ಕನ್ನಡಪ್ರಭ ವಾರ್ತೆ ಆಳಂದ ಬರದಿಂದ ಬೆಳೆ ಕೈಕೊಟ್ಟಿದೆ. ಕಬ್ಬು ಬೆಳೆದ ರೈತರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಉತ್ಪಾದನಾ ವೆಚ್ಚ ಏರುತ್ತಿದ್ದರೂ ಕಬ್ಬಿನ ದರ ಮಾತ್ರ ರೈತರ ನಿರೀಕ್ಷೆಗೆ ತಕ್ಕಂತೆ ಇಲ್ಲ. ಇಂತಹ ಸಂಕಷ್ಟದ ಸಂದರ್ಭದಲ್ಲಿ ರೈತರ ನೆರವಿಗೆ ಬರಬೇಕಾದ ಕೇಂದ್ರ ಸರ್ಕಾರ ಮೌನವಾಗಿರುವುದು ಏಕೆ? ರೈತರ ಸಮಸ್ಯೆ ಹೇಳಿಕೊಳ್ಳಲು ಹೋದವರನ್ನೇ ಪೊಲೀಸ್ ಕಾವಲಿನಲ್ಲಿ ತಡೆಯುವುದು ಯಾವ ನ್ಯಾಯ? ಎಂದು ರೈತ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸಲು ಎಫ್ಆರ್ಪಿ (ನ್ಯಾಯಸಮ್ಮತ ಮತ್ತು ಲಾಭದಾಯಕ ಬೆಲೆ) ಹಾಗೂ ಎಂಎಸ್ಪಿ (ಕನಿಷ್ಠ ಬೆಂಬಲ ಬೆಲೆ) ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಕಬ್ಬಿನ ಬೆಲೆ ನಿಗದಿಯಲ್ಲಿ ರೈತರ ಉತ್ಪಾದನಾ ವೆಚ್ಚ ಮತ್ತು ಬದುಕಿನ ಸಂಕಷ್ಟವನ್ನು ಪರಿಗಣಿಸಬೇಕು. ಇತರ ರಾಜ್ಯಗಳಲ್ಲಿ ಜಾರಿಯಲ್ಲಿರುವಂತೆ ಕರ್ನಾಟಕದಲ್ಲಿಯೂ ಎಥನಾಲ್ ಖರೀದಿಗೆ ಶೇ.80ರಷ್ಟು ಆದ್ಯತೆ ನೀಡಬೇಕು ಎಂಬ ರೈತರ ಬೇಡಿಕೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಆಳಂದ ತಾಲೂಕಿನ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ ಪ್ರಸಕ್ತ ಹಂಗಾಮು ಆರಂಭಿಸುವ ಮುನ್ನವೇ ಕಬ್ಬಿನ ದರ ಪ್ರಕಟಿಸಬೇಕು. ರೈತರಿಗೆ ನ್ಯಾಯಯುತ ಬೆಲೆ ಖಾತರಿಪಡಿಸಿದ ನಂತರವೇ ಕಾರ್ಖಾನೆ ಕಾರ್ಯಾರಂಭಿಸಬೇಕು ಎಂದು ಶ್ರೀಶೈಲ ಪಾಟೀಲ ಒತ್ತಾಯಿಸಿದರು. ರೈತರಾದ ದತ್ತಾತ್ರೆಯ ಬಾಬರೆ, ಈರಣ್ಣ ವರನಾಳೆ, ಶ್ರೀಕಾಂತ ಹತ್ತಿ, ಹುಬ್ಬಣ್ಣ ನಾಗದೆ, ಸೋಮಯ್ಯ ಸ್ವಾಮಿ, ಕಲ್ಯಾಣಿ ಪೂಜಾರಿ, ಶಿವಕುಮಾರ ನವದಗಿ ಹಾಗೂ ಪಿಕೆಪಿಎಸ್ ಅಧ್ಯಕ್ಷ ಭಾರತ ಪಾಟೀಲ ಉಪಸ್ಥಿತರಿದ್ದರು.