ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಬಯಕೆಗಳ ಹತ್ತಿಕ್ಕಿ ಕುಟುಂಬ ಯೋಜನೆ ಪಾಲಿಸುವುದು ಇಂದಿನ ತುರ್ತು ಅನಿವಾರ್ಯಗಳಲ್ಲಿ ಒಂದಾಗಿದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಹೇಳಿದರು.ಮಾರುತಿ ನಗರ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಅತ್ತೆ ಸೊಸೆಯರಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಕುಟುಂಬ ಯೋಜನೆ ಒಂದೆರಡು ಕುಟುಂಬದ ಕಥೆಯಾಗದೆ. ಮನೆ ಮನಗಳ ಮಾತಾಗಬೇಕು. ಚಿಕ್ಕ ಕುಟುಂಬದ ಆದರ್ಶ ಪಾಲಿಸಿದಲ್ಲಿ ಸುಖಿ ಜೀವನ ಹೊಂದಬಹುದು ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ ಮೂಗಪ್ಪ ಮಾತನಾಡಿ, ತಾಯಿ ಮತ್ತು ಶಿಶು ಮರಣ ತಪ್ಪಿಸುವಲ್ಲಿ ಒಂದು ಮಗುವಿಂದ ಮತ್ತೊಂದು ಮಗುವಿಗೆ ಕನಿಷ್ಠ ಮೂರು ವರ್ಷ ಅಂತರ ಬೇಕಾಗುತ್ತದೆ. ಜಮೀನಿನಲ್ಲಿ ಭತ್ತವನ್ನು ಅಂತರದಲ್ಲಿ ಹಚ್ಚಿದಾಗ ಮಾತ್ರ ಉತ್ತಮ ಫಸಲು ಬರುತ್ತದೆ. ತೆಂಕಿನ ಮರ ಒಂದರ ಪಕ್ಕದಲ್ಲಿ ಒಂದು ಬೆಳೆಸಿದರೆ ಯಾವ ಮರವು ಫಸಲು ಬಿಡಲಾಗದು. ಮಗುವಿಗೆ ಜನ್ಮ ನೀಡುವಾಗ ತಾಯಿಯು ಮಗುವಿಗೆ ರಕ್ತವನ್ನು ಹಂಚಿಕೊಳ್ಳಬೇಕಾಗುತ್ತದೆ. ಬಾಣಂತಿ ಆರೋಗ್ಯ ಸರಿ ಹೊಂದಬೇಕಾದರೆ ಕಾಲಾವಕಾಶ ಬೇಕು. ಜನ್ಮ ನೀಡಿದ ಮಗುವಿಗೆ ಕನಿಷ್ಠ ಎರಡು ವರ್ಷದತನಕ ತಾಯಿಯ ಎದೆ ಹಾಲು ಬೇಕು ಎಂದರು.
ಒಂದೆರಡು ಮಕ್ಕಳ ಜನನದ ನಂತರ ಸ್ವಯಂ ಪ್ರೇರಿತವಾಗಿ ತಾಯಂದಿರೇ ಕುಟುಂಬ ಕಲ್ಯಾಣ ಶಾಶ್ವತ ವಿಧಾನ ಅನುಸರಿಸಲು ಮುಂದೆ ಬರುತ್ತಾರೆ. ಆದರೆ ಪುರುಷ ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಒಂದು ಸೂಕ್ತ ಸರಳ ವಿಧಾನ. ಇಂತಹ ಸರಳ ವಿಧಾನದ ಕಡೆಗೆ ಸಾಕ್ಷರತೆ ಹೊಂದಿದ ನಾವುಗಳು ಮುಂದೆ ಬಂದು ಸೂಕ್ತ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಕುಟುಂಬದಲ್ಲಿ ದಂಪತಿ ಸುಖಮಯ ದಾಂಪತ್ಯ ಜೀವನ ನಡೆಸಬಹುದು ಎಂದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ ಜಾನಕಿ ಮಾತನಾಡಿ, ಕುಟುಂಬದಲ್ಲಿ ಹೆಣ್ಣು ಗಂಡು ಎಂಬ ಭೇದವಿಲ್ಲದೆ ಅಪಾಯದ ಅಂಚಿನಲ್ಲಿರುವ ತಾಯಂದಿರುಗಳಿಗೆ ಕುಟುಂಬ ಯೋಜನೆ ಅಳವಡಿಸುವುದಕ್ಕಿಂತ ಪುರುಷರು ಮುಂದೆ ಬಂದು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಅಂದೆ ಕೆಲಸ ಕಾರ್ಯಗಳಲ್ಲಿ ತೊಡಗಬಹುದು. ತಾಯಂದಿರಿಗೆ ತಾತ್ಕಾಲಿಕ ವಿಧಾನಗಳಾದ ಡಿಮ್ಪ ಇಂಜೆಕ್ಷನ್, ವಾರಕ್ಕೊಮ್ಮೆ ಛಾಯಾ ಮಾತ್ರೆಗಳು, ವಂಕಿ ಅಳವಡಿಕೆ, ಪುರುಷರಿಗೆ ನಿರೋದ್‍ಗಳು ಉಚಿತವಾಗಿ ಲಭ್ಯವಿದ್ದು, ಇದರ ಸದುಪಯೋಗ ಪಡಿಸಿಕೊಂಡು ಜನಸಂಖ್ಯಾ ಸ್ಥಿರತೆ ಕಾಪಾಡಿ ಸುಖೀ ಕುಟುಂಬದತ್ತ ದಾಪುಗಾಲು ಹಾಕಬಹುದು ಎಂದರು.
ಆರೋಗ್ಯ ನಿರೀಕ್ಷಣಾಧಿಕಾರಿ ಗಂಗಾಧರ ರೆಡ್ಡಿ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ತಿಪ್ಪಮ್ಮ. ಹೆಚ್‍ಐಓ ಸುಪ್ರೀತಾ. ಪಿಎಚ್‍ಸಿಓ ರೂಪ, ಲಕ್ಷ್ಮಮ್ಮ, ಎನ್‍ಸಿ ರೂಪ, ಭಾಗ್ಯಲಕ್ಷ್ಮಿ ಸೇರಿದಂತೆ 25ಕ್ಕೂ ಹೆಚ್ಚು ಅತ್ತೆ ಸೊಸೆಯರು ಮತ್ತು ಪುರುಷರು ಹಾಜರಿದ್ದರು.