ಪರಿಹಾರ ದಕ್ಕಿಲ್ಲವೆಂದು ದಾರಿಯನ್ನೇ ಕಿತ್ತು ಹಾಕಿದ ರೈತ!

KannadaprabhaNewsNetwork |  
Published : Jul 23, 2025, 01:48 AM ISTUpdated : Jul 23, 2025, 01:02 PM IST
salem, soil

ಸಾರಾಂಶ

ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆ ಮತ್ತು ಸೇವಾ ರಸ್ತೆ ನಿರ್ಮಾಣಕ್ಕಾಗಿ, ಭೂಮಿ ಕಳೆದುಕೊಂಡಿದ್ದಕ್ಕೆ ಪರಿಹಾರ ಸಿಕ್ಕಿಲ್ಲವೆಂದು ರೊಚ್ಚಿಗೆದ್ದು ಕಾಲುವೆ ಮುಚ್ಚಿ, ಸೇವಾ ರಸ್ತೆಯನ್ನೇ ಕಿತ್ತು ಹಾಕಿರುವ ಘಟನೆ ಜರುಗಿದೆ.

  ಹೂವಿನಹಡಗಲಿ :  ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆ ಮತ್ತು ಸೇವಾ ರಸ್ತೆ ನಿರ್ಮಾಣಕ್ಕಾಗಿ, ಭೂಮಿ ಕಳೆದುಕೊಂಡಿದ್ದಕ್ಕೆ ಪರಿಹಾರ ಸಿಕ್ಕಿಲ್ಲವೆಂದು ರೊಚ್ಚಿಗೆದ್ದು ಕಾಲುವೆ ಮುಚ್ಚಿ, ಸೇವಾ ರಸ್ತೆಯನ್ನೇ ಕಿತ್ತು ಹಾಕಿರುವ ಘಟನೆ ಜರುಗಿದೆ.

ತಾಲೂಕಿನ ಮಾಗಳ ಗ್ರಾಮದ ರೈತ ಹುಲಬಂಡಿ ಸಣ್ಣನಿಂಗಪ್ಪಗೆ ಸೇರಿದ 85 ಸೆಂಟ್ಸ್‌ ಜಮೀನು 2010-11ರಿಂದ ಈವರೆಗೂ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿದೆ. ಆದರೆ ಪರಿಹಾರ ಮಾತ್ರ ದಕ್ಕಿಲ್ಲ, ಪರಿಹಾರಕ್ಕಾಗಿ ರೈತ ಅನೇಕ ಬಾರಿ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ಅಲೆದು ಸುಸ್ತಾಗಿದ್ದಾರೆ. ಈ ಹಿಂದೆ ಕಾಲುವೆ ಮೇಲೆ ನಿರ್ಮಾಣವಾಗಿರುವ ಸೇವಾ ರಸ್ತೆಯನ್ನು ರೈತ ಬಂದ್‌ ಮಾಡಿದ್ದರು. ಆಗ ಶಾಸಕ ಕೃಷ್ಣನಾಯ್ಕ ಸೇರಿದಂತೆ ಅಧಿಕಾರಿಗಳು ರೈತನ ಮನವೊಲಿಸಿ ನೇರ ಖರೀದಿ ಪ್ರಕ್ರಿಯೆಯಲ್ಲಿ ಈ ಪ್ರಕರಣ ಬಗೆಹರಿಸಲಾಗುವುದು ಇದಕ್ಕೆ ಸಹಕಾರ ನೀಡಬೇಕೆಂದು ತಿಳಿಸಲಾಗಿತ್ತು. ಆದರೆ ಅಧಿಕಾರಿಗಳೇ ನಿಗದಿ ಮಾಡಿದ ಸಮಯದೊಳಗೆ ಪರಿಹಾರ ಸಿಗದ ಕಾರಣ ರೈತ ರೊಚ್ಚಿಗೆದ್ದು ದೊಡ್ಡ ಪ್ರಮಾಣದ ಕಾಲುವೆಯನ್ನು ಪೂರ್ಣ ಮುಚ್ಚಿದ್ದು, ಕಾಲುವೆ ಪಕ್ಕದಲ್ಲಿ ಡಾಂಬರೀಕರಣ ಮಾಡಲಾಗಿದ್ದ ಸೇವಾ ರಸ್ತೆಯನ್ನೇ ಸಂಪೂರ್ಣ ಕಿತ್ತು ಹಾಕಿದ್ದಾರೆ. ನನಗೆ ಪರಿಹಾರ ನೀಡುವವರೆಗೂ ಯಾರಿಗೂ ನನ್ನ ಜಜಮೀನಿನಲ್ಲಿ ಯಾರಿಗೂ ಓಡಾಡಲು ದಾರಿ ನೀಡುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಸಿಂಗಟಾಲೂರು ಏತ ನೀರಾವರಿ ಯೋಜನೆಯ ಹಿನ್ನೀರಿನಲ್ಲಿ ಮುಳುಗಡೆಯಾದ ಅಲ್ಲಿಪುರ ಗ್ರಾಮವನ್ನು ಸ್ಥಳಾಂತರಿಸಲಾಗಿದ್ದು, ಹೊಸ ಅಲ್ಲಿಪುರ ಮತ್ತು ಕೆ.ಅಯ್ಯನಹಳ್ಳಿ, ಮಾಗಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸಲುವಾಗಿ ಈ ರೈತರ ಜಮೀನಿನಲ್ಲಿ ನಿರ್ಮಿಸಿದ ಕಾಲುವೆ ಪಕ್ಕದಲ್ಲೇ ಸೇವಾ ರಸ್ತೆಯನ್ನು ಪುನರ್‌ ವಸತಿ ಮತ್ತು ಪುನರ್‌ ನಿರ್ಮಾಣ ಇಲಾಖೆಯಿಂದ ರಸ್ತೆಯನ್ನು ಡಾಂಬರೀಕರಣ ಮಾಡಲಾಗಿತ್ತು. ರಸ್ತೆ ಕಿತ್ತು ಹಾಕಿರುವ ಪರಿಣಾಮ ಕೆ.ಅಯ್ಯನಹಳ್ಳಿ ಗ್ರಾಮದ ಶಾಲಾ ಮಕ್ಕಳು ಅಲ್ಲಿಪುರದ ಪ್ರೌಢಶಾಲೆಗೆ ನಡೆದುಕೊಂಡು ಹೋಗುತ್ತಿದ್ದಾರೆ. ಜತೆಗೆ ಅಲ್ಲಿಪುರ ಜನರಿಗೆ ಕೆ.ಅಯ್ಯನಳ್ಳಿ ಗ್ರಾಮಕ್ಕೆ ಹೋಗಲು ರಸ್ತೆಯೇ ಇಲ್ಲದಂತಾಗಿದ್ದು ಪರದಾಡುವ ಪರಿಸ್ಥಿತಿ ಇದೆ.

