ಯತ್ನಾಳ ವಿರುದ್ಧ ನಕಲಿ ಮತದಾನ ಆರೋಪ: ಕೇಸ್ ಖುಲಾಸೆ

KannadaprabhaNewsNetwork |  
Published : Jul 13, 2024, 01:38 AM ISTUpdated : Jul 13, 2024, 09:38 AM IST
BasavanaGowda Patel Yatnal

ಸಾರಾಂಶ

ಕಳೆದ ವಿಧಾನಸಭೆ ಚುನಾವಣೆ ವೇಳೆ ನಕಲಿ ಮತದಾನ ಆಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ವಿರುದ್ಧ ಬೆಂಗಳೂರಿನ ಹೈಕೋರ್ಟ್‌ನಲ್ಲಿ ದಾಖಲಿಸಿದ್ದ ಪ್ರಕರಣ, ಕಲಬುರ್ಗಿ ಹೈಕೋರ್ಟ್‌ನಲ್ಲಿ ಖುಲಾಸೆಯಾಗಿದೆ. ಅಲ್ಲದೆ, ಕರ್ನಾಟಕ ಉಚ್ಚ ನ್ಯಾಯಾಲಯ ದೂರುದಾರರಿಗೆ ₹1 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.

 ವಿಜಯಪುರ :  ಕಳೆದ ವಿಧಾನಸಭೆ ಚುನಾವಣೆ ವೇಳೆ ನಕಲಿ ಮತದಾನ ಆಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ವಿರುದ್ಧ ಬೆಂಗಳೂರಿನ ಹೈಕೋರ್ಟ್‌ನಲ್ಲಿ ದಾಖಲಿಸಿದ್ದ ಪ್ರಕರಣ, ಕಲಬುರ್ಗಿ ಹೈಕೋರ್ಟ್‌ನಲ್ಲಿ ಖುಲಾಸೆಯಾಗಿದೆ. ಅಲ್ಲದೆ, ಕರ್ನಾಟಕ ಉಚ್ಚ ನ್ಯಾಯಾಲಯ ದೂರುದಾರರಿಗೆ ₹1 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.

ಕಳೆದ ವಿಧಾನಸಭಾ ಚುನಾವಣೆ ವೇಳೆ ಶಾಸಕ ಯತ್ನಾಳ ನಕಲಿ ಮತದಾನ ಮಾಡಿಸಿದ್ದಾರೆ ಎಂದು 2023 ಜೂನ್ 23ರಂದು ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಖಾಜಾಸಾಬ್ ಮುಶ್ರೀಫ್‌ ದಾಖಲಿಸಿದ್ದ ಪ್ರಕರಣ ಖುಲಾಸೆಯಾಗಿದೆ. ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಹಾಗೂ ಇತರರನ್ನು ಸತತ ವಿಚಾರಣೆ ನಡೆಸಿದ ಬಳಿಕ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ ಎಂದು ಕರ್ನಾಟಕ ಉಚ್ಚ ನ್ಯಾಯಾಲಯವು ಯತ್ನಾಳ ಮೇಲಿನ ಪ್ರಕರಣ ಖುಲಾಸೆಗೊಳಿಸಿದೆ. ಸುಳ್ಳು ಪ್ರಕರಣ ದಾಖಲಿಸಿದ ಕಾರಣಕ್ಕೆ ಅಬ್ದುಲ್ ಹಮೀದ್ ಖಾಜಾಸಾಬ್ ಮುಶ್ರೀಫ್‌ಗೆ ₹1 ಲಕ್ಷ ದಂಡ ಕಟ್ಟುವಂತೆ ನ್ಯಾ.ಕೆ.ಎಸ್.ಹೇಮಲೇಖಾ ಆದೇಶಿಸಿದ್ದಾರೆ.ಈ ಕುರಿತು ತಮ್ಮ ಎಕ್ಸ್‌, ಫೇಸ್ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡ ಶಾಸಕ ಯತ್ನಾಳ, ನನ್ನ ವಿರುದ್ದ ರಾಜಕೀಯ ಪ್ರೇರಿತವಾಗಿ ದುರುದ್ದೇಶದಿಂದ ದಾಖಲಿಸಿದ್ದ ಚುನಾವಣಾ ಅರ್ಜಿಯನ್ನು (Election Petition) ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ವಜಾಗೊಳಿಸಿದೆ. ಹಾಗೂ ಅರ್ಜಿದಾರರಿಗೆ 1ಲಕ್ಷ ರೂಪಾಯಿ ದಂಡ ಹಾಕಿದೆ. ಇದು ಸತ್ಯಕ್ಕೆ ಸಂದ ಜಯ, ಸತ್ಯಮೇವ ಜಯತೆ ಎಂದಿದ್ದಾರೆ.

ಮುಡಾ ಪ್ರಕರಣ, ಹೈ ಜಡ್ಜ್‌ಗೆ ಪತ್ರ:

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಹಗರಣ ಕುರಿತಂತೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬರೆದ ಪತ್ರದ ಕುರಿತು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಹಗರಣವು ಸುಮಾರು ₹4,000 ಕೋಟಿ ಒಳಗೊಂಡಿರುವ ಗಂಭೀರ ಹಗರಣವಾಗಿದ್ದು, ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಚಿವರು ಭಾಗಿಯಾಗಿದ್ದಾರೆ. ಹಗರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಹಿಂಪಡೆಯಲು ಕರ್ನಾಟಕ ಕ್ಯಾಬಿನೆಟ್‌ನ ಸಚಿವರೊಬ್ಬರು ಮೈಸೂರಿಗೆ ಪ್ರಯಾಣಿಸಿದ್ದಾರೆ ಎಂದು ಇತ್ತೀಚಿನ ಮಾಧ್ಯಮ ವರದಿಗಳು ಬಹಿರಂಗಪಡಿಸಿವೆ. ಮುಡಾ ಹಗರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಲು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಪ್ರಾರಂಭಿಸಲು ಕರ್ನಾಟಕದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರವನ್ನು ಸಲ್ಲಿಸಿದ್ದೇನೆ. ಹೆಚ್ಚುವರಿಯಾಗಿ, ಕರ್ನಾಟಕ ಹೈಕೋರ್ಟ್ ತನಿಖೆಯ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ಮೇಲ್ವಿಚಾರಣೆ ಮಾಡಬೇಕೆಂದು ನಾನು ಒತ್ತಾಯಿಸುತ್ತಿದ್ದೇನೆ ಎಂದು ಪತ್ರ ಬರೆದಿದ್ದಾರೆ.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು