ಡಿಕೆಶಿ ಪ್ರತಿಕೃತಿ ದಹಿಸಿ ಪ್ರತಿಭಟಿಸಲು ಸಂತ್ರಸ್ತ ರೈತರು, ಜಿಲ್ಲಾ, ತಾಲೂಕು ಘಟಕಗಳಿಗೆ ಕರೆ
ಹತ್ತು ಹಲವು ಅಕ್ರಮಗಳಿಗಾಗಿ ಸುಪ್ರೀಂ ಕೋರ್ಟ್ ಹಾಗೂ ಸದನ ಸಮಿತಿಯಿಂದ ಛೀಮಾರಿಗೆ ಒಳಗಾಗಿರುವ ನೈಸ್ ಕಂಪನಿ ಪರ ವಕಾಲತ್ತು ವಹಿಸುತ್ತಿರುವ ರೈತ ದ್ರೋಹಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕೃತಿ ದಹಿಸಿ ಪ್ರತಿಭಟಿಸುವಂತೆ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ್ ಸಂತ್ರಸ್ತ ರೈತರು ಹಾಗೂ ಸಂಘಟನೆಯ ಜಿಲ್ಲಾ - ತಾಲೂಕು ಘಟಕಗಳಿಗೆ ಕರೆ ನೀಡಿದರು.
ಬೆಂಗಳೂರು - ಮೈಸೂರು ಮಧ್ಯೆ ಹತ್ತು ಪಥಗಳ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ನಂತರ ನೈಸ್ ಯೋಜನೆ ಅಪ್ರಸ್ತುತವಾಗಿದೆ. ಯೋಜನೆ ಕಾರ್ಯಗತ ಆಗದೇ ಇದ್ದರೂ ಮೂವತ್ತು ವರ್ಷಗಳ ಹಿಂದಿನ ಕೆಐಎಡಿಬಿ ಭೂ ಸ್ವಾಧೀನವನ್ನು ಉಳಿಸಿಕೊಂಡು ಬರುತ್ತಿರುವುದು ಅನ್ಯಾಯದ ಪರಮಾವಧಿ. ನೈಸ್ ಕಂಪನಿಯ ಭೂ ಸ್ವಾಧೀನದಿಂದ ಈ ಯೋಜನೆ ವ್ಯಾಪ್ತಿಯ ರೈತರು ಅಪಾರ ಯಾತನೆ ಮತ್ತು ಸಂಕಟ ಅನುಭವಿಸುತ್ತಿದ್ದಾರೆ. ಅನ್ಯಾಯದ ಭೂ ಕಬಳಿಕೆ ವಿರುದ್ಧ ರಕ್ಷಣೆಗಾಗಿ ಕೋರ್ಟ್ ಕಚೇರಿಗಳಿಗೆ ಅಲೆದು ಲಕ್ಷಾಂತರ ರು.ಹಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು.
ತಮ್ಮ ಮಾತನ್ನು ಕೂಡಲೇ ವಾಪಸ್ಸು ಪಡೆದು ರೈತ ಸಮುದಾಯದ ಕ್ಷಮೆ ಕೋರುವಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಗಳು ಸೂಚಿಸಬೇಕು. ಟಿ.ಬಿ.ಜಯಚಂದ್ರ ಅಧ್ಯಕ್ಷತೆಯ ಸದನ ಸಮಿತಿ ಶಿಫಾರಸುಗಳನ್ನು ಜಾರಿ ಮಾಡಬೇಕು, ಬಿಎಂಐಸಿ ಯೋಜನೆ ರದ್ದುಪಡಿಸಿ ನೈಸ್ ಕಂಪನಿ ಹಗರಣ, ಭ್ರಷ್ಟಾಚಾರ, ಅಕ್ರಮಗಳನ್ನು ಶಿಕ್ಷೆಗೆ ಒಳಪಡಿಸಬೇಕು, ಹೆಚ್ಚುವರಿ ಭೂಮಿಯನ್ನು ನೈಸ್ ಕಂಪನಿಯಿಂದ ವಾಪಸ್ ಪಡೆಯುವ ಸುಪ್ರೀಂ ಕೋರ್ಟ್ ತೀರ್ಪು ಜಾರಿ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಯಶವಂತ್ ಆಗ್ರಹಿಸಿದರು.