ಮೈಕ್ರೋ ಫೈನಾನ್ಸ್‌ನಿಂದ ಮನೆ ಹರಾಜು ನೋಟಿಸ್‌ ರೈತ ಆತ್ಮಹತ್ಯೆ

KannadaprabhaNewsNetwork | Published : Feb 26, 2025 1:00 AM

ಸಾರಾಂಶ

ನ್ಯಾಯಾಲಯದ ಆದೇಶದಂತೆ ಮನೆ ಬಾಗಿಲಿಗೆ ಹರಾಜಿನ ನೋಟಿಸ್‌ ಅಂಟಿಸಿದ್ದರಿಂದ ಬೇಸತ್ತ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕಳ್ಳಿಮುದ್ದನಹಳ್ಳಿಯಲ್ಲಿ ಮಂಗಳವಾರ ನಡೆದಿದೆ. ಕಂದಾಯ ಇಲಾಖೆ ಶಿರಸ್ತೇದಾರ್ ಸಿ.ಸ್ವಾಮಿ, ಗ್ರಾಮ ಆಡಳಿತಾಧಿಕಾರಿ ಮೋಹನ್ ನಾಯಕ್ ಮೃತರ ಮನೆಗೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಶೀಘ್ರವಾಗಿ ದೊರಕಿಸಲು ಕ್ರಮಕೈಗೊಳ್ಳುವುದಾಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ನ್ಯಾಯಾಲಯದ ಆದೇಶದಂತೆ ಮನೆ ಬಾಗಿಲಿಗೆ ಹರಾಜಿನ ನೋಟಿಸ್‌ ಅಂಟಿಸಿದ್ದರಿಂದ ಬೇಸತ್ತ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕಳ್ಳಿಮುದ್ದನಹಳ್ಳಿಯಲ್ಲಿ ಮಂಗಳವಾರ ನಡೆದಿದೆ.

ಗ್ರಾಮದ ಕೇಶವಯ್ಯ (61) ಮೃತ ವ್ಯಕ್ತಿ. ಇವರು ವ್ಯವಸಾಯಕ್ಕಾಗಿ ಹಾಗೂ ಮನೆಕಟ್ಟಲು ಖಾಸಗಿ ಮೈಕ್ರೊ ಫೈನಾನ್ಸ್ ಕಂಪನಿ, ಬ್ಯಾಂಕ್ ಮತ್ತು ಕೈಸಾಲ ಮಾಡಿದ್ದರು. ಕಳೆದ ವರ್ಷ ಅತಿವೃಷ್ಟಿ ಪರಿಣಾಮ ಬೆಳೆದಿದ್ದ ಬೆಳೆ ಹಾನಿಯಾಗಿತ್ತು. ಎರಡು ಸಾಲದ ಕಂತುಗಳನ್ನು ಮರುಪಾವತಿಸದ ಕಾರಣಕ್ಕೆ ಸೂರ್ಯೋದಯ ಮೈಕ್ರೋ ಫೈನಾನ್ಸ್ ಕಂಪನಿಯವರು, ಸಾಲ ವಾಪಸ್ ಮಾಡುವಂತೆ ಒತ್ತಡ ಹೇರಿ ಮನೆ ಹರಾಜು ಹಾಕುವುದಾಗಿ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿದ್ದರು. ಜತೆಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ನಂತರ ನ್ಯಾಯಾಲಯ ಕೂಡ ಮನೆ ಹರಾಜಿಗೆ ಆದೇಶ ನೀಡಿತ್ತು. ಇದರಿಂದ ತೀವ್ರವಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪತ್ನಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಕಂದಾಯ ಇಲಾಖೆ ಶಿರಸ್ತೇದಾರ್ ಸಿ.ಸ್ವಾಮಿ, ಗ್ರಾಮ ಆಡಳಿತಾಧಿಕಾರಿ ಮೋಹನ್ ನಾಯಕ್ ಮೃತರ ಮನೆಗೆ ಭೇಟಿ ನೀಡಿ ಪರಿಶೀಲಿಸಿ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಶೀಘ್ರವಾಗಿ ದೊರಕಿಸಲು ಕ್ರಮಕೈಗೊಳ್ಳುವುದಾಗಿ ಹೇಳಿದರು.

ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಬಿಎಸ್‌ಪಿ ಅಧ್ಯಕ್ಷ ಅತ್ನಿ ಹರೀಶ್, ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಬೇಸತ್ತು ಕೇಶವಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ತಿಂಗಳು ಹಣ ಕಟ್ಟಲು ತಡವಾಗಿದ್ದಕ್ಕೆ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿರುವುದಲ್ಲದೆ, ಮನೆಗೆ ಬಂದು ಹಣ ಪಾವತಿಗೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ. ತಾಲೂಕು ಆಡಳಿತ ಈ ಬಗ್ಗೆ ತನಿಖೆ ನಡೆಸಿ ಮೈಕ್ರೋ ಫೈನಾನ್ಸ್ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿ ಕುಟುಂಬಸ್ಥರಿಗೆ ಸರ್ಕಾರದಿಂದ ಪರಿಹಾರ ಒದಗಿಸಿ ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಿದ್ದಾರೆ.

ಫೊಟೋ: ಕೇಶವಯ್ಯ.

Share this article