ಕುಟುಂಬ ರಾಜಕಾರಣದಿಂದ ಪ್ರಜಾಪ್ರಭುತ್ವಕ್ಕೆ ಮಾರಕ: ಲೋಕಸಭಾ ಚುನಾವಣೆ ಬಿಎಸ್ಪಿ ಅಭ್ಯರ್ಥಿ ಗಂಗಾಧರ್ ಬಹುಜನ್

KannadaprabhaNewsNetwork |  
Published : Mar 26, 2024, 01:15 AM IST
25ಎಚ್ಎಸ್ಎನ್5 : ಹಾಸನ ಲೋಕಸಭಾ ಕ್ಷೇತ್ರದ ಬಿಎಸ್ಪಿ ಗಂಗಾಧರ್ ಬಹುಜನ್  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಸಾಮಾನ್ಯ ಪ್ರಜೆಗಳು ಆಳುವ ವರ್ಗಗಳ ಗುಲಾಮರಾಗಿ ಅವರ ಬೆಂಬಲಿಗರಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುವ ಹೀನಾಯ ಸ್ಥಿತಿಗೆ ತಲುಪಿದ್ದೇವೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಲೋಕಸಭಾ ಚುನಾವಣೆಯ ಬಿಎಸ್ಪಿ ಅಭ್ಯರ್ಥಿ ಗಂಗಾಧರ್ ಬಹುಜನ್ ಬೇಸರ ವ್ಯಕ್ತಪಡಿಸಿದರು. ಬೇಲೂರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಸುದ್ದಿಗೋಷ್ಠಿ

ಕನ್ನಡಪ್ರಭ ವಾರ್ತೆ ಬೇಲೂರು

ಸ್ವಾತಂತ್ರ್ಯ ಬಂದಾಗಿನಿಂದಲೂ ರಾಜ್ಯಾಧಿಕಾರವನ್ನು ಕೆಲವೊಂದು ಕುಟುಂಬ ಮತ್ತು ವರ್ಗಗಳು ಅನುಭವಿಸಿಕೊಂಡು ಬರುತ್ತಿದ್ದು ವಂಶಪಾರಂಪರ್ಯವಾಗಿ ತಲೆಮಾರುಗಳಿಂದ ತಲೆಮಾರುಗಳಿಗೆ ವರ್ಗಾವಣೆಯಾಗಿ ಸಾಮಾನ್ಯ ಪ್ರಜೆಗಳು ಆಳುವ ವರ್ಗಗಳ ಗುಲಾಮರಾಗಿ ಅವರ ಬೆಂಬಲಿಗರಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುವ ಹೀನಾಯ ಸ್ಥಿತಿಗೆ ತಲುಪಿದ್ದೇವೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ ಎಂದು ಲೋಕಸಭಾ ಚುನಾವಣೆಯ ಬಿಎಸ್ಪಿ ಅಭ್ಯರ್ಥಿ ಗಂಗಾಧರ್ ಬಹುಜನ್ ಬೇಸರ ವ್ಯಕ್ತಪಡಿಸಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಇಂದು ರಾಜಕಾರಣ ಒಂದು ಉದ್ಯಮವಾಗುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಚುನಾವಣೆಯಲ್ಲಿ ನೂರಾರು ಕೋಟಿ ಹಣವನ್ನು ಖರ್ಚು ಮಾಡುತ್ತಾರೆ. ಬಹಿರಂಗವಾಗಿಯೇ ಉಡುಗೊರೆ ಹಂಚುವುದು, ಒಂದು ಮತಕ್ಕೆ ಇಷ್ಟು ಸಾವಿರ ರುಪಾಯಿ ಎಂದು ರಾಜಾರೋಷವಾಗಿ ಹಂಚುತ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೂ ಚುನಾವಣಾ ಆಯೋಗ ಮತ್ತು ಚುನಾವಣಾ ಅಧಿಕಾರಿಗಳು ಜಾಣ ಕುರುಡರಂತೆ ನೋಡಿಯೂ ನೋಡದವರಂತೆ ಮೌನ ವಹಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಭ್ರಷ್ಟರು ಗೆದ್ದು ಬಂದು ತಮಗೆ ಬೇಕಾದ ರೀತಿಯಲ್ಲಿ ಸಂವಿಧಾನವನ್ನು ತಿದ್ದುಪಡಿ ಮಾಡಿಕೊಂಡು, ಕಾನೂನು ಮಾಡಿಕೊಂಡು ದೇಶದ ಖಜಾನೆಯನ್ನು ಲೂಟಿ ಹೊಡೆಯುತ್ತಿದ್ದಾರೆ’ ಎಂದು ಕಿಡಿಕಾರಿದರು.

ನೋಟ್ ಬ್ಯಾನ್ ಶ್ರೀಮಂತರ ಕಪ್ಪುಹಣ ಬಿಳಿಯಾಗಿಸಲು ಆಡಿದ ನಾಟಕವಾಗಿದೆ. ಚುನಾವಣೆ ಬಾಂಡ್ ಈ ಶತಮಾನದ ಬಹುದೊಡ್ಡ ಹಗರಣವಾಗಿದೆ. ಪ್ರಜಾಪ್ರಭುತ್ವ ತತ್ವಗಳನ್ನು ಗಾಳಿಗೆ ತೂರಿ ನಿರಂಕುಶಪ್ರಭುತ್ವ ಹಾಗೂ ರಾಜಪ್ರಭುತ್ವದ ಮಾದರಿಯಲ್ಲಿ ವಂಶಪಾರಂಪರ್ಯವಾಗಿ ಆಡಳಿತ ನಡೆಸಿಕೊಂಡು ಬಂದಿರುವುದೇ ಇದಕ್ಕೆ ಕಾರಣ. ಹಾಗೆಯೇ ಒಂದೆರಡು ಕುಟುಂಬಗಳು ಅರ್ಧ ಶತಮಾನಗಳ ಕಾಲ ಆಡಳಿತ ನಡೆಸುವುದು ಪ್ರಜಾಪ್ರಭುತ್ವದ ಮಾದರಿಯಲ್ಲ, ಇದು ರಾಜಪ್ರಭುತ್ವದ ಮಾದರಿಯಾಗಿದೆ. ಈ ನಿರಂಕುಶ ರಾಜಪ್ರಭುತ್ವ ಕೊನೆಯಾಗುವ ವಾತಾವರಣ ಸೃಷ್ಟಿಯಾಗಬೇಕು. ಒಮ್ಮೆ ಬಹುಜನ ಸಮಾಜ ಪಾರ್ಟಿಗೆ ಒಂದು ಅವಕಾಶ ನೀಡಿದರೆ ಖಂಡಿತವಾಗಿಯೂ ಮೇಲ್ಕಂಡ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಬಿಎಸ್‌ಪಿ ಜಿಲ್ಲಾ ಅಧ್ಯಕ್ಷ ಹರೀಶ್ ಅತ್ನಿ ಮಾತನಾಡಿ, ಬುದ್ಧ, ಬಸವ, ನಾಲ್ವಡಿ, ಪೆರಿಯಾರ್, ನಾರಾಯಣ ಗುರು, ಬಾಬಾ ಸಾಹೇಬ್ ಅಂಬೇಡ್ಕರ್, ದಾದಾಸಾಹೇಬ್ ಕಾನ್ಶಿರಾಂ ರವರ ಹೋರಾಟಗಳನ್ನು ಅಕ್ಕ ಮಾಯಾವತಿಯವರ ಮಾರ್ಗದರ್ಶನದಲ್ಲಿ ಮುಂದುವರಿಸುತ್ತ. ಈ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಮಹಾಕನಸು ಹೊತ್ತಿರುವ ಸರ್ವಜನ ನಾಯಕ ಬಿಎಸ್ಪಿ ಅಭ್ಯರ್ಥಿಯಾದ ಗಂಗಾಧರ್ ಬಹುಜನ್ ರನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಆನೆ ಗುರುತಿಗೆ ಅತಿ ಹೆಚ್ಚು ಮತಗಳನ್ನು ನೀಡಿ, ಗೆಲ್ಲಿಸಬೇಕು ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಪ್ರಕಾಶ್ ಕೆಸಗೋಡು, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಮ್ಮ, ಜಿಲ್ಲಾ ಉಸ್ತುವಾರಿಗಳಾದ ಲಕ್ಷ್ಮಣ್ ಕೀರ್ತಿ, ಎಚ್.ಬಿ.ಮಲ್ಲಯ್ಯ, ಉಪಾಧ್ಯಕ್ಷ ಲೋಹಿತ್ ಕಡೆಗರ್ಜೆ, ಜಿಲ್ಲಾ ಕಾರ್ಯದರ್ಶಿ ರಾಜು ಬೆಳ್ಳೊಟ್ಟೆ ಮೊದಲಾದವರು ಇದ್ದರು.ಹಾಸನ ಲೋಕಸಭಾ ಕ್ಷೇತ್ರದ ಬಿಎಸ್ಪಿ ಗಂಗಾಧರ್ ಬಹುಜನ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