ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ರೈತರೊಬ್ಬರ ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಹಾಗೂ ರಿಯಲ್ ಎಸ್ಟೇಟ್ ಕುಳಗಳ ಮಧ್ಯೆ ಪಟ್ಟಣದ ವೀರಸಾಗರ ರಸ್ತೆಯಲ್ಲಿ ವಾದ ವಿವಾದ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಗಿ ಪೊಲೀಸರ ಸಮಯ ಪ್ರಜ್ಞೆಯಿಂದ ನಡೆಯಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿದೆ.ಸೋಂಪುರ ಹೋಬಳಿ ಚಂದನಹೊಸಹಳ್ಳಿ ಗ್ರಾಮದ ರೈತ ಚಿಕ್ಕ ಕರಿಯಪ್ಪ ಕುಟುಂಬದವರಿಗೆ ಸೇರಿರುವ ಅಗಳಕುಪ್ಪೆ ಗ್ರಾಮದ ಸರ್ವೇ ನಂ. 31/2ರಲ್ಲಿನ 4 ಎಕರೆ 36 ಗುಂಟೆ ಜಮೀನನ್ನು ನಕಲಿ ದಾಖಲೆ ಹಾಗೂ ನಕಲಿ ವ್ಯಕ್ತಿಗಳನ್ನು ಸೃಷ್ಟಿಸಿಕೊಂಡು ಜಮೀನು ಕಬಳಿಸುವ ಆರೋಪದಡಿ ಈಗಾಗಲೇ ದಾಬಸ್‍ಪೇಟೆ ಠಾಣೆಯಲ್ಲಿ ವಕೀಲ ನಾಗೇಂದ್ರ, ಗೊಟ್ಟಿಗೆರೆ ಮೂರ್ತಿ, ಜೆಡಿಎಸ್ ಮುಖಂಡ ಮೋಹನ್ ಕುಮಾರ್, ದಾಸಣ್ಣ, ನಾಗರಾಜು ಒಳಗೊಂಡಂತೆ ಹಲವರ ಮೇಲೆ ಪ್ರಕರಣ ದಾಖಲಾಗಿದೆ, ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಈತನ್ಮಧ್ಯೆ ವಕೀಲ ನಾಗೇಂದ್ರ ಸೇರಿ ಹಲವರು ಜಮೀನಿನ ಅಳತೆಗಾಗಿ ನಕಲಿ ಜಮೀನಿನ ಮಾಲೀಕರನ್ನು ಸ್ಥಳಕ್ಕೆ ಕರೆತಂದಾಗ ಕೆರಳಿದ ಗ್ರಾಮಸ್ಥರು, ಕಾರನ್ನು ತಡೆದು ಘೇರಾವ್ ಹಾಕಿದ ಪ್ರಸಂಗ ನಡೆಯಿತು.
ಓಡಿ ಹೋದ ರಿಯಲ್ ಎಸ್ಟೇಟ್ ವ್ಯಕ್ತಿಗಳು:ಇನ್ನು ಗ್ರಾಮಸ್ಥರು ಸರ್ವೇ ಮಾಡಿಸಲು ಬಂದಿದ್ದ ವ್ಯಕ್ತಿಗಳನ್ನು ಘೇರಾವ್ ಹಾಕಿ ಪ್ರಶ್ನಿಸಲು ಪ್ರಾರಂಭಿಸಿ ವಾದ ವಿವಾದ ನಡೆಯುತ್ತಿದ್ದಂತೆ ಹಳ್ಳ ಕೊಳ್ಳ ಹಿಡಿದು ಓಡಿ ಹೋದ ಪ್ರಸಂಗವೂ ನಡೆಯಿತು.
ಜಮೀನಿನ ಮಾಲೀಕ ಚಿಕ್ಕಕರಿಯಪ್ಪ ಮಾತನಾಡಿ, ನಾವು ಅನಕ್ಷರಸ್ಥರಾಗಿದ್ದು, ನಮ್ಮ ಜಮೀನಿನ ಮೂಲ ದಾಖಲೆಗಳನ್ನು ಸರಿಪಡಿಸುವ ನೆಪದಲ್ಲಿ ಗೊಟ್ಟಿಗೆರೆ ಮೂರ್ತಿ ಎಂಬಾತ ನಕಲಿ ದಾಖಲೆ ಸೃಷ್ಟಿಸಿಕೊಂಡು ಮೊದಲಿಗೆ ಆರೋಗ್ಯ ಭಾರತಿ ವೈದ್ಯನಿಗೆ ಎರಡೂವರೆ ಕೋಟಿಗೆ ಜಮೀನನ್ನು ಅಗ್ರಿಮೆಂಟ್ ಮಾಡಿದ್ದು, ಆದರೆ ಜಮೀನಿನ ಪತ್ರ ಪರಿಶೀಲಿಸಿ ಆತ ಜಮೀನನ್ನು ನಿರಾಕರಿಸಿ ಹಣವನ್ನು ವಾಪಸ್ ಪಡೆದಿದ್ದಾನೆ. ನಂತರ ತುಮಕೂರು ಜಿಲ್ಲೆ ಚೇಳೂರು ಹೋಬಳಿಯ ಸೀಗೇಮಳೆಹಟ್ಟಿಯ ಕೆಲವರನ್ನು ನಮ್ಮ ತಾತ ಉಗ್ರಯ್ಯ ಎಂದು ದಾಖಲೆ ಸೃಷ್ಟಿಸಿ, ಖಾತೆ ಬದಲಾವಣೆ ಮಾಡಿಸಿಕೊಂಡು ಜೆಡಿಎಸ್ ಮುಖಂಡರು ನಮ್ಮ ಜಮೀನನ್ನು ಕಬಳಿಸಲು ಯತ್ನಿಸಿದ್ದು, ಇಂದು ಜಮೀನೇ ಇಲ್ಲದ ಅವರು ಸರ್ವೇ ಮಾಡಿಸಲು ಮುಂದಾಗಿದ್ದಾರೆ. ಘಟನೆ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ, ಮುಂದೆ ನ್ಯಾಯಕ್ಕಾಗಿ ಉಗ್ರ ಹೋರಾಟ ಮಾಡಲಿದ್ದೇವೆ ಎಂದರು.ಅನಾಹುತವಾದರೆ ನಾಗೇಂದ್ರನೇ ನೇರ ಹೊಣೆ: ನನ್ನ ಪತ್ನಿ ಗಂಗಮ್ಮಳು ನಾಗೇಂದ್ರ ಎಂಬುವವರನ್ನು ಪ್ರಶ್ನೆ ಮಾಡಲು ಬಂದಾಗ ಆಕೆಯನ್ನು ನಾಗೇಂದ್ರ ಕಾಲಿನಿಂದ ಒದ್ದಿದ್ದಲ್ಲದೆ ಎದೆಗೆ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಗಂಗಮ್ಮ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಪ್ರಾಣಕ್ಕೆ ಏನಾದರೂ ಅನಾಹುತವಾದರೆ ಅದಕ್ಕೆ ನಾಗೇಂದ್ರ ಅವರೇ ನೇರಹೊಣೆ ಎಂದು ಆಕೆಯ ಪತಿ ಚಿಕ್ಕಕರಿಯಪ್ಪ ಆರೋಪಿಸಿದರು.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಕಾರಣ ದಾಬಸ್‍ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.