- ಮನೆ ಜಪ್ತಿ ನೋಟಿಸ್ ಜಾರಿಗೊಳಿಸಿದ್ದೇ ಹನುಮಂತಪ್ಪ ಆತ್ಮಹತ್ಯೆಗೆ ಕಾರಣ: ಆರೋಪ । - ವಿಕಲಚೇತನ ಪತ್ನಿ, ಇಬ್ಬರು ಮಕ್ಕಳ ಬಾಳಿಗೆ ಈಗ ಯಾರು ಆಸರೆ: ರೈತ ಸಂಘ ಆಕ್ರೋಶ
- - - ಕನ್ನಡಪ್ರಭ ವಾರ್ತೆ, ದಾವಣಗೆರೆಬರದಿಂದಾಗಿ ಬೆಳೆಗಳು ಕೈ ಕೊಟ್ಟಿದ್ದರಿಂದ ಸಾಲದ ಶೂಲಕ್ಕೆ ಹೆದರಿದ ರೈತನೊಬ್ಬ ಹೈಟೆನ್ಷನ್ ವಿದ್ಯುತ್ ಕಂಬಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಗುಡಾಳ್ ಗೊಲ್ಲರಹಟ್ಟಿ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.
ಗ್ರಾಮದ ಹನುಮಂತಪ್ಪ (42) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ವಿಕಲಚೇತನ ಪತ್ನಿ ಹಾಗೂ ಇಬ್ಬರು ಮಕ್ಕಳಿರುವ ಹನುಮಂತಪ್ಪ ತನ್ನ ಹೊಲದ ಹೈಟೆನ್ಷನ್ ವಿದ್ಯುತ್ ಕಂಬಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಚಾರ ಬಡಕುಟುಂಬದ ಮೇಲೆ ಬರಸಿಡಿಲಿನಂತೆ ಅಪ್ಪಳಿಸಿದೆ.ರೈತ ಹನುಮಂತಪ್ಪ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಸಾಲ, ಮನೆ ಮೇಲೆ ₹4 ಲಕ್ಷ ಸಾಲ, ಕುರಿಗಳ ಮೇಲೆ ₹2.60 ಲಕ್ಷ ಸಾಲ ಮಾಡಿದ್ದರು. ಸಾಲ ತೀರಿಸದ ಹಿನ್ನೆಲೆ ಮನೆ ಹರಾಜಿಗೆ ಬಂದಿದ್ದು, ಬ್ಯಾಂಕ್ ನೋಟಿಸ್‌ಗೆ ಹೆದರಿ ಸಾವಿಗೆ ಶರಣಾಗಿದ್ದಾನೆ. ಈ ಬಗ್ಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹನುಮಂತಪ್ಪನ ಶವವನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗೆ ತರಲಾಗಿತ್ತು.
ರೈತ ಸಂಘದ ನೆರವು ಬೇಡಿದ್ದ ರೈತ:ಹನುಮಂತಪ್ಪ ಅವರು ಮನೆ ಸಾಲದ ಕಂತನ್ನು ಪ್ರತಿ ತಿಂಗಳು ಕಟ್ಟಿದ್ದಾರೆ. ಕುರಿ ಸಾಲ ₹2.50 ಲಕ್ಷ ಪಡೆದಿದ್ದು, ಇದಕ್ಕೆ ಬಡ್ಡಿಯೂ ಸೇರಿ ₹3.5 ಲಕ್ಷ ಆಗಿತ್ತು. ಸಾಲ ತೀರುವಳಿ ಒನ್ ಟೈಮ್ ಸೆಟಲ್ಮೆಂಟ್‌ಗೆ ಮನವಿ ಮಾಡಿದಾಗ ₹2.10 ಲಕ್ಷಕ್ಕೆ ನಿಗದಿಯಾಗಿತ್ತು. ಈ ಹಣವನ್ನು ತುಂಬಲುಹೋದರೆ, ಇಲ್ಲಿ ನೀವು ಮನೆ ಮೇಲಿನ ಸಾಲ ತುಂಬಿದರೆ ಮಾತ್ರವೇ ಕುರಿಗಳ ಮೇಲಿನ ಲೋನ್ ಕಟ್ಟಿಸಿಕೊಳ್ಳುವುದಾಗಿ ಬ್ಯಾಂಕ್‌ನವರು ಹೇಳಿದ್ದರು. ಈ ಬಗ್ಗೆ ಹನುಮಂತಪ್ಪ ಹೆದರಿ, ರಾಜ್ಯ ರೈತ ಸಂಘದ ಗಮನಕ್ಕೂ ತಂದಿದ್ದರು. ಆದರೆ, ನೆರವು ಕೇಳಿಬಂದಿದ್ದ ಗೊಲ್ಲರಹಟ್ಟಿ ಹನುಮಂತಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶವಾಗಾರದ ಬಳಿ ರೈತಸಂಘ ಪ್ರತಿಭಟನೆ:ಸಾಲದ ವಿಚಾರವಾಗಿ ನೆರವು ಕೇಳಿಬಂದಿದ್ದ ಹನುಮಂತಪ್ಪ ಆತ್ಮಹತ್ಯೆಗೆ ಶರಣಾದ ಸುದ್ದಿ ತಿಳಿದು ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಇತರರು ದಾವಣಗೆರೆ ಜಿಲ್ಲಾಸ್ಪತ್ರೆ ಶವಾಗಾರ ಬಳಿ ಜಮಾಯಿಸಿ, ಪ್ರತಿಭಟಿಸಿದರು. ಮೃತ ಹನುಮಂತಪ್ಪನ ಮನೆಯನ್ನು ಜಪ್ತಿ ಮಾಡಲು ಜಿಲ್ಲಾಧಿಕಾರಿಗೆ ಸುಳ್ಳು ಮಾಹಿತಿ ನೀಡಿದ್ದ ಬ್ಯಾಂಕ್ ಮ್ಯಾನೇಜರ್ ಮನೆ ಜಪ್ತಿ ಆದೇಶ ಪಡೆದಿದ್ದು, ಈ ಬಗ್ಗೆ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿ ಹೋಗಿದ್ದರು. ಅಲ್ಲದೇ, ಮನೆ ಜಪ್ತಿ ಮಾಡುವುದಾಗಿ ಹೇಳಿದ್ದರಿಂದ ದಿಕ್ಕು ತೋಚದೇ ಹನುಮಂತಪ್ಪ ಸಾವಿಗೆ ಶರಣಾಗಿದ್ದಾನೆ. ಬ್ಯಾಂಕ್ ಮ್ಯಾನೇಜರ್, ಸಿಬ್ಬಂದಿಯೇ ಆತನ ಸಾವಿಗೆ ಕಾರಣ ಎಂದು ಹುಚ್ಚವ್ವನಹಳ್ಳಿ ಮಂಜುನಾಥ ಇತರರು ಆರೋಪಿಸಿದರು.
ತಾವು ಹಾಗೂ ಸಂಘದ ಮುಖಂಡರಾದ ಗುಮ್ಮನೂರು ಶಂಭಣ್ಣ, ಲೋಕೇಶ ಬ್ಯಾಂಕ್‌ನ ಎಜೆಎಂ ಶಿವಪ್ರಸಾದ್ ಬಳಿ ಹೋದರೆ ಮೃತ ರೈತ ಹನುಮಂತಪ್ಪನ ಮನೆ ಜಪ್ತಿಗೆ ಡಿಸಿ ಅವರಿಂದ ಆದೇಶ ಪಡೆದಿದ್ದು, ಮನೆ ಜಪ್ತು ಮಾಡುವುದಾಗಿ ಉಡಾಫೆಯಾಗಿ ಮಾತನಾಡಿದ್ದಾರೆ. ಮನೆ ಸಾಲ ಮರೆಮಾಚಿ, ಕೇವಲ ಕುರಿ ಲೋನ್ ತೋರಿಸಿ, ಮನೆ ಸಾಲ ವಸೂಲಿಗೆ ಬ್ಯಾಂಕ್ ಅಧಿಕಾರಿಗಳು ಮುಂದಾಗಿದ್ದರು. ಮಾತುಕತೆ ನಂತರ ಹನುಮಂತಪ್ಪನ ಮನೆ, ಕುರಿ ಸಾಲ ಮರುಪಾವತಿಗೆ ಒಪ್ಪಿದ್ದರು. ಆದರೆ, ಎರಡೂ ಸಾಲ ತೀರಿಸಲು ಆತನ ಬಳಿ ಹಣ ಇರಲಿಲ್ಲ. ಆಗ ಡಿಸಿ ಬಳಿ ಹೋಗಿ ವಿಷಯ ಪ್ರಸ್ತಾಪಿಸಿದಾಗ ಅಜಾಗರೂಕತೆಯಿಂದ ಈ ಪ್ರಕರಣವಾಗಿದೆ. ಆದೇಶ ವಾಪಸ್ ಪಡೆಯುತ್ತೇವೆಂದು ಹನುಮಂತಪ್ಪನ ಬಳಿ ಅರ್ಜಿ ಪಡೆದಿದ್ದರು ಎಂದು ತಿಳಿಸಿದರು.ಮನೆ ಜಪ್ತಿ ಆದೇಶ ಜಾರಿ ಮಾಡದಂತೆ ನಾವು ಬ್ಯಾಂಕ್ ಅಧಿಕಾರಿಗಳಿಗೆ ಹೇಳಿದರೂ ಕೇಳಲಿಲ್ಲ. ಒಂದು ಸಾಲ ತೀರಿಸಲು ಸಾಧ್ಯ. ಎರಡೂ ಆಗುವುದಿಲ್ಲವೆಂದು, ನಾಲ್ಕೈದು ದಿನ ಬ್ಯಾಂಕ್‌ಗೆ ಹೋಗದೇ ಕಾದೆವು. ಹೀಗೆ ತಾವು ಒತ್ತಡ ಹಾಕಿದರೆ ಸಾಲ ತೀರಿಸಲು ಬರಬಹುದೆಂದು ಬ್ಯಾಂಕ್ ಅಧಿಕಾರಿಗಳು ಉದ್ಧಟತನದಿಂದ ವರ್ತಿಸುತ್ತಿದ್ದಾರೆ. ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳ ವರ್ತನೆಯಿಂದ ಬೇಸತ್ತು ಭಾನುವಾರ ಬೆಳಗಿನ ಜಾವ ತನ್ನ ಜಮೀನಿನಲ್ಲೇ ಹನುಮಂತಪ್ಪ ಹಗ್ಗದಿಂದ ನೇಣು ಹಾಕಿಕೊಂಡಿದ್ದಾನೆ. ಸಂಬಂಧಿಸಿದ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲಿಯವರೆಗೂ ಶವ ಎತ್ತುವುದಿಲ್ಲ ಎಂದು ಹುಚ್ಚವ್ವನಹಳ್ಳಿ ಮಂಜುನಾಥ ಇತರರು ಪಟ್ಟುಹಿಡಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಸೈಯದ್ ಬಾನು ಬಳ್ಳಾರಿ, ತಹಸೀಲ್ದಾರ ಡಾ.ಅಶ್ವತ್ಥ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ.ಮಂಜುನಾಥ ಸ್ಥಳಕ್ಕೆ ಧಾವಿಸಿದರು. ರೈತರ ಮನವೊಲಿಸಲು ಪ್ರಯತ್ನಿಸಿದರೂ ಸಾಧ್ಯವಾಗದೇ ವಾಪಸ್ ತೆರಳಿದರು.ಬಳಿಕ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ ದೂರವಾಣಿ ಮೂಲಕ ಮಾತನಾಡಿ, ಜೂ.10ರಂದು ಬೆಳಗ್ಗೆ ಈ ಬಗ್ಗೆ ರೈತ ಮುಖಂಡರ ಸಭೆ ನಡೆಸಿ, ಸತ್ಯಾಸತ್ಯತೆ ಪರಿಶೀಲಿಸಿ, ಮುಂದಿನ ಕ್ರಮ ಕೈಗೊಳ್ಳುವುದಾಗಿ ರೈತ ಮುಖಂಡರಿಗೆ ಭರವಸೆ ನೀಡಿದರು. ಆಗ ರೈತ ಸಂಘದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಪ್ರತಿಕ್ರಿಯಿಸಿ, ಸಭೆಯಲ್ಲಿ ನ್ಯಾಯ ಸಿಗುವವರೆಗೂ ಹನುಮಂತಪ್ಪನ ಶವ ಶವಾಗಾರದಲ್ಲಿಯೇ ಇರಲಿ. ನಾವಂತೂ ನ್ಯಾಯ ಸಿಗುವವರೆಗೂ ಹನುಮಂತಪ್ಪನ ಅಂತ್ಯಕ್ರಿಯೆ ಮಾಡುವುದಿಲ್ಲ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ಗುಮ್ಮನೂರು ಶಂಭಣ್ಣ, ನಿಟುವಳ್ಳಿ ಅಂಜಿನಪ್ಪ ಪೂಜಾರ, ಹುಚ್ವವ್ವನಹಳ್ಳಿ ಪ್ರಕಾಶ, ಗುಮ್ಮನೂರು ಲೋಕೇಶ, ರುದ್ರೇಶ, ಹೂವಿನಮಡು ನಾಗರಾಜ, ಕುರ್ಕಿ ಹನುಮಂತ, ರಾಜನಹಟ್ಟಿ ರಾಜು, ಎಲೋದಹಳ್ಳಿ ರವಿ, ಅಸ್ತಾಫನಹಳ್ಳಿ ಗಂಡುಗಲಿ, ಕೋಗಲೂರು ಕುಮಾರ, ಹರಪನಹಳ್ಳಿ ಪರಶುರಾಮ, ಶಿವಪುರ ಕೃಷ್ಣ ಮೂರ್ತಿ, ಮ್ಯಾಸರಹಳ್ಳಿ ಪ್ರಭು ಸೇರಿದಂತೆ ಅನೇಕ ರೈತರು, ಗ್ರಾಮಸ್ಥರು, ಮೃತ ಹನುಮಂತಪ್ಪನ ಕುಟುಂಬ ಸದಸ್ಯರು ಇದ್ದರು.- - - -9ಕೆಡಿವಿಜಿ6: ಹನುಮಂತಪ್ಪ, ಮೃತ ರೈತ -9ಕೆಡಿವಿಜಿ7, 8, 9:
ದಾವಣಗೆರೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಮೃತ ರೈತ ಗುಡಾಳ್ ಗೊಲ್ಲರಹಟ್ಟಿ ಹನುಮಂತಪ್ಪ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಶವಾಗಾರದ ಬಳಿ ಪ್ರತಿಭಟನೆ ವೇಳೆ ಅಧಿಕಾರಿಗಳು, ರೈತ ಸಂಘ ಮುಖಂಡರ ಮಧ್ಯೆ ವಾಗ್ವಾದ ನಡೆಯಿತು.