ಕನ್ನಡಪ್ರಭ ವಾರ್ತೆ ಮಂಡ್ಯ
ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ನ.24 ರಂದು ಗೆಜ್ಜಲಗೆರೆ ಗೋಲಿಬಾರ್ ನಲ್ಲಿ ಮಡಿದ ರೈತರ 42ನೇ ವರ್ಷದ ರೈತ ಹುತಾತ್ಮ ದಿನಾಚರಣೆ ಹಾಗೂ ತಾಲೂಕುಮಟ್ಟದ ರೈತ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ರಾಜ್ಯ ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಬೋರಾಪುರ ಶಂಕರೇಗೌಡ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರೈತ ಸಂಘದ ವತಿಯಿಂದ ಅಗಲಿದ ನಾಯಕರಾದ ಎಚ್.ಎಸ್. ರುದ್ರಪ್ಪ, ಎನ್.ಡಿ. ಸುಂದರೇಶ್, ಎಂ.ಡಿ. ನಂಜುಂಡಸ್ವಾಮಿ, ಕೆ.ಎಸ್. ಪುಟ್ಟಣ್ಣಯ್ಯ, ವಿ.ಅಶೋಕ್, ಕೋಣಸಾಲೆ ನರಸರಾಜು, ಸಾದೊಳಲು ಪುಟ್ಟಸ್ವಾಮಯ್ಯ ಅವರ ನನಪಿನಲ್ಲಿ ಕಾರ್ಯಕ್ರಮ ನಡೆಯುತ್ತಿದೆ ಎಂದು ಹೇಳಿದರು.
ಕಾರ್ಖಾನೆಗೆ ಸರಬರಾಜು ಮಾಡುವ ಕಬ್ಬಿನ ಬೆಲೆ ನೀಡುವಲ್ಲಿ ತಾರತಮ್ಯ ಧೋರಣೆ ಖಂಡಿಸಿ ಗೆಜ್ಜಲಗೆರೆಯಲ್ಲಿ 42 ವರ್ಷಗಳ ಹಿಂದೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಗುಂಡೂರಾವ್ ಸರ್ಕಾರ ಗೋಲಿಬಾರ್ ನಡೆಸಿತ್ತು. ಆ ಘಟನೆಯಲ್ಲಿ ಇಬ್ಬರು ರೈತರು ಮೃತಪಟ್ಟಿದ್ದರು. ರೈತ ಸಂಘ ಕಟ್ಟಲು ಹೋರಾಟ ನಡೆಸಿ ಅಗಲಿದ ನಾಯಕರಿಗೆ ಗೌರವ ಸಲ್ಲಿಸಲು ಸಮಾವೇಶ ಏರ್ಪಡಿಸಲಾಗಿದೆ ಎಂದರು.ಸಮಾವೇಶದ ಅಂಗವಾಗಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಧ್ವಜಾರೋಹಣ ನೆರವೇರಿಸುವುರು. ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಸಮಾವೇಶ ಉದ್ಘಾಟಿಸುವರು. ವರಿಷ್ಠರಾದ ಸುನಿತಾ ಪುಟ್ಟಣ್ಣಯ್ಯ, ಕಾರ್‍ಯಾಧ್ಯಕ್ಷ ಎ.ಎಂ. ಮಹೇಶ್ ಪ್ರಭು, ಎ. ಗೋವಿಂದರಾಜು, ಜೆ.ಎಂ. ವೀರಸಂಗಯ್ಯ, ಯದುಶೈಲಾ ಸಂಪತ್, ಉಪಾಧ್ಯಕ್ಷ ಎ.ಎಲ್. ಕೆಂಪೂಗೌಡ, ಕೆ. ಮಲ್ಲಯ್ಯ, ವಿಭಾಗೀಯ ಕಾರ್‍ಯದರ್ಶಿ ಸಿದ್ದರಾಜು, ವಿಭಾಗೀಯ ಸಂಘಟನಾ ಕಾರ್‍ಯದರ್ಶಿ ಹೊಸಕೋಟೆ ಬಸವರಾಜು, ಪ್ರಧಾನ ಕಾರ್‍ಯದರ್ಶಿ ರಮ್ಯ ರಾಜಣ್ಣ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.
2023- 24ನೇ ಸಾಲಿನಲ್ಲಿ ಕಬ್ಬಿಗೆ ಅಂದಿನ ರಾಜ್ಯ ಸರ್ಕಾರ ನಿಗದಿಪಡಿಸಿದ್ದ ಹೆಚ್ಚುವರಿ ಬೆಲೆ 150 ರು. ಕಬ್ಬು ಬೆಳೆಗಾರರಿಗೆ ಪಾವತಿಸಲು ಕ್ರಮ ವಹಿಸಬೇಕು. ಕೇಂದ್ರ ಸರ್ಕಾರ ಎಫ್‌ಆರ್‌ಪಿ ಬೆಲೆ ನಿಗದಿಪಡಿಸುವಾಗ 8.5 ಇಳುವರಿ ಮಾನದಂಡ ಅನುಸರಿಸಿ ಬೆಲೆ ನಿಗದಿಪಡಿಸಬೇಕು ಎಂದು ಸಮಾವೇಶದಲ್ಲಿ ಆಗ್ರಹಿಸಲಾಗುವುದು ಎಂದು ಹೇಳಿದರು.ಪ್ರಸಕ್ತ ಸಾಲಿಗೆ ಕನಿಷ್ಠ 4500 ರು. ಬೆಲೆ ನಿಗದಿಪಡಿಸಬೇಕು. ಭತ್ತ, ರಾಗಿ ಹಾಗೂ ಇತರೆ ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಗೆ ಖರೀದಿಸಲು ಡಿ.1ರಿಂದಲೇ ಖರೀದಿ ಕೇಂದ್ರ ತೆರೆದು ಶಾಶ್ವತವಾಗಿ ನಿರ್ವಹಣೆ ಮಾಡುವುದು ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಸಮಾವೇಶದಲ್ಲಿ ಮಂಡಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಲಿಂಗಪ್ಪಾಜಿ, ರವಿಕುಮಾರ್, ಶಂಕರ್, ಬಾಬು ಇತರರು ಇದ್ದರು.