಲೇಷಿಸಿದಾಗ ಅವುಗಳು ಯಾವುದೂ ಅಡಕೆಯೇ ಆಗಿರಲಿಲ್ಲ. ಬದಲಾಗಿ ಯಾವುದೋ ಬೇರೆ ಕಾಯಿಯನ್ನು ತುಂಡರಿಸಿ ಅದಕ್ಕೆ ಅಡಕೆ ಚೊಗರನ್ನು ಲೇಪಿಸಿದಂತೆ ಕಂಡುಬಂದಿತ್ತು. ಒಳಗಡೆಯ ರಚನೆ ಅಡಕೆಯ ರಚನೆಯಂತೆ ಇರದೆ ಬರೀ ಬಿಳಿ ಬಣ್ಣದಿಂದ ಕೂಡಿತ್ತು ಎಂಬುದನ್ನು ಪತ್ತೆ ಮಾಡಿದ್ದರು.