ಎಸ್.ಎಂ. ಸೈಯದ್
ಉತ್ತಮ ಫಸಲು ಬಂದಿದ್ದರಿಂದ ಜೋವಿನಜೋಳ ಮಾರಾಟ ಮಾಡಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಕನಸು ಕಾಣುತ್ತಿದ್ದ ರೈತರಿಗೆ ಆಘಾತವಾಗಿದೆ.
ತಾಲೂಕಿನಲ್ಲಿ ಅತಿವೃಷ್ಟಿಯಿಂದಾಗಿ ಹೆಸರು ಬೆಳೆ ಸಂಪೂರ್ಣ ಹಾಳಾಗಿತ್ತು. ಆದರೆ ಗೋವಿನಜೋಳದ ಫಸಲು ರೈತರ ಕೈ ಸೇರಿತ್ತು. ಆಗ ಈಗ ಬೆಲೆ ಕುಸಿತವಾಗಿದೆ.ತಾಲೂಕಿನ ರೈತರು ನೀರಾವರಿ ಮತ್ತು ಖುಷ್ಕಿ ಜಮೀನುಗಳಲ್ಲಿ ಗೋವಿನ ಜೋಳ ಬೆಳೆದಿದ್ದು, ನಿತ್ಯ ಪಟ್ಟಣದ ಎಪಿಎಂಸಿಗೆ ಗೋವಿನ ಜೋಳ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿದೆ. ಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳಿಂದ ಪ್ರತಿ ದಿನ ೧೦ ಸಾವಿರ ಚೀಲದಷ್ಟು ಗೋವಿನ ಜೋಳದ ಆವಕವಿದೆ. ಕಳೆದೊಂದು ತಿಂಗಳ ಹಿಂದೆ ಗೋವಿನ ಜೋಳ ಪ್ರತಿ ಕ್ವಿಂಟಲ್‌ಗೆ ₹೨೪೮೫ ಇದ್ದ ದರ ಮಾರುಕಟ್ಟೆಗೆ ರೈತರ ಫಸಲು ಬರುತ್ತಿದ್ದಂತೆ ದರದಲ್ಲಿ ಕುಸಿತವಾಗುತ್ತಿದೆ. ಸದ್ಯ ಪ್ರತಿ ಕ್ವಿಂಟಲ್‌ಗೆ ₹೧೭೦೦ರಿಂದ ₹೨೦೫೦ರ ವರೆಗೆ ಮಾರಾಟವಾಗುತ್ತಿದೆ. ತೀರಾ ಗುಣಮಟ್ಟವಿಲ್ಲದ ಗೋವಿನಜೋಳ ಪ್ರತಿ ಕ್ವಿಂಟಲ್‌ಗೆ ಕನಿಷ್ಠ ₹೧೩೦೦ಕ್ಕೆ ಮಾರಾಟವಾಗುತ್ತಿದೆ.
ವೈಜ್ಞಾನಿಕ ಬೆಲೆ ಸಿಗಲಿ: ಜಮೀನು ಹದಗೊಳಿಸುವುದು, ಬೀಜ-ಗೊಬ್ಬರ, ಆಳು, ಪಿಳಗುಂಟಿ ಹೊಡೆಯುವುದು, ಕಟಾವು ಮಾಡುವುದು ಸೇರಿದಂತೆ ಎಕರೆಗೆ ಸುಮಾರು ₹೧೫ರಿಂದ ₹೨೦ ಸಾವಿರದಷ್ಟು ಖರ್ಚಾಗುತ್ತದೆ. ಅಲ್ಲದೆ ರಾಶಿ ಮಾಡಿದ ಫಸಲನ್ನು ಬಿಸಿಲಿನಲ್ಲಿ ಒಣಗಿಸಿ ಹದಗೊಳಿಸುತ್ತೇವೆ. ಪ್ರತಿವರ್ಷ ರೈತರು ಗೋವಿನಜೋಳ ಮಾರುಕಟ್ಟೆಗೆ ತಂದಾಗಲೆಲ್ಲ ಬೆಲೆ ಕಡಿಮೆಯಾಗುತ್ತದೆ. ಚುನಾವಣೆ ವೇಳೆ ಭರಪೂರ ಭರವಸೆ ನೀಡುವ ಜನಪ್ರತಿನಿಧಿಗಳು ನಾಡಿಗೆ ಅನ್ನ ನೀಡುವ ರೈತರ ಫಸಲಿಗೆ ವೈಜ್ಞಾನಿಕ ಬೆಲೆ ಕೊಡಿಸುವಲ್ಲಿ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ದುರಂತ ಎಂದು ರೈತರು ಬೇಸರ ವ್ಯಕ್ತಪಡಿಸಿದರು.ಗೋವಿನಜೋಳ ಒಣಗಿಸುತ್ತಿರುವ ರೈತರು: ಗಜೇಂದ್ರಗಡ ತಾಲೂಕಿನಲ್ಲಿ ೨೦ ದಿನಗಳಿಂದ ಮಳೆ ಬಿಡುವು ನೀಡಿದ್ದು, ರೈತರು ಕಟಾವಿಗೆ ಬಂದಿರುವ ಗೋವಿನಜೋಳ ರಾಶಿ ಮಾಡಿ ಹಿಂಗಾರು ಬಿತ್ತನೆಗೆ ಹೊಲ ಹದಗೊಳಿಸುತ್ತಿದ್ದಾರೆ. ಈ ಬಾರಿ ನಿರಂತರ ಮಳೆಯಿಂದಾಗಿ ಎರಿಭೂಮಿಯಲ್ಲಿ ಕಟಾವಿಗೆ ಬಂದಿದ್ದ ಗೋವಿನಜೋಳದ ರಾಶಿ ಮಾಡಲು ಸಾಧ್ಯವಾಗಿರಲಿಲ್ಲ. ಸದ್ಯ ಮಳೆ ಬಿಡುವು ನೀಡಿದ್ದು, ರೈತರು ಬೃಹತ್ ರಾಶಿ ಯಂತ್ರಗಳು ಹಾಗೂ ಸಾಂಪ್ರದಾಯಿಕವಾಗಿ ತೆನೆ ಮುರಿದು ರಾಶಿ ಮಾಡುತ್ತಿದ್ದಾರೆ. ತೇವಾಂಶವಿರುವ ಗೋವಿನ ಜೋಳದ ಕಾಳು ಒಣಗಿಸಲು ರೈತರು ಬಯಲು ಜಾಗ, ನೂತನ ಬಡಾವಣೆಗಳ ಸಿಸಿ ರಸ್ತೆಯಲ್ಲಿ ಒಣ ಹಾಕಿರುವುದು ಸಾಮಾನ್ಯವಾಗಿದೆ.