ಕೌಟುಂಬಿಕ ಕಲಹ, ಸಾಲಬಾಧೆ, ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಶರಣು!

KannadaprabhaNewsNetwork | Published : Mar 5, 2024 1:37 AM

ಸಾರಾಂಶ

ಕೌಟುಂಬಿಕ ಕಲಹ ಮತ್ತು ಸಾಲಬಾಧೆಯಿಂದಾಗಿ ಮನನೊಂದಿದ್ದ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ತಾಲೂಕಿನ ಗೋವನಾಳ ಗ್ರಾಮದಲ್ಲಿ ಸೋಮವಾರ ನಸುಕಿನ ಜಾವದಲ್ಲಿ ಸಂಭವಿಸಿದೆ.

ಲಕ್ಷ್ಮೇಶ್ವರ: ಕೌಟುಂಬಿಕ ಕಲಹ ಮತ್ತು ಸಾಲಬಾಧೆಯಿಂದಾಗಿ ಮನನೊಂದಿದ್ದ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ತಾಲೂಕಿನ ಗೋವನಾಳ ಗ್ರಾಮದಲ್ಲಿ ಸೋಮವಾರ ನಸುಕಿನ ಜಾವದಲ್ಲಿ ಸಂಭವಿಸಿದೆ. ಮೃತರನ್ನು ಮಂಜುನಾಥ ರೇಣುಕಾ ಈರಬಸಪ್ಪ ತೇಲಿ (೫೦), ಸಾವಕ್ಕ ಈರಪ್ಪ ತೇಲಿ (೪೫), ಈರಬಸಪ್ಪ ತೇಲಿ (೨೨) ಎಂದು ಗುರುತಿಸಲಾಗಿದೆ.

ಮಂಜುನಾಥ ಮತ್ತು ತಾಯಿ ರೇಣುಕಾ ಎಂಬುವವರು ಸವಣೂರು ತಾಲೂಕು ಯಲವಗಿ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಸಾವನ್ನಪ್ಪಿದ್ದರೆ, ಸಾವಕ್ಕ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ರೇಣುಕಾ ಮತ್ತು ಸಾವಕ್ಕ ಅವರು ಅಕ್ಕತಂಗಿಯರಾಗಿದ್ದು, ಇಬ್ಬರನ್ನು ಅಣ್ಣ ತಮ್ಮಂದಿರಿಗೆ ಮದುವೆ ಮಾಡಿಕೊಡಲಾಗಿತ್ತು. ಅಣ್ಣ ತಮ್ಮಂದಿರಾದ ಈರಬಸಪ್ಪ ಮತ್ತು ಈರಪ್ಪ ಅವರ ಹೆಸರಿನಲ್ಲಿ ಒಂದೊಂದು ಎಕರೆ ಜಮೀನು ಇದೆ. ಈರಬಸಪ್ಪ ತೀರಿಕೊಂಡಿದ್ದು, ರೇಣುಕಾಳಿಗೆ ನಾಗರಾಜ ಎಂಬ ಪುತ್ರನು ಇದ್ದಾನೆ. ತೇಲಿ ಕುಟುಂಬದವರು ಖಾಸಗಿ ಸಹಕಾರಿ ಸಂಘದಿಂದ ಸಾಲ ಪಡೆದು ಟ್ರ್ಯಾಕ್ಟರ್‌ ಖರೀದಿಸಿದ್ದು, ಈಗ ಸಾಲದ ಕಂತು ಕಟ್ಟುವ ಸಂಬಂಧ ಜಗಳ ಆರಂಭ ವಿಕೋಪಕ್ಕೆ ತಿರುಗಿದ್ದು, ತಾಯಿ-ಮಗ (ರೇಣುಕಾ- ಮಂಜುನಾಥ) ಸೋಮವಾರ ನಸುಕಿನ ವೇಳೆ ರೈಲು ಹಳಿಗೆ ತಲೆಕೊಟ್ಟಿದ್ದಾರೆ. ಬೆಳಗ್ಗೆ ಈ ಸುದ್ದಿ ತಿಳಿದು ಸಾವಕ್ಕ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕುಟುಂಬದಲ್ಲಿ ಆಗಾಗ ಕೌಟುಂಬಿಕ ಜಗಳಗಳು ನಡೆಯುತ್ತಿದ್ದವು. ಅಲ್ಲದೆ ಕುಟುಂಬ ಸಾಕಷ್ಟು ಸಾಲ ಮಾಡಿಕೊಂಡಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದರು. ಅಧಿಕಾರಿಗಳು ಭೇಟಿಘಟನೆ ನಡೆದ ಸ್ಥಳಕ್ಕೆ ತಹಸೀಲ್ದಾರ್‌ ವಾಸುದೇವಸ್ವಾಮಿ, ಪಿಎಸ್‌ಐ ಈರಪ್ಪ ರಿತ್ತಿ, ಕಂದಾಯ ನಿರೀಕ್ಷಕ ಬಿ.ಎಂ. ಕಾತ್ರಾಳ ಭೇಟಿ ನೀಡಿ ಹೆಚ್ಚಿನ ಮಾಹಿತಿ ಸಂಗ್ರಹಿಸಿದರು. ಈ ಕುರಿತು ಲಕ್ಷ್ಮೇಶ್ವರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂವರ ಸಾವಿನಿಂದ ಗ್ರಾಮದಲ್ಲಿ ನೀರವ ಮನೆ ಮಾಡಿದೆ.

Share this article