ಆಯುಷ್ ವೈದ್ಯಾಧಿಕಾರಿ ಡಾ.ಉಮೇಶ್ ಕಾಖಂಡಕಿಗೆ ಬೀಳ್ಕೊಡುಗೆ

KannadaprabhaNewsNetwork | Published : Aug 7, 2024 1:08 AM

ಸಾರಾಂಶ

ಅನೇಕ ಕ್ಯಾನ್ಸರ್ ರೋಗಿಗಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಗುಣಮುಖರಾಗುವಂತೆ ನೋಡಿಕೊಂಡಿದ್ದಾರೆ.

ಬಳ್ಳಾರಿ: ವಯೋನಿವೃತ್ತಿ ಪಡೆದ ತಾಲೂಕಿನ ಸಿಂಧುವಾಳದ ಗ್ರಾಮದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ.ಉಮೇಶ್ ಕಾಖಂಡಕಿ ಅವರಿಗೆ ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಯಿತು.ಇದೇ ವೇಳೆ ಮಾತನಾಡಿದ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವೈದ್ಯಾಧಿಕಾರಿಗಳು ಹಾಗೂ ವೈದ್ಯ ಸಿಬ್ಬಂದಿ ಡಾ.ಉಮೇಶ್ ಕಾಖಂಡಕಿ ಅವರ ಪ್ರಮಾಣಿಕ ಸೇವೆ ಹಾಗೂ ವೈದ್ಯಕೀಯ ಸೇವಾ ಅವಧಿಯಲ್ಲಿ ಕೈಗೊಂಡ ಅನೇಕ ಹೋರಾಟಗಳು ಮತ್ತು ಕರ್ನಾಟಕ ಆಯುರ್ವೇದ ಮತ್ತು ಯುನಾನಿ ವೈದ್ಯ ಮಂಡಳಿಯ ನಾಮ ನಿರ್ದೇಶನ ಸದಸ್ಯರಾಗಿ ವೈದ್ಯ ಸಿಬ್ಬಂದಿ ಪರ ಕೈಗೊಂಡ ಕ್ರಮಗಳ ಕುರಿತು ಸ್ಮರಿಸಿದರು.

ತಾಲೂಕಿನ ಸಿಂಧುವಾಳ ಗ್ರಾಮದಲ್ಲಿ 28 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಗ್ರಾಮದ ಜನರ ಪ್ರೀತಿಗೆ ಪಾತ್ರರಾಗಿದ್ದ ಡಾ.ಉಮೇಶ್ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಆಯುಷ್ ಇಲಾಖೆಯಿಂದ ನಡೆದ ಆಯುಷ್ ಹಾಗೂ ಯೋಗ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. ಅನೇಕ ಕ್ಯಾನ್ಸರ್ ರೋಗಿಗಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಗುಣಮುಖರಾಗುವಂತೆ ನೋಡಿಕೊಂಡಿದ್ದಾರೆ. ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯರ ಸೇವೆಯನ್ನು ಕಾಯಂಗೊಳಿಸುವ ಹೋರಾಟದ ಮುಂಚೂಣಿ ವಹಿಸಿ ಯಶಸ್ವಿಯಾಗಿದ್ದಾರೆ ಎಂದು ಸ್ಮರಿಸಿದರು.

ಬಳ್ಳಾರಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಸರಳಾದೇವಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚಿತ್ರದುರ್ಗದ ಆಯುಷ್ ಅಧಿಕಾರಿ ಚಂದ್ರಕಾಂತ್ ನಾಗಸಮುದ್ರ, ಶಿವಮೊಗ್ಗದ ಆಯುಷ್ ಅಧಿಕಾರಿ ಡಾ.ಲಿಂಗರಾಜ್, ವೈದ್ಯಾಧಿಕಾರಿ ಡಾ.ನದಾಫ್, ವಿಜಯಪುರ ಆಯುಷ್ ಅಧಿಕಾರಿ ಡಾ.ಆರ್‌.ಎಸ್.ಪಾಟೀಲ್, ವೈದ್ಯಾಧಿಕಾರಿ ಡಾ.ದೇಸಾಯಿ, ಚಿಕ್ಕಮಂಗಳೂರಿನ ವೈದ್ಯಾಧಿಕಾರಿಗಳಾದ ಡಾ.ವಿವೇಕಾನಂದ ಬಿರಾದಾರ್, ಲಕ್ಷ್ಮಣ ಮಾನೆ, ಬಳ್ಳಾರಿಯ ಆಯುಷ್ ಇಲಾಖೆಯ ಸಹಾಯಕ ಆಡಳಿತಾಧಿಕಾರಿ ಡಾ.ಶರಣಪ್ಪ ಜಿನಗಾ, ಹಿರಿಯ ವೈದ್ಯರಾದ ಡಾ.ಜಿತೇಂದ್ರ, ವಿಜಯೇಂದ್ರ ಆಚಾರ್ ಪಾಲ್ಗೊಂಡಿದ್ದರು.

ಡಾ.ಮುನಿವಾಸುದೇವ ರೆಡ್ಡಿ ಪ್ರಾಸ್ತಾವಿಕ ಮಾತನಾಡಿದರು. ಡಾ.ಶಶಿಧರ್ ಕಾರ್ಯಕ್ರಮ ನಿರ್ವಹಿಸಿದರು. ಸಮಾರಂಭದಲ್ಲಿ ಡಾ.ಉಮೇಶ್ ಕಾಖಂಡಕಿ ಹಾಗೂ ಪತ್ನಿ ಅಕ್ಕಮಹಾದೇವಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

Share this article