ಮೆಕಾಲೆ ರಚಿತ ಕಾನೂನಿಗೆ ವಿದಾಯ

KannadaprabhaNewsNetwork | Published : Jun 26, 2024 12:39 AM

ಸಾರಾಂಶ

ಹೊಸದಾಗಿ ಜಾರಿಗೆ ಬರುವ ಭಾರತೀಯ ನ್ಯಾಯ ಸಂಹಿತೆ ಕೆಲ ಕಲಂಗಳು ಗಂಭೀರವಾಗಿ ಮಾರ್ಪಾಡಾಗಿವೆ. ಅಪರಾಧಕ್ಕೆ ದಂಡ ಮತ್ತು ಶಿಕ್ಷೆ ಪ್ರಮಾಣ ವಿಧಿಸುವಲ್ಲಿ ನ್ಯಾಯಾಂಗಗಳ ನ್ಯಾಯದಾನ ಪಾತ್ರ ಮಹತ್ವದ್ದಾಗಿದೆ.

ಧಾರವಾಡ:

ಭಾರತೀಯ ದಂಡ ಸಂಹಿತೆ 1850 ರಲ್ಲಿ ಲಾರ್ಡ್ ಮೆಕಾಲೆ ಅವಧಿಯಲ್ಲಿ ರಚಿತ ಕಾನೂನುಗಳು ಕೆಲವೇ ದಿನಗಳಲ್ಲಿ ವಿದಾಯ ಕಾಣಲಿವೆ. ಪರ್ಯಾಯವಾಗಿ ಭಾರತೀಯ ನ್ಯಾಯ ಸಂಹಿತೆ-2024 ಜು. 1 ರಂದು ಕೆಲ ಭಾರಿ ಬದಲಾವಣೆಯೊಂದಿಗೆ ಜಾರಿಗೆ ಬರಲಿದೆ ಎಂದು ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿ ಸಂಜುಗೌಡ ಪಾಟೀಲ ಹೇಳಿದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಕಾನೂನು ಮಂಟಪವು ಆಯೋಜಿಸಿದ್ದ ವಿಶೇಷ ಉಪನ್ಯಾಸದಲ್ಲಿ ‘ಅಪರಾಧ ತಡೆಗಟ್ಟುವಿಕೆಯಲ್ಲಿ ಕಾನೂನು ಕ್ರಮ ಮತ್ತು ನಾಗರಿಕರ ಸಾಮಾಜಿಕ ಜವಾಬ್ದಾರಿಗಳು’ ವಿಷಯ ಕುರಿತು ಮಾತನಾಡಿದರು.

ಹೊಸದಾಗಿ ಜಾರಿಗೆ ಬರುವ ಭಾರತೀಯ ನ್ಯಾಯ ಸಂಹಿತೆ ಕೆಲ ಕಲಂಗಳು ಗಂಭೀರವಾಗಿ ಮಾರ್ಪಾಡಾಗಿವೆ. ಅಪರಾಧಕ್ಕೆ ದಂಡ ಮತ್ತು ಶಿಕ್ಷೆ ಪ್ರಮಾಣ ವಿಧಿಸುವಲ್ಲಿ ನ್ಯಾಯಾಂಗಗಳ ನ್ಯಾಯದಾನ ಪಾತ್ರ ಮಹತ್ವದ್ದಾಗಿದೆ. ಆದ್ದರಿಂದ ಜನರು ಹೊಸ ಕಾನೂನುಗಳ ಕುರಿತು ಅತೀವ ಜಾಗೃತಿ ವಹಿಸಿ ಪಾಲಿಸಬೇಕು. ಅಂದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.

ನಾಗರಿಕರು ಪೊಲೀಸರೊಂದಿಗೆ ಜನಸ್ನೇಹಿಯಾಗಿರಬೇಕು. ಆಗಲೇ ಅಪರಾಧಗಳು ಕಡಿಮೆಯಾಗಲಿವೆ. ಪ್ರಸ್ತುತ ದಿನಗಳಲ್ಲಿ ಅಪರಾಧ ಕೃತ್ಯಗಳು ವಿವಿಧ ರೀತಿಯ ಹತ್ಯೆ, ನರಹತ್ಯೆ, ಗ್ಯಾಂಗ್ ಕೊಲೆ, ದರೋಡೆ, ಕಳ್ಳತನ, ಡಿಜಿಟಲ್ ಅರೆಸ್ಟ್, ಲೈಂಗಿಕ ದೌರ್ಜನ್ಯ, ಮಕ್ಕಳ ಮೇಲಿನ ಅಪರಾಧಗಳು, ನೆಟ್‌ಪ್ಲಿಕ್ಸ್, ಅಂತರ್ಜಾಲ ಅಪರಾಧಗಳು, ಭವಿಷ್ಯದಲ್ಲಿ ಹೆಚ್ಚಾಗುತ್ತಿವೆ. ಇಂತಹ ಬೀಭತ್ಸ ಹಾಗೂ ಹೀನ ಕೃತ್ಯಗಳಿಂದ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಜನಸಂಖ್ಯೆಗೆ ತಕ್ಕಂತೆ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯ ಮಧ್ಯೆಯು ಅಪರಾಧಿಗಳನ್ನು ದಸ್ತಗಿರಿ ಮಾಡುವಲ್ಲಿ ಜನರ ಸಹಕಾರದಿಂದ ಯಶಸ್ವಿಯಾಗುತ್ತಿದ್ದೇವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ, ಜಪಾನ್‌ ಶಾಲೆಗಳಲ್ಲಿ ಮಕ್ಕಳು ಶೌಚಾಲಯ ಸ್ವಚ್ಛಗೊಳಿಸುವುದು ಅಪರಾಧವಲ್ಲ. ಆದರೆ, ಭಾರತದಲ್ಲಿ ಅದು ಅಪರಾಧ ಎಂದಾದರೆ ನಾಗರಿಕರು ಇದರ ಬಗ್ಗೆ ಸೂಕ್ತ ಚಿಂತನೆ ಮಾಡುವುದು ಅತ್ಯಗತ್ಯ. ಬರುವ ದಿನಗಳಲ್ಲಿ ಯುವ ಸಮುದಾಯಕ್ಕೆ ಇಂತಹ ಜಾಗೃತಿ ಕಾರ್ಯಕ್ರಮಗಳನ್ನು ಸಂಘದಿಂದ ಆಯೋಜಿಸಲಾಗುವುದು ಎಂದರು.

ಈ ವೇಳೆ ವೀರಣ್ಣ ಒಡ್ಡೀನ, ಗುರು ಹಿರೇಮಠ, ಪ್ರಭಾವತಿ ದೇಸಾಯಿ, ಪ್ರೊ. ಎನ್.ಆರ್. ಬಾಳಿಕಾಯಿ, ಪ್ರೊ. ಮಾಲತಿ ಪಟ್ಟಣಶೆಟ್ಟಿ, ಡಾ. ಶೈಲಜಾ ಅಮರಶೆಟ್ಟಿ, ವಿಶ್ವೇಶ್ವರಿ ಹಿರೇಮಠ, ವೀಣಾ ಚಿಕ್ಕಮಠ, ಚಂದ್ರಶೇಖರ ನಾಗಶೆಟ್ಟಿ, ಶಿವಾನಂದ ಭಾವಿಕಟ್ಟಿ ಇದ್ದರು.

Share this article