ಲಕ್ಷ್ಮೇಶ್ವರ: ಸಮೀಪದ ಶಿಗ್ಲಿ ಗ್ರಾಮದ ನವಚೇತನ ವಿದ್ಯಾನಿಕೇತನ ಸಂಸ್ಥೆಗೆ ಕೋಟ್ಯಂತರ ರು. ಬೆಲೆಬಾಳುವ ಭೂಮಿ ದಾನ ಮಾಡಿರುವ ದ್ಯಾಮಣ್ಣ ತೋಟದ ಅವರ ಹೆಸರು ಇಡಲು ವಿಳಂಬ ಮಾಡುತ್ತಿರುವುದಕ್ಕೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಭೂದಾನಿಗಳಿಗೆ ಮಾಡಿದ ಅಪಮಾನವಾಗಿದೆ ಎಂದು ಹೇಳಿದ್ದಾರೆ.ಸೋಮವಾರ ನವಚೇತನ ವಿದ್ಯಾನಿಕೇತನ ಸಂಸ್ಥೆಯ ಶಾಲಾರಂಭದ ವೇಳೆಯಲ್ಲಿ ತೋಟದ ಕುಟುಂಬದವರು ಹಾಗೂ ಗ್ರಾಮಸ್ಥರು ಶಾಲೆಗೆ ಆಗಮಿಸಿ, ದ್ಯಾಮಣ್ಣ ತೋಟದ ಅವರು ಯಾವುದೇ ಫಲಾಪೇಕ್ಷೆ ಇಲ್ಲದೆ ಶೈಕ್ಷಣಿಕ ಕಳಕಳಿಯಿಂದ ಶಾಲೆಗೆ ಸುಮಾರು ಎರಡು ಎಕರೆಯಷ್ಟು ಭೂಮಿಯನ್ನು ದಾನವಾಗಿ ನೀಡಿದ್ದಾರೆ. ಈ ವೇಳೆ ದ್ಯಾಮಣ್ಣ ತೋಟದ ಅವರ ಹೆಸರನ್ನು ಶಾಲೆಗೆ ಇಡುವಂತೆ ಕೋರಲಾಗಿತ್ತು. ಈ ಕುರಿತಂತೆ ಆಡಳಿತ ಮಂಡಳಿಗೆ ಮಾಹಿತಿ ಇದೆ. ಆದರೆ ಭೂದಾನಿಗಳ ಹೆಸರು ಇಡದೆ ಬೇರೆಯವರ ಹೆಸರು ಇಟ್ಟಿರುವುದು ಕುಟುಂಬದವರಿಗೆ ನೋವುಂಟು ಮಾಡಿದೆ. ಅದಕ್ಕಾಗಿ ಇಲ್ಲಿ ಶಾಲೆ ನಡೆಸುವುದು ಬೇಡ ಎಂದು ಅವರು ಒತ್ತಾಯಿಸಿದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯಕ್ ಅವರು ಆಡಳಿತ ಮಂಡಳಿ ಮತ್ತು ತೋಟದ ಕುಟುಂಬದವರು ಹಾಗೂ ಗ್ರಾಮದ ಮುಖಂಡರೊಂದಿಗೆ ಸಭೆ ನಡೆಸಿದರು.ಈ ವೇಳೆ ತೋಟದ ಕುಟುಂಬದವರು, ಶಾಲೆಗೆ ಹೆಸರು ಇಡುವಲ್ಲಿ ಆಗಿರುವ ಸಮಸ್ಯೆಯಾದರೂ ಏನು? ಶಾಲೆಗೆ ಎರಡು ಎಕರೆಯಷ್ಟು ದಾನವಾಗಿ ನೀಡಿದ್ದೇವೆ. ಈ ವೇಳೆ ಶಾಲೆಗೆ ದ್ಯಾಮಣ್ಣ ತೋಟದ ಅವರ ಹೆಸರು ಇಡಲು ಕಾಗದ ಸಹ ಮಾಡಲಾಗಿದೆ. ಆದರೆ ಶಾಲೆಗೆ ಬೇರೆಯವರ ನಾಮಕರಣ ಮಾಡಲಾಗಿದೆ. ಇದು ನಮ್ಮ ಕುಟುಂಬವರಿಗೆ ಬೇಸರ ತಂದಿದೆ. ಇದರಿಂದ ದಾನ ನೀಡಿದ ಜಾಗಯಲ್ಲಿ ಶಾಲೆ ನಡೆಸುತ್ತಿರುವುದಾದರೂ ಏತಕ್ಕೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಬಿಇಒ ಎಚ್.ಎನ್. ನಾಯಕ ಮಾತನಾಡಿ, ಭೂದಾನಿಗಳ ಹೆಸರು ಶಾಲೆಗೆ ಇಡುವಂತೆ ಕೇಳಿರುವುದು ನ್ಯಾಯಯುತವಾಗಿದ್ದು, ಇದಕ್ಕೆ ಆಡಳಿತ ಮಂಡಳಿ ಸಹಮತವಿದೆ. ಆದರೆ ತಾಂತ್ರಿಕ ಸಮಸ್ಯೆಯಿಂದ ಹೆಸರು ಇಡುವಲ್ಲಿ ಕೆಲ ಸಮಸ್ಯೆ ಉಂಟಾಗಿದೆ. ಈ ಕುರಿಂತೆ ಮೇಲಧಿಕಾರಿಗೆ ಆಡಳಿತ ಮಂಡಳಿ ಮನವಿ ಪತ್ರ ಹಾಗೂ ಭೂದಾನಿಗಳ ಪತ್ರ ಎರಡನ್ನೂ ನೀಡಲಾಗಿದೆ. ಕೂಡಲೇ ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಕುಟುಂಬದವರು ಕೆಲವು ತಿಂಗಳು ಸಹಕರಿಸುವಂತೆ ಮನವಿ ಮಾಡಿದರು.ಸಂಸ್ಥೆಯ ಅಧ್ಯಕ್ಷ ಎನ್.ಬಿ. ಹರವಿ, ಕಾರ್ಯದರ್ಶಿ ಸುಭಾಸ ಹುಲಗೂರ, ಮುಖ್ಯೋಪಾಧ್ಯಾಯ ಆರ್.ಎಚ್. ಗದಗ, ಸಂಜೀವ ತೋಟದ, ಅಶೋಕ ತೋಟದ, ಡಾ. ರಾಹುಲ್ ತೋಟದ, ಸೂಗೀರಪ್ಪ ಬೆಳವಿಗಿ, ಸುರೇಶ ಭಂಡಾರಿ, ಬಸವರಾಜ ಹಂಜಿ ಹಾಜರಿದ್ದರು.