ಈ ಬಾರಿ ಉತ್ತಮ ಇಳುವರಿ, ಆದರೆ ದರ ಸಿಗದೇ ಸಂಕಷ್ಟ
ಕನ್ನಡಪ್ರಭ ವಾರ್ತೆ ಹೂವಿನಹಡಗಲಿಈ ಬಾರಿ ಈರುಳ್ಳಿಗೆ ಉತ್ತಮ ಬೆಲೆ ಸಿಗುವ ನಿರೀಕ್ಷೆಯಲ್ಲಿದ್ದ ರೈತರಿಗೆ ಈಗ ನಿರಾಸೆಯಾಗಿದೆ. ಮಾರುಕಟ್ಟೆಯಲ್ಲಿನ ಈರುಳ್ಳಿ ಬೆಲೆ ಕುಸಿದಿದ್ದು, ಬೆಳೆಗಾರರು ಕಂಗಾಲಾಗುವಂತೆ ಮಾಡಿದೆ. ಅಲ್ಲದೆ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತೆ ಮಾಡಲಿದೆ.
ತಾಲೂಕಿನ ಈರುಳ್ಳಿ ಬೆಳೆಗಾರರು ಪ್ರತಿ ವರ್ಷವೂ ಒಂದಲ್ಲ ಒಂದು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಕಳೆದ 5-6 ವರ್ಷಗಳಿಂದ ಈರುಳ್ಳಿ ಬೆಳೆಗೆ ಕೊಳೆ ರೋಗ, ಬಾಣಂತಿ ರೋಗ ಇನ್ನಿತರ ರೋಗ ಬಾಧೆಯಿಂದ ಬೆಳೆಗಾರರು ನಷ್ಟ ಅನುಭವಿಸಿದ್ದಾರೆ. ಈ ಬಾರಿ ಉತ್ತಮ ಇಳುವರಿ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಬೆಳೆಗೆ ತಕ್ಕ ಬೆಲೆ ಸಿಗದೇ ರೈತರು ಕಂಗಾಲಾಗಿದ್ದಾರೆ.ತಾಲೂಕಿನ ಇಟ್ಟಗಿ ಹೋಬಳಿ, ಹಿರೇಹಡಗಲಿ ಮತ್ತು ಹೂವಿನಹಡಗಲಿ ಹೋಬಳಿ ಸೇರಿದಂತೆ ಎಲ್ಲ ಕಡೆಗೂ ಸೇರಿ ಒಟ್ಟು 1500 ಹೆಕ್ಟೇರ್ ಈರುಳ್ಳಿ ಬೆಳೆ ಬಿತ್ತನೆಯಾಗಿದೆ. ಈಗಾಗಲೇ ಈರುಳ್ಳಿ ಕಟಾವು ಮಾಡುತ್ತಿರುವ ರೈತರಿಗೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಕಂಡು ನಿರಾಸೆ ಅನುಭವಿಸುತ್ತಿದ್ದಾರೆ.
ಇಲ್ಲಿನ ರೈತರು ಈರುಳ್ಳಿಯನ್ನು ಬೆಂಗಳೂರು ಮಾರುಕಟ್ಟೆಗೆ ಕೊಂಡೊಯ್ಯುತ್ತಾರೆ. ಈಚಿಗೆ ‘ಎ’ ಗ್ರೇಡ್ ಈರುಳ್ಳಿ ಕ್ವಿಂಟಲ್‌ಗೆ ₹500ರಿಂದ ಗರಿಷ್ಠ ₹1000 ವರೆಗೆ ಮಾರಾಟವಾಗಿದೆ. ಪ್ರತಿ ಕ್ವಿಂಟಲ್ ಈರುಳ್ಳಿಗೆ ₹1800ರಿಂದ ₹2000 ವರೆಗೂ ಉತ್ಪಾದನಾ ವೆಚ್ಚ ತಗುಲುತ್ತದೆ. ಮಾರುಕಟ್ಟೆಯ ಧಾರಣೆ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಯಾಗಿ ಸಾಲದ ಹೊರೆ ಬೆನ್ನೇರುವಂತೆ ಮಾಡಿದೆ ಎಂದು ರೈತರು ಗೋಳು ತೋಡಿಕೊಂಡಿದ್ದಾರೆ.ನಾಲ್ಕೂವರೆ ಎಕರೆಯಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದೇವೆ, ಬೆಲೆ ಕುಸಿದಿರುವುದರಿಂದ ಒಂದು ಕಾಲು ಎಕರೆ ಮಾತ್ರ ಕಟಾವು ಮಾಡಿ ಮಾರುಕಟ್ಟೆಗೆ ಕಳುಹಿಸಲು ಅಣಿಗೊಳಿಸಿದ್ದೇವೆ. ಕಟಾವು, ಗ್ರೇಡ್ ಮಾಡಲು ₹45 ಸಾವಿರ ಖರ್ಚಾಗಿದೆ. ಒಂದು ಎಕರೆ ಈರುಳ್ಳಿ ಬೆಳೆ ನಿರ್ವಹಣೆಗೆ ₹60ರಿಂದ ₹70 ಸಾವಿರ ವರೆಗೂ ಖರ್ಚು ಬರುತ್ತದೆ. ಪ್ರತಿ ಕ್ವಿಂಟಲ್‌ಗೆ ಕನಿಷ್ಠ ₹3000 ಬೆಲೆ ಸಿಕ್ಕರೆ ಒಂದಿಷ್ಟು ಆದಾಯ ರೈತರ ಕೈ ಸೇರುತ್ತದೆ. ಇಲ್ಲದಿದ್ದರೆ ಉತ್ತಮ ಫಸಲು ಬಂದರೂ ಸಾಲಗಾರರಾಗಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಉತ್ತಂಗಿ ಗ್ರಾಮದ ರೈತ ಪ್ರದೀಪ ಮಣಿಯಪ್ಪನವರ ಹೇಳಿದರು.
ಈರುಳ್ಳಿ ಬೆಲೆ ಕುಸಿತದಿಂದ ರೈತರ ಪರಿಸ್ಥಿತಿ ಶೋಚನೀಯವಾಗಿದೆ. ಕೇಂದ್ರ ಸರ್ಕಾರ ಮಾರುಕಟ್ಟೆ ಬೆಲೆ ವ್ಯತ್ಯಾಸ ಪಾವತಿ (ಪಿಡಿಪಿಎಸ್) ಯೋಜನೆಯನ್ನು ಜಾರಿಗೊಳಿಸಿ ರೈತರಿಗೆ ನೆರವಾಗಬೇಕಿದೆ ಎಂದು ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ ಎನ್.ಎಂ. ಸಿದ್ದೇಶ್ ಆಗ್ರಹಿಸಿದ್ದಾರೆ.ತಾಲೂಕು ಮಟ್ಟದಲ್ಲಿ ನಾಫೆಡ್, ಎನ್‌ಸಿಸಿಎಫ್‌ನಿಂದ ಈರುಳ್ಳಿ ಖರೀದಿ ಕೇಂದ್ರ ತೆರೆದು ₹4000 ಬೆಂಬಲ ಬೆಲೆ ನೀಡಿ ಖರೀದಿಸಬೇಕು. ಬೆಳೆ ಸಮೀಕ್ಷೆ ತ್ವರಿತಗೊಳಿಸಿ ಈರುಳ್ಳಿ ಕ್ಷೇತ್ರ ನಮೂದಿಸಬೇಕು ಎಂದು ಒತ್ತಾಯಿಸಿದ್ದಾರೆ.