ಈ ರೈತನ ಜಮೀನಿನಲ್ಲಿ ಅಲ್ಲಿಪುರದಿಂದ ಕೆ.ಅಯ್ಯನಹಳ್ಳಿಗೆ ಸಂಪರ್ಕ ಕಲ್ಪಿಸುವ ಬಂಡಿಜಾಡು ರಸ್ತೆ ನಕಾಶೆಯಲ್ಲಿ ಇದೆ. ಈ ಕೂಡಲೇ ರಸ್ತೆಯನ್ನು ಸರ್ವೇ ಮಾಡಿ, ರೈತರು ಒತ್ತುವರಿ ಮಾಡಿರುವ ದಾರಿಯನ್ನು ತೆರವು ಮಾಡಲು ಕ್ರಮ ಕೈಗೊಳ್ಳುತ್ತೇವೆಂದು ತಹಸೀಲ್ದಾರ್‌ ಜಿ.ಸಂತೋಷಕುಮಾರ ತಿಳಿಸಿದ್ದಾರೆ.

ಈಗಾಗಲೇ ಸಿಂಗಟಾಲೂರು ಏತ ನೀರಾವರಿಯ ಕಾಲುವೆಗೆ ನೀರು ಹರಿಸಲಾಗುತ್ತಿದೆ. ಆದರೆ ಈ ರೈತ ಕಾಲುವೆ ಮುಚ್ಚಿರುವ ಪರಿಣಾಮ ಕೆಳ ಭಾಗದ ರೈತರ ಜಮೀನುಗಳಿಗೆ ನೀರಿನ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಆದರಿಂದ ವಿಶೇಷ ಭೂಸ್ವಾಧೀನಾಧಿಕಾರಿ ಮತ್ತು ಜಿಲ್ಲಾಡಳಿತ ಕೂಡಲೇ ರೈತನಿಗೆ ಪರಿಹಾರ ನೀಡಿ ಕಾಲುವೆ ದುರಸ್ತಿ ಮಾಡಿ ನೀರು ಹರಿಸಬೇಕು, ಜತೆಗೆ ಸೇವಾ ರಸ್ತೆಯನ್ನು ಕೂಡಲೇ ನಿರ್ಮಾಣ ಮಾಡಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''