ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಅಧ್ಯಕ್ಷತೆಯಲ್ಲಿ ನಡೆದ ರೈತರ ಕುಂದುಕೊರತೆಗಳ ಪರಿಶೀಲನಾ ಸಭೆಯಲ್ಲಿ ಕಂದಾಯ ಇಲಾಖೆ ಕಾರ್ಯವೈಖರಿಗೆ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ದಲ್ಲಾಳಿಗಳ ಮೂಲಕವೇ ರೈತರು ತಮ್ಮ ಕೆಲಸ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ ಎಂದು ದೂರಿದರು.
ದಾಖಲೆಗಳನ್ನು ಸರಿಪಡಿಸಿಕೊಡಲು ಎಷ್ಟು ಹಣ ನೀಡಬೇಕು ಎನ್ನುವುದನ್ನು ತಿಳಿಸಿ ಮಧ್ಯವರ್ತಿಗಳ ಹಾವಳಿ ಇಲ್ಲದೆ ನಿಮ್ಮ ಕೈಗೆ ಹಣ ನೀಡಿ ನಮ್ಮ ಕೆಲಸ ಮಾಡಿಸಿಕೊಳ್ಳುತ್ತೇವೆ. ರೈತರ ದಾಖಲೆಗಳನ್ನು ಕಚೇರಿಯಲ್ಲಿಯೇ ಕೆಡಿಸಿ ರೈತರನ್ನು ಅನಾವಶ್ಯಕವಾಗಿ ಅಲೆದಾಡುಸುತ್ತಿದ್ದೀರಿ. ಕಂದಾಯ ಕಚೇರಿ ಸೇವಾ ಕೇಂದ್ರವಾಗುವ ಬದಲು ವ್ಯಾಪಾರಿ ಕೆಂದ್ರವಾಗಿ ಪರಿವರ್ತನೆಯಾಗಿದೆ. ನೌಕರರ ದಬ್ಬಾಳಿಕೆ ಹೆಚ್ಚಾಗಿದೆ ಎಂದು ಕಿಡಿಕಾರಿದರು.ಪಟ್ಟಣದ ಎಪಿಎಂಸಿಗೆ ಸೇರಿದ ಜಾಗ ಖಾಸಗಿ ವ್ಯಕ್ತಿ ಹೆಸರಿಗೆ ಖಾತೆಯಾಗಿದೆ.ವ್ಯಕ್ತಿಗೆ ಖಾತೆ ಮಾಡಿದ ಸಿಬ್ಬಂದಿಯನ್ನು ಪತ್ತೆ ಹಚ್ಚಿ ಕ್ರಿಮಿನಲ್ ಪ್ರಕರಣ ದಾಖಲಿಸಿ ನಿಯಮಾನುಸಾರ ಸರ್ಕಾರಿ ಆಸ್ತಿ ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.
ತಾಲೂಕಿನ ತೇಗನಹಳ್ಳಿ ಬಳಿ ಪ್ರಭಾವಿ ವ್ಯಕ್ತಿ ಸರ್ಕಾರಿ ಕೆರೆಯನ್ನೇ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದ್ದಾನೆ. ಇದನ್ನು ಬಿಡಿಸಿ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸುವಂತೆ ಹೋರಾಟ ಮಾಡುತ್ತಿದ್ದರೂ ಕಂದಾಯ ಇಲಾಖೆ ಯಾವುದೇ ಕ್ರಮ ವಹಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ತಾಲೂಕಿನ ಕೊಡಲಕುಪ್ಪೆ ಗ್ರಾಮದ ಬಳಿ ಹೇಮಗಿರಿ ಕಾಲುವೆ ಹಾದು ಹೋಗಿದೆ. ನಾಲೆಯನ್ನು ಕೆಲವರು ಮುಚ್ಚಿ ಮುಂದಿನ ರೈತರ ಜಮೀನಿಗೆ ನೀರು ಹರಿದು ಹೋಗದಂತೆ ತಡೆದಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಕ್ರಮ ವಹಿಸಿಲ್ಲ ಎಂದು ಕಿಡಿಕಾರಿದರು.
ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಮುಚ್ಚಿರುವ ಸರ್ಕಾರಿ ರಸ್ತೆಯನ್ನು ತೆರವುಗೊಳಿಸಿ, ಇಲ್ಲ ಪರ್ಯಾಯ ರಸ್ತೆ ಸಂಪರ್ಕ ಕಲ್ಪಿಸುವಂತೆ ಮನವಿ ಸಲ್ಲಿಸದರೂ ಗಮನ ಹರಿಸಿಲ್ಲ. ಹೇಮಾವತಿ ನಾಲೆಗಳ ಮೇಲೆ ರಕ್ಷಣಾ ತಡೆಗೋಡೆ ನಿರ್ಮಿಸಿಲ್ಲ ಎಂದು ರೈತಮುಖಂಡರು ದೂರಿದರು.ರೈತರ ಸಮಸ್ಯೆ ಆಲಿಸಿ ಮಾತನಾಡಿದ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ನಿಮ್ಮೆಲ್ಲಾ ಅಹವಾಲುಗಳಿಗೆ ಸ್ಪಂದಿಸಿ, ಸಮಸ್ಯೆ ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಸಹಾಯಕ ಭೂ ಮಾಪನಾ ಅಧಿಕಾರಿ ಸಿದ್ದಯ್ಯ, ಉಪ ತಹಸೀಲ್ದಾರ್ ರವಿ, ವಿವಿಧ ಹೋಬಳಿಯ ಶಿರಸ್ತೇದಾರರಾದ ಚಂದ್ರಕಲಾ, ನರೇಂದ್ರ, ರಾಜಮೂರ್ತಿ, ಜಯಸಿಂಹ, ಜ್ಞಾನೇಶ್, ಸರ್ವೇ ಇಲಾಖೆಯ ತಿಮ್ಮೇಗೌಡ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿ, ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ರೈತ ಮುಖಂಡರಾದ ಕೆ.ಆರ್. ಜಯರಾಂ, ಎಲ್.ಬಿ.ಜಗದೀಶ್, ಕರೋಟಿ ತಮ್ಮಯ್ಯ, ಮುದ್ದುಕುಮಾರ್, ನಾಗೇಗೌಡ, ಚೌಡೇನಹಳ್ಳಿ ಕೃಷ್ಣೇಗೌಡ, ಕರೋಟಿ ಕೃಷ್ಣೇಗೌಡ, ನಗರೂರು ಕುಮಾರ್, ಪೊನ್ನೇಗೌಡ, ಕೃಷ್ಣಾಪುರ ರಾಜಣ್ಣ, ಮರಡಹಳ್ಳಿ ರಾಮೇಗೌಡ ಸೇರಿದಂತೆ ಹಲವರಿದ್ದರು.