ಬ್ಯಾಂಕ್‌ನಿಂದಲೇ ನಕಲಿ ಚಿನ್ನ ಅಡಮಾನ!

KannadaprabhaNewsNetwork |  
Published : Aug 10, 2026, 04:30 AM IST
ಹೈಕೋರ್ಟ್‌  | Kannada Prabha

ಸಾರಾಂಶ

ವ್ಯಕ್ತಿಯೊಬ್ಬರಿಗೆ 1.53 ಕೋಟಿ ರು. ವಂಚಿಸಿದ ಆರೋಪದ ಮೇಲೆ ಖಾಸಗಿ ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯನ್ನು ಅಪರಾಧ ತನಿಖಾ ದಳಕ್ಕೆ ವರ್ಗಾಯಿಸಿ ಆದೇಶಿಸಿದೆ.

ವೆಂಕಟೇಶ್‌ ಕಲಿಪಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ನಕಲಿ ಚಿನ್ನ ಅಡಮಾನ ಇಟ್ಟುಕೊಂಡು ಕೋಟ್ಯಂತರ ಹಣ ಸಾಲ ನೀಡುವುದು, ಸಾಲ ವಾಪಸ್‌ ಆಗಲು ಕಡಿಮೆ ಹಣಕ್ಕೆ ಚಿನ್ನ ಬಯಸುವ ಜನರಿಂದ ಹಣ ಪಡೆದ ನಂತರ ಚಿನ್ನವೂ ಕೊಡದೆ, ಹಣ ನೀಡದೆ ಬರಿಗೈನಲ್ಲಿ ಕಳಿಸುವ ಕೆಲಸ ಮಾಡಿದ ಖಾಸಗಿ ಬ್ಯಾಂಕಿನ ಅಧಿಕಾರಿಗಳ ಕೃತ್ಯಕ್ಕೆ ಆಘಾತಗೊಂಡಿರುವ ಹೈಕೋರ್ಟ್‌, ವ್ಯಕ್ತಿಯೊಬ್ಬರಿಗೆ 1.53 ಕೋಟಿ ರು. ವಂಚಿಸಿದ ಆರೋಪದ ಮೇಲೆ ಖಾಸಗಿ ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯನ್ನು ಅಪರಾಧ ತನಿಖಾ ದಳಕ್ಕೆ ವರ್ಗಾಯಿಸಿ ಆದೇಶಿಸಿದೆ.

ವಂಚನೆ ಆರೋಪದ ಮೇಲೆ ತಮ್ಮ ವಿರುದ್ಧ ಪೀಣ್ಯ ಪೊಲೀಸರು ದಾಖಲಿಸಿರುವ ಎಫ್‌ಆರ್‌ ರದ್ದುಕೋರಿ ಇಂಡಸ್‌ ಇಂಡ್‌ ಬ್ಯಾಂಕ್‌ನ ಪೀಣ್ಯ ಶಾಖೆಯ ಮುಖ್ಯಸ್ಥ ದೆಬೊಪ್ರತಿಮ್‌ ದತ್ತಾ ಹಾಗೂ ವಲಯ ಸಾಲ ವ್ಯವಸ್ಥಾಪಕ ಸಿ.ಎಂ.ರಾಮ್‌ಬಾಬು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.

ನಕಲಿ ಚಿನ್ನ ಅಡಮಾನ ಇಟ್ಟುಕೊಂಡು ಸಾಲ ನೀಡುವ ಬ್ಯಾಂಕ್‌ನ ವ್ಯವಸ್ಥಿತ ಕೃತ್ಯದ ಬಗ್ಗೆ ವಿಶೇಷ ತನಿಖೆ ಸಂಸ್ಥೆ ತನಿಖೆ ಮಾಡಬೇಕಾಗಿದೆ. ಹಾಗಾಗಿ ಸಿಐಡಿ ಪ್ರಕರಣವನ್ನು ಮರು ತನಿಖೆ ನಡೆಸಬೇಕು. ದೂರುದಾರರ ಪ್ರಕರಣವಲ್ಲದೆ ತನಿಖಾ ಸಮಯದಲ್ಲಿ ಕಂಡು ಬರುವ ಇತರ ಅಪರಾಧ ಅಂಶ ಮತ್ತು ವ್ಯಕ್ತಿಗಳ ವಿರುದ್ಧ ತನಿಖೆ ನಡೆಸಬಹುದು ಎಂದು ನ್ಯಾಯಪೀಠ ನಿರ್ದೇಶಿಸಿದೆ.

ವಿಚಾರಣೆಗೆ ಹಾಜರಾಗಲು ಸೂಚಿಸಿ ಅರ್ಜಿದಾರರಿಗೆ ನೀಡಿದ್ದ ನೋಟಿಸ್‌ನೊಂದಿಗೆ ಎಫ್‌ಐಆರ್ ಪ್ರತಿ ಲಗತ್ತಿಸದ ಪೊಲೀಸರು ಕ್ರಮ ಒಂದು ಲೋಪವಾಗಿದೆ. ಅದನ್ನು ಪರಿಗಣಿಸಿ ಎಫ್‌ಐಆರ್‌ ರದ್ದುಪಡಿಸಲು ಅರ್ಜಿದಾರರು ಕೋರಿದ್ದಾರೆ. ಆದರೆ, ಕಾರ್ಯವಿಧಾನದಲ್ಲಿನ ಲೋಪವು ಆರೋಪಗಳ ಮೂಲ ಸ್ವರೂಪವನ್ನು ಮರೆಮಾಚುವುದಿಲ್ಲ. ಇಂತಹ ಪ್ರಕರಣಗಳಲ್ಲಿ ತನಿಖೆ ನಡೆಯಲೇಬೇಕು ಎಂಬುದು ಮುಖ್ಯ ವಿಷಯವಾಗಿದೆ ಎಂದು ಪೀಠ ಹೇಳಿದೆ.

1.53 ಕೋಟಿ ರು. ವಂಚನೆ:

ಜಗದೀಶ್ ಎಂಬುವವರು ಜು.28ರಂದು ಪೀಣ್ಯ ಪೊಲೀಸ್‌ ಠಾಣೆಗೆ ದೂರು ನೀಡಿ, ತನ್ನ ಸ್ನೇಹಿತರ ಮೂಲಕ ಪರಿಚಿತನಾದ ನಾಗೇಶ್ ತನ್ನ ತಂದೆಯ ಚಿಕಿತ್ಸೆಗೆ ವೆಚ್ಚಕ್ಕಾಗಿ ಇಂಡಸ್‌ ಇಂಡ್ ಬ್ಯಾಂಕ್‌ನಲ್ಲಿ 1.5 ಕೋಟಿ ರು.ಮೌಲ್ಯದ ಚಿನ್ನಾಭರಣ ಅಡಮಾನ ಇಟ್ಟಿದ್ದೇನೆ. ಅವುಗಳನ್ನು ಬಿಡಿಸಿಕೊಳ್ಳಲು ಹಣ ನೀಡಿದರೆ, ಜಮೀನು ಮಾರಾಟ ಮಾಡಿ ಹಣ ಹಿಂದಿರುಗಿಸಿ ಒಡವೆ ವಾಪಸ್ ಪಡೆಯುತ್ತೇನೆ, ಹಣ ನೀಡದಿದ್ದರೆ ಆಭರಣ ಇಟ್ಟುಕೊಳ್ಳುವಂತೆ ತಿಳಿಸಿದ್ದರು. ಈ ಮಾತು ನಂಬಿ ನಾಗೇಶ್ ಅವರ ಇಂಡಸ್ ಇಂಡ್ ಬ್ಯಾಂಕ್ ಖಾತೆಗೆ 1.53 ಕೋಟಿ ರು. ಜಮೆ ಮಾಡಿದ್ದೆ. ಆದರೆ ನಂತರ ಬ್ಯಾಂಕ್ ಅಧಿಕಾರಿಗಳು ನಾಗೇಶ್ ಖಾತೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎಂದು ಹೇಳಿ ಮರು ದಿನ ಬರುವಂತೆ ತಿಳಿಸಿದ್ದರು ಎಂದು ತಿಳಿಸಿದರು.

ಅದರಂತೆ ಜು.28ರಂದು ಬ್ಯಾಂಕ್‌ನಿಂದ ಒಡವೆ ಬಿಡಿಸಿಕೊಡುವುದಾಗಿ ತಿಳಿಸಿದ್ದ ನಾಗೇಶ್‌ ನಾಪತ್ತೆಯಾದ. ನಾಗೇಶ್ ಸುಮಾರು 15 ಜನರ ಚಿನ್ನಾಭರಣ ಅಡಮಾನ ಇಟ್ಟಿದ್ದಾರೆ. ಅವರೆಲ್ಲರ ಹಾಜರಾತಿಯಿಲ್ಲದೆ ಚಿನ್ನ ನೀಡಲಾಗದೆಂದು ಬ್ಯಾಂಕ್‌ ಅಧಿಕಾರಿಗಳು ತಿಳಿಸಿದ್ದಾರೆ ಎಂದು ದೂರು ನೀಡಿದ್ದರು. ಇದರಿಂದ ತನಿಖೆಗೆ ಹಾಜರಾಗಲು ಸೂಚಿಸಿ ಪೊಲೀಸರು ಅರ್ಜಿದಾರರಿಗೆ ನೋಟಿಸ್‌ ನೀಡಿದ್ದರು.

ಪೊಲೀಸರ ಪರ ರಾಜ್ಯ ಸರ್ಕಾರದ ಅಭಿಯೋಜಕ ಬಿ.ಎನ್. ಜಗದೀಶ್‌, ಬ್ಯಾಂಕ್‌ ಅಧಿಕಾರಿಗಳ ಕಾರ್ಯವೈಖರಿ ಆಶ್ಚರ್ಯಕರವಾಗಿದೆ. ಬ್ಯಾಂಕ್‌ನ ವಲಯ ಸಾಲ ವ್ಯವಸ್ಥಾಪಕ ಆಗಿರುವ ರಾಮ್‌ಬಾಬು, ಚಿನ್ನದ ಠೇವಣಿಗಳ ಮೇಲಿನ ಸಾಲ ವಿತರಣೆಯ ಉಸ್ತುವಾರಿ ಹೊಂದಿದ್ದಾರೆ. ಅವರು ಹಲವರಿಂದ ನಕಲಿ ಚಿನ್ನ ಅಡಮಾನವಿಟ್ಟು ಕೋಟ್ಯಂತರ ರು. ಸಾಲ ನೀಡಿದ್ದಾರೆ. ಸಾಲಗಳು ವಸೂಲಾಗದ ಸ್ಥಿತಿಗೆ ತಲುಪಿ ಬ್ಯಾಂಕ್‌ನಲ್ಲಿ ವಿಚಾರಣೆ ನಡೆಸಿತ್ತು. ಆಗ ಕಡಿಮೆ ಬೆಲೆಗೆ ಚಿನ್ನ ಪಡೆಯಲು ಬಯಸುವ ಕೆಲ ಅಮಾಯಕ ವ್ಯಕ್ತಿಗಳನ್ನು ಶಾಖಾ ಮುಖ್ಯಸ್ಥರು ಮತ್ತು ವಲಯ ಸಾಲ ವ್ಯವಸ್ಥಾಪಕರು ಸಂಪರ್ಕಿಸಿದ್ದಾರೆ. ಅಂತಹವರಲ್ಲಿ ಜಗದೀಶ್‌ ಒಬ್ಬರಾಗಿದ್ದಾರೆ. ಬ್ಯಾಂಕ್‌ ಅಧಿಕಾರಿಗಳು ಸೇರಿದಂತೆ ಹಲವು ವ್ಯಕ್ತಿಗಳ ವ್ಯವಸ್ಥಿತ ವಂಚನೆ ಇದಾಗಿದ್ದು, ತನಿಖೆ ಮುಂದುವರಿಸಲು ಅನುಮತಿಸಬೇಕೆಂದು ನ್ಯಾಯಪೀಠವನ್ನು ಕೋರಿದರು.

ಬ್ಯಾಂಕ್ ಅಧಿಕಾರಿಗಳ ಪರ ವಕೀಲರು, ದೂರುದಾರರು, ಹಣ ಅಥವಾ ಚಿನ್ನ ಕಳೆದುಕೊಂಡ ವ್ಯಕ್ತಿಗಳಿಂದ ಪೀಣ್ಯ ಪೊಲೀಸರು ಪ್ರಭಾವಿತರಾಗಿದ್ದಾರೆ. ಅವರಿಂದ ನ್ಯಾಯಯುತ ತನಿಖೆ ನಡೆಯುವುದಿಲ್ಲ. ಹಾಗಾಗಿ ತನಿಖೆಯನ್ನು ಸಿಐಡಿಗೆ ವಹಿಸಬಹುದು ಎಂದಿದ್ದರು.

-ಕೋಟ್-

ಬ್ಯಾಂಕಿನ ಗ್ರಾಹಕರ ಹಣ ಬಳಸಿ, ಬ್ಯಾಂಕ್‌ ಮ್ಯಾನೇಜರ್‌ ನಕಲಿ ಚಿನ್ನದ ವಹಿವಾಟು ನಡೆಸಿದ್ದಾರೆ. ಇದು ಸಮಾಜದ ವಿರುದ್ಧದ ಅಪರಾಧವಾಗಿದೆ. ಬ್ಯಾಂಕ್‌ ಅಧಿಕಾರಿಗಳು ತಮ್ಮ ಚರ್ಮ ರಕ್ಷಿಸಿಕೊಳ್ಳಲು ಬೇರೆಯವರ ಚರ್ಮ ಸುಲಿದರೆ ಹೇಗೆ? ತನಿಖೆ ನಡೆಯಲಿ ಕಪಾಟಿನಿಂದ ಅಸ್ಥಿಪಂಜರಗಳು ಹೊರಬರಲಿ.

ಎಂ.ನಾಗಪ್ರಸನ್ನ, ನ್ಯಾಯಮೂರ್ತಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಟೇಲ್‌ನಲ್ಲಿ 1 ವರ್ಷ ಹಳೇ ಮೀನು,ಕೊಳೆತ ಚಿಕನ್, ದನದ ಮಾಂಸ ಪತ್ತೆ
ಕ್ವಿಟ್ ವೋಟ್ ಚೋರಿ ಚಳವಳಿ ಅಗತ್ಯ: ಸಿಎಂ