ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಸಂಸ್ಥೆಗಳ ಧ್ಯೇಯವನ್ನು ಅರಿತು ನೌಕರರು ಅದನ್ನು ಕರ್ತವ್ಯ ಪ್ರಜ್ಞೆ ಹಾಗೂ ನಿಷ್ಠೆಯಿಂದ ತೊಡಗಿಸಿಕೊಂಡು ಕಾರ್ಯರೂಪಕ್ಕೆ ತಂದಾಗ ಆ ಸಂಸ್ಥೆ ಬೆಳೆಯುತ್ತದೆ. ಸಿಬ್ಬಂದಿಯನ್ನು ಬಳಸಿಕೊಂಡು ಅವರನ್ನು ಬೆಳೆಸಿಕೊಂಡು ಹೋದಲ್ಲಿ ಆ ಸಂಸ್ಥೆ ಉತ್ತಮ ಪ್ರಗತಿ ಸಾಧಿಸುವುದು ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಹೇಳಿದರು.ಅವರು ಬುಧವಾರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆ ಶಾಂತಿವನದಲ್ಲಿ ಕಳೆದ 36 ವರ್ಷ ಗಳಿಂದ ಚಿಕಿತ್ಸಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಚಂದು ನಾಯ್ಕ ಅವರ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನೌಕರರು ತೊಡಗಿಸಿಕೊಳ್ಳಲು ಕಲಿಯಬೇಕೇ ಹೊರತು ಅಡಗಿಸಿಕೊಳ್ಳುವುದನ್ನು ರೂಢಿ ಮಾಡಿಕೊಳ್ಳಬಾರದು. ಕೈಗುಣ ಎನ್ನುವುದು ದೇವರು ಕೊಟ್ಟ ವರ . ಅಂತಹ ಉತ್ತಮ ಕೈಗುಣವುಳ್ಳ ಚಂದು ನಾಯ್ಕ ಅವರು ಸಂಸ್ಥೆಯಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದಾರೆ. ಇಲ್ಲಿನ ನೌಕರರು ಸಂಸ್ಥೆಯನ್ನು ನೈತಿಕವಾಗಿ ಬೆಳೆಸುವ ಜವಾಬ್ದಾರಿಯಿಂದ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಅಭಿನಂದಿಸಿದರು.
ನಿವೃತ್ತ ನೌಕರರನ್ನು ಅಭಿನಂದಿಸಿ ಮಾತನಾಡಿದ ಉಜಿರೆ ಎಸ್‌ಡಿಎಂ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ ಭಟ್ ದೈವೀ ಶಕ್ತಿ ಇರುವ ವ್ಯಕ್ತಿಯಲ್ಲಿ ಯೋಚನೆಗಳು ಬರುತ್ತವೆ. ಅವು ಯೋಜನೆಗಳಾಗಿ ಮಾರ್ಪಟ್ಟು ಸಮಾಜಕ್ಕೆ ದಾರಿದೀಪವಾಗುತ್ತವೆ. ದೃಢಸಂಕಲ್ಪವುಳ್ಳ ವ್ಯಕ್ತಿ ಸಂಸ್ಥೆಯ ಏಳಿಗೆಗೆ ಕಾರಣನಾಗುತ್ತಾನೆ. ಪ್ರಾಮಾಣಿಕ ಸೇವೆ ಸಲ್ಲಿಸುವ ನೌಕರನಿಗೆ ಆತ್ಮತೃಪ್ತಿಯ ಜತೆ ಭಗವಂತನ ಆಶೀರ್ವಾದವೂ ಇರುತ್ತದೆ. ಸಾಮಾನ್ಯ ನೌಕರನಾಗಿ ಅಸಮಾನ್ಯ ಕಾರ್ಯವನ್ನು ಚಂದು ಅವರು ಮಾಡಿದ್ದಾರೆ. ಶಾಂತಿವನ ಬದುಕಿಗೊಂಡು ಅರ್ಥ ಕಲ್ಪಿಸುತ್ತದೆ ಎಂದು ಹೇಳಿದರು. ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಮಾತನಾಡಿ ಚಂದು ನಾಯ್ಕ ಅವರದು ಮರೆಯಲಾರದ ಸೇವೆ, ತೊರೆಯಲಾರದ ಬೆಸುಗೆಯಾಗಿದೆ ಎಂದರು.ಸನ್ಮಾನಿತ ಚಂದು ನಾಯ್ಕ ಶ್ರೀ ಕ್ಷೇತ್ರದಿಂದ ದೊರೆತ ಅಪೂರ್ವ ಅವಕಾಶ ಜನರಿಗೆ ಸೇವೆಯನ್ನು ನೀಡಲು ಕಾರಣವಾಯಿತು ಎಂದು ಕೃತಜ್ಞತೆ ವ್ಯಕ್ತಪಡಿಸಿದರು. ಆಡಳಿತಾಧಿಕಾರಿ ಜಗನ್ನಾಥ್ ಉಪಸ್ಥಿತರಿದ್ದರು. ಶಾಂತಿವನದ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಶಾಂತಿವನ ಟ್ರಸ್ಟ್ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ನಿರ್ದೇಶಕ ಡಾ.ಐ. ಶಶಿಕಾಂತ್ ಜೈನ್ ವಂದಿಸಿದರು .ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು ಉಜಿರೆ ಉಪಪ್ರಾಂಶುಪಾಲೆ ಡಾ. ಸುಜಾತಾ ಸರಳಾಯ ಸನ್ಮಾನ ಪತ್ರ ವಾಚಿಸಿದರು. ಅನನ್ಯಾ ಬೆಳ್ತಂಗಡಿ ಕಾರ್ಯಕ್ರಮ ನಿರೂಪಿಸಿದರು.
ಬಾಕ್ಸ್ಸಂಸ್ಥೆಯ ನೌಕರರು ಸಂಸ್ಥೆಯ ಎಲ್ಲ ಕಾರ್ಯಗಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಾಗ ಸಂಸ್ಥೆಯ ಸರ್ವತೋಮುಖ ಪ್ರಗತಿ ಸಾಧ್ಯವಾಗುತ್ತದೆ. ನೌಕರರು ಎಂದೂ ಅಡಗಿಸಿಕೊಳ್ಳಬಾರದು. ನೌಕರರು ಸಂಸ್ಥೆಯ ಆಸ್ತಿ.
ನೌಕರರು ಸಂಸ್ಥೆಯ ಧ್ಯೇಯವನ್ನು ಅರಿತು ಕರ್ತವ್ಯ ಪಾಲನೆ ಮಾಡಿದರೆ ಸಂಸ್ಥೆ ಬೆಳೆಯುತ್ತದೆ, ಬೆಳಗುತ್ತದೆ- ಹರ್ಷೇಂದ್ರ ಕುಮಾರ್ ---ಧರ್ಮಸ್ಥಳ ಕ್ಷೇತ್ರದ ಪ್ರತಿಯೊಂದು ಚಟುವಟಿಕೆಯ ಉದ್ದೇಶ ಎಲ್ಲರೂ ಆನಂದವಾಗಿ ಇರಬೇಕು ಎಂಬುದೇ ಆಗಿದೆ. ಪ್ರಾಮಾಣಿಕವಾಗಿ ದುಡಿದರೆ ಸಂಸ್ಥೆಯು ಅವರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದನ್ನು ಇಂದಿನ ಸಮ್ಮಾನದಿಂದ ವೇದ್ಯವಾಗುತ್ತದೆ
- ಡಾ. ಶ್ರೀಧರ ಭಟ್