ರಸ್ತೆಗಳಿದು ಆರ್‌ಸಿಬಿ ಗೆಲುವು ಸಂಭ್ರಮಿಸಿದ ಅಭಿಮಾನಿಗಳು

KannadaprabhaNewsNetwork |  
Published : Jun 02, 2026, 01:45 AM IST
1ಎಚ್ಎಸ್ಎನ್15 : ನಗರದ ಆರ್‌ ಸಿ ರಸ್ತೆಯಲ್ಲಿ ಬೆಂಕಿ ಹಚ್ಚಿ ಯಯುವಕರ ವಿಜಯೋತ್ಸವದ ಹುಚ್ಚಾಟ. | Kannada Prabha

ಸಾರಾಂಶ

ಆರ್‌ಸಿಬಿ ಆಟಗಾರರ ಪ್ರದರ್ಶನಕ್ಕೆ ಅಭಿಮಾನಿಗಳು ಭಾರೀ ಬೆಂಬಲ ವ್ಯಕ್ತಪಡಿಸಿದರು. ತಂಡ ಗೆಲುವಿನತ್ತ ಸಾಗುತ್ತಿದ್ದಂತೆ ಹಾಸನ ನಗರದಲ್ಲಿಯೂ ಸಂಭ್ರಮಾಚರಣೆ ಆರಂಭವಾಯಿತು. ನಗರದ ಸಮೀಪದ ಆರ್ಯ ಮ್ಯಾನ್ಷನ್ ಹೌಸ್ ಬಳಿ ಬೃಹತ್ ಪ್ರೊಜೆಕ್ಟರ್‌ ಅಳವಡಿಸಿ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಪಂದ್ಯ ಮುಕ್ತಾಯವಾಗುತ್ತಿದ್ದಂತೆ ಅಭಿಮಾನಿಗಳು ಘೋಷಣೆಗಳನ್ನು ಕೂಗಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಹಲವರು ಆರ್‌ಸಿಬಿ ಧ್ವಜಗಳನ್ನು ಹಿಡಿದು ಕುಣಿದು ಕುಪ್ಪಳಿಸಿದರೆ, ಯುವಕರು ಬೆಂಗಳೂರು ಟೀಂ ಸಮವಸ್ತ್ರ ಧರಿಸಿ ಬೈಕ್ ರ್‍ಯಾಲಿ ನಡೆಸಿ ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಭರ್ಜರಿ ಗೆಲುವು ಸಾಧಿಸಿ ಸತತ ಎರಡನೇ ಬಾರಿ ಐಪಿಎಲ್ ಕಪ್ ಮುಡಿಗೇರಿಸಿಕೊಳ್ಳುತ್ತಿದ್ದಂತೆ ಹಾಸನ ನಗರದಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗಿತ್ತು. ನಗರದ ಪ್ರಮುಖ ರಸ್ತೆಗಳು ಕೆಂಪು - ಹಳದಿ ಬಣ್ಣದ ಧ್ವಜಗಳಿಂದ ಕಂಗೊಳಿಸಿದರೆ, ಸಾವಿರಾರು ಅಭಿಮಾನಿಗಳು ರಸ್ತೆಗೆ ಇಳಿದು ವಿಜಯೋತ್ಸವ ಆಚರಿಸಿದರು.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ ೨೦ ಓವರ್‌ಗಳಲ್ಲಿ ೧೫೫ ರನ್ ಗಳಿಸಿ ಆರ್‌ಸಿಬಿಗೆ ೧೫೬ ರನ್‌ಗಳ ಗುರಿ ನೀಡಿತ್ತು. ಪಂದ್ಯದುದ್ದಕ್ಕೂ ವಿರಾಟ್ ಕೊಹ್ಲಿ ಸೇರಿದಂತೆ ಆರ್‌ಸಿಬಿ ಆಟಗಾರರ ಪ್ರದರ್ಶನಕ್ಕೆ ಅಭಿಮಾನಿಗಳು ಭಾರೀ ಬೆಂಬಲ ವ್ಯಕ್ತಪಡಿಸಿದರು. ತಂಡ ಗೆಲುವಿನತ್ತ ಸಾಗುತ್ತಿದ್ದಂತೆ ಹಾಸನ ನಗರದಲ್ಲಿಯೂ ಸಂಭ್ರಮಾಚರಣೆ ಆರಂಭವಾಯಿತು. ನಗರದ ಸಮೀಪದ ಆರ್ಯ ಮ್ಯಾನ್ಷನ್ ಹೌಸ್ ಬಳಿ ಬೃಹತ್ ಪ್ರೊಜೆಕ್ಟರ್‌ ಅಳವಡಿಸಿ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಪಂದ್ಯ ಮುಕ್ತಾಯವಾಗುತ್ತಿದ್ದಂತೆ ಅಭಿಮಾನಿಗಳು ಘೋಷಣೆಗಳನ್ನು ಕೂಗಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಹಲವರು ಆರ್‌ಸಿಬಿ ಧ್ವಜಗಳನ್ನು ಹಿಡಿದು ಕುಣಿದು ಕುಪ್ಪಳಿಸಿದರೆ, ಯುವಕರು ಬೆಂಗಳೂರು ಟೀಂ ಸಮವಸ್ತ್ರ ಧರಿಸಿ ಬೈಕ್ ರ್‍ಯಾಲಿ ನಡೆಸಿ ಸಂಭ್ರಮಿಸಿದರು.ನಗರದ ಎಂ.ಜಿ. ರಸ್ತೆ, ಬಿ.ಎಂ. ರಸ್ತೆ ಸೇರಿದಂತೆ ಪ್ರಮುಖ ಭಾಗಗಳಲ್ಲಿ ನೂರಾರು ಅಭಿಮಾನಿಗಳು ಜಮಾಯಿಸಿದ್ದರಿಂದ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ರಸ್ತೆಯ ಮಧ್ಯಭಾಗದಲ್ಲೇ ನಿಂತು ಯುವಕರು ನೃತ್ಯ ಮಾಡಿದ್ದು, ಕೆಲಕಾಲ ಭಾರೀ ಟ್ರಾಫಿಕ್ ಜಾಮ್ ಉಂಟಾಯಿತು. ವಾಹನ ಸವಾರರು ಗಂಟೆಗಟ್ಟಲೆ ಪರದಾಡುವಂತಾಯಿತು. ಸಂಭ್ರಮಾಚರಣೆ ನಿಯಂತ್ರಣ ತಪ್ಪುವ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಅಭಿಮಾನಿಗಳನ್ನು ರಸ್ತೆ ಬದಿಗೆ ತೆರಳುವಂತೆ ಮನವಿ ಮಾಡಿದರು. ಆದರೂ ಕೆಲವರು ಪೊಲೀಸರ ಸೂಚನೆಗಳನ್ನು ಲೆಕ್ಕಿಸದೆ ರಸ್ತೆಯಲ್ಲೇ ಸಂಭ್ರಮ ಮುಂದುವರಿಸಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಕೆಲವೆಡೆ ಲಘು ಲಾಠಿ ಪ್ರಹಾರ ನಡೆಸಿದ ಬಳಿಕ ಯುವಕರು ಚದುರಿದರು.

ಇನ್ನೂ ಕೆಲವು ಭಾಗಗಳಲ್ಲಿ ಬೈಕ್‌ಗಳಲ್ಲಿ ಮೂವರು, ನಾಲ್ವರು ಯುವಕರು ಹೆಲ್ಮೆಟ್ ಧರಿಸದೇ ಅಪಾಯಕಾರಿ ರೀತಿಯಲ್ಲಿ ಸಂಚರಿಸುತ್ತಿರುವ ದೃಶ್ಯಗಳು ಕಂಡುಬಂದವು. ಕೆಲವರು ಬೈಕ್ ಹಾಗೂ ಬುಲೆಟ್ ವಾಹನಗಳಲ್ಲಿ ಅತಿಯಾದ ಶಬ್ದ ಮಾಡುತ್ತಾ ಓಡಾಡಿದರೆ, ಪಟಾಕಿ ಸಿಡಿಸುವ ಮೂಲಕ ಸಂಭ್ರಮ ವ್ಯಕ್ತಪಡಿಸಿದರು. ಕಾರುಗಳ ಸೈಲೆನ್ಸರ್‌ಗಳಿಂದ ಬೆಂಕಿ ಉಗುಳುವ ರೀತಿಯ ಸ್ಟಂಟ್‌ಗಳನ್ನೂ ಕೆಲ ಯುವಕರು ಪ್ರದರ್ಶಿಸಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತು. ನಗರದ ವಿವಿಧೆಡೆ ಪಟಾಕಿಗಳ ಸದ್ದು ತಡರಾತ್ರಿವರೆಗೂ ಕೇಳಿಬರುತ್ತಲೇ ಇತ್ತು. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಸನ ಪೊಲೀಸರು ಮಧ್ಯರಾತ್ರಿವರೆಗೂ ಎಂ.ಜಿ. ರಸ್ತೆ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಬೀಡುಬಿಟ್ಟು ಬಂದೋಬಸ್ತ್ ಕೈಗೊಂಡಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ನಿರಂತರ ನಿಗಾ ವಹಿಸಿದ್ದು, ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದ ಬಳಿಕವೇ ಸಿಬ್ಬಂದಿ ಸ್ಥಳದಿಂದ ತೆರಳಿದರು.

ಆರ್‌ಸಿಬಿಯ ಐತಿಹಾಸಿಕ ಗೆಲುವಿನಿಂದ ಹಾಸನ ಜಿಲ್ಲೆಯ ಅಭಿಮಾನಿಗಳು ಹಬ್ಬದ ವಾತಾವರಣದಲ್ಲಿ ಸಂಭ್ರಮಿಸಿದ್ದು, ನಗರದಾದ್ಯಂತ ಕೆಂಪು- ಹಳದಿ ಬಣ್ಣದ ವಿಜಯೋತ್ಸವ ಗಮನ ಸೆಳೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೃಷಿ ವೆಚ್ಚ ಕಡಿಮೆ ಮಾಡಿಕೊಳ್ಳುವ ಕುರಿತ ಜಾಗೃತಿ ಮೂಡಿಸಿ
ರಜೆ ಬಳಿಕ ಶಾಲೆಗೆ ಮರಳಿದ ಮಕ್ಕಳಿಗೆ ಗುಲಾಬಿ ಹೂ ಜೊತೆ ಸಿಹಿ ಸ್ವಾಗತ