ಕನ್ನಡಪ್ರಭ ವಾರ್ತೆ ತುಮಕೂರುನಗರದ ದಿಬ್ಬೂರಿನ ದೇವರಾಜ ಅರಸು ಬಡಾವಣೆಯಲ್ಲಿ ರಾಜೀವ್ ಗಾಂಧಿ ಆವಾಜ್ ವಸತಿ ಯೋಜನೆಯಲ್ಲಿ ನಿರ್ಮಿಸಿರುವ ವಸತಿ ಸಂಕೀರ್ಣದಲ್ಲಿ 8 ವರ್ಷಗಳಿಂದ ವಾಸಿಸುತ್ತಿರುವ 470 ಕುಟುಂಬಗಳಿಗೆ ಇದುವರೆಗೂ ಹಕ್ಕುಪತ್ರ ವಿತರಿಸಿಲ್ಲ. ಸರ್ಕಾರದ ಜೊತೆ ಮಾತನಾಡಿ ತಮಗೆ ನ್ಯಾಯ ಒದಗಿಸಬೇಕು ಎಂದು ಅಲ್ಲಿನ ನಿವಾಸಿಗಳು ಮಾಜಿ ಸಚಿವ, ಶಾಸಕ ಕೆ.ಎನ್. ರಾಜಣ್ಣನವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.ಈ ವಸತಿ ಸಂಕೀರ್ಣದಲ್ಲಿರುವ ನಾವುಗಳು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಅವರು ಸ್ಪಂದಿಸಲಿಲ್ಲ, ಸರ್ಕಾರದೊಂದಿಗೆ ಚರ್ಚಿಸಿ ಈ ನಿವಾಸಿಗಳಿಗೆ ಹಕ್ಕುಪತ್ರ ಕೊಡಿಸಬೇಕು ಎಂದು ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅಕಾಡೆಮಿಯ ಅಧ್ಯಕ್ಷ ನಿಸಾರ್ ಅಹ್ಮದ್ ಕೆ.ಎನ್.ರಾಜಣ್ಣನವರಿಗೆ ವಿನಂತಿಸಿದರು.ಇಲ್ಲಿನ ಎಲ್ಲಾ 470 ಕುಟುಂಬದವರು ಅಲ್ವಸಂಖ್ಯಾತರು, ದಲಿತರು, ಹಂದಿಜೋಗರು ಮುಂತಾದ ಸಮುದಾಯಗಳಿಗೆ ಸೇರಿದ್ದಾರೆ. ಇವರೆಲ್ಲಾ ದಿನಗೂಲಿ, ಫುಟ್‌ಪಾತ್ ವ್ಯಾಪಾರ, ಆಟೋ ಓಡಿಸಿಕೊಂಡು ಅಂದಿನ ದುಡಿಮೆಯಿಂದ ಅಂದಿನ ಜೀವನ ನಡೆಸುವ ಪರಿಸ್ಥಿತಿಯಲ್ಲಿದ್ದಾರೆ. ಆದರೆ ಹಕ್ಕುಪತ್ರ ನೀಡಲು ಪ್ರತಿ ಕುಟುಂಬದಿಂದ ಸುಮಾರು ಒಂದು ಲಕ್ಷ ರು. ಪಾವತಿ ಮಾಡಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ.