ಯೋಜನೆಯ ಜಿಲ್ಲಾ ನಿರ್ದೇಶಕ ಪ್ರಕಾಶ ರಾವ್ । ಪದಾಧಿಕಾರಿಗಳ ಸಮಾವೇಶ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕುಷ್ಟಗಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾರಂಭವಾದ ನಂತರ ರಾಜ್ಯಾದ್ಯಂತ ಗ್ರಾಮಗಳು, ಸಂಘದ ಸದಸ್ಯರ ಕುಟುಂಬಗಳು ಅಭಿವೃದ್ಧಿ ಹೊಂದುತ್ತಿವೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರಕಾಶ ರಾವ್ ಹೇಳಿದರು.ಪಟ್ಟಣದ ಎನ್ ಸಿಎಚ್ ಪ್ಯಾಲೇಸಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಅಡಿಯಲ್ಲಿ ನಡೆದ ತಾಲೂಕು ಮಟ್ಟದ ಒಕ್ಕೂಟದ ಪದಾಧಿಕಾರಿಗಳ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಡಾ. ವೀರೇಂದ್ರ ಹೆಗಡೆ ನೇತೃತ್ವದ ಈ ಯೋಜನೆಯು ಕಲ್ಪವೃಕ್ಷದಂತೆ ಸಾವಿರಾರು ಜನರಿಗೆ ಆಸರೆ ನೀಡುವ ಮೂಲಕ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಬದುಕನ್ನು ಕಟ್ಟಿಕೊಟ್ಟಂತ ಈ ಯೋಜನೆಯಾಗಿದ್ದು ಉತ್ತಮ ಸೇವಾ ಕಾರ್ಯ ಮಾಡುತ್ತಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘವು ಸೇವೆ ಜೊತೆಗೆ ಬದುಕನ್ನು ಕಟ್ಟಿಕೊಳ್ಳಲು ಅನೇಕ ಯೋಜನೆಗಳನ್ನು ರೂಪಿಸಿದೆ. ಒಕ್ಕೂಟದ ವತಿಯಿಂದ ಸಂಘಗಳ ಬಲವರ್ಧನೆ ಸರ್ಕಾರಿ ಯೋಜನೆಯ ಸೌಲಭ್ಯಗಳನ್ನು ಒದಗಿಸುವುದು. ಇದರ ಜೊತೆಯಲ್ಲಿ ರೈತರನ್ನು ಕೃಷಿ ಅಭಿವೃದ್ದಿಗಾಗಿ ಉತ್ತೇಜಿಸುವುದರ ಜೊತೆಗೆ ಮಹಿಳೆಯರಿಗೆ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ವೀರೇಶ ಬಂಗಾರಶೆಟ್ಟರ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ದೈವಿಕ ಭಾವನೆಗೆ ಮಾತ್ರವಲ್ಲದೆ ಸಂಸ್ಕಾರ ಕಲಿಸುವ ಶ್ರದ್ಧಾ ಕೇಂದ್ರವಾಗಿ ಬೆಳೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕೇವಲ ವಿದ್ಯೆಗೆ ಮಾತ್ರ ಮೀಸಲಾಗುತ್ತಿದೆ, ಹೊರತು ಸಂಸ್ಕಾರ ನೀಡುತಿಲ್ಲ. ನಮ್ಮ ಪುರಾತನ ಸಂಸ್ಕಾರ, ಸಂಸ್ಕೃತಿ ಮರೆತು ಯುವಜನ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಸರ್ಕಾರ ಕೇವಲ ಯೋಜನೆ ರೂಪಿಸುತ್ತವೆ. ಆದರೆ ಈ ಯೋಜನೆಯು ಮನುಕುಲದ ಉದ್ಧಾರಕ್ಕಾಗಿ ಮದ್ಯವರ್ಜನೆ ಶಿಬಿರ ಮಾಡುವ ಮೂಲಕ ಸಾವಿರಾರು ಕುಟುಂಬಗಳಿಗೆ ದಾರಿದೀಪವಾಗಿದೆ. ಕೆರೆಗಳ ಪುನಶ್ಚೇತನಗೊಳಿಸುವುದರ ಜೊತೆಗೆ ಉಳಿಸುವ ಕೆಲಸ ಮಾಡುತ್ತಿದೆ ಎಂದರು.ಯೋಜನಾಧಿಕಾರಿ ಶೇಖರ ನಾಯಕ್ ಗ್ರಾಮಾಭಿವೃದ್ಧಿ ಯೋಜನೆಯ ಸಾಧನೆಗಳು ಹಾಗೂ ತಾಲೂಕಿನಲ್ಲಿ ಮಾಡಲಾದ ಕಾರ್ಯಗಳ ಬಗ್ಗೆ ಸಮಗ್ರವಾದ ಮಾಹಿತಿ ತಿಳಿಸಿದರು. ಗಂಗಾವತಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮ್ಯಾನೇಜರ್ ವೀರುಪಾಕ್ಷಪ್ಪ ಬ್ಯಾಂಕಿನ ನಿಯಮಗಳು ನಿಬಂಧನೆಗಳು, ಸ್ವ ಸಹಾಯ ಸಂಘಗಳ ಸಾಲದ ವ್ಯವಹಾರದ ಬಗ್ಗೆ ತಿಳಿಸಿದರು.
ಈ ಸಂದರ್ಭ ಮುಖಂಡರಾದ ದೇವೇಂದ್ರಪ್ಪ ಬಳೂಟಗಿ, ಮಹಾಂತಯ್ಯ ಅರಳೇಲಿಮಠ, ಜಯತೀರ್ಥ ದೇಸಾಯಿ, ವಿ.ವಿ. ಹಿರೇಮಠ, ರುದ್ರಪ್ಪ ಅಕ್ಕಿ ಸೇರಿದಂತೆ ತಾಲೂಕಿನ 12 ವಲಯದ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಕಚೇರಿ ಸಿಬ್ಬಂದಿ, ಸಿಎಸ್ಸಿ ಸೆಂಟರ್ ಸಿಬ್ಬಂದಿ, 108 ಒಕ್ಕೂಟದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.